Advertisement

ಸಾಧಿಸುವ ಛಲವಿದ್ದರೆ ಸಾಧನೆ ಸಾಧ್ಯ: ಔರಾದಕರ್‌

05:17 PM Jun 17, 2019 | Team Udayavani |

ಔರಾದ: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಿಗದಿದ್ದಾಗ ಆತ್ಮಶಕ್ತಿ ಕುಗ್ಗಿಸದೇ ಸಾಧಿಸುವ ಛಲ ಹೊಂದಿದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಡಿಜಿಪಿ ರಾಘವೇಂದ್ರ ಔರಾದಕರ್‌ ಹೇಳಿದರು.

Advertisement

ಪಟ್ಟಣದ ಅಮರೇಶ್ವರ ಕಾಲೇಜಿನಲ್ಲಿ ರವಿವಾರ ನಾಗರಿಕ ಸಮಿತಿ ಔರಾದ ಹಾಗೂ ಅಮರೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ರಾಘವೇಂದ್ರ ಔರಾದಕರ್‌ಸನ್ಮಾನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ನಮಗೆ ಮಾಹಿತಿಗಳು ಸಿಗುತ್ತಿರಲಿಲ್ಲ. ರೇಡಿಯೋ ಮೂಲಕ ಮಾಹಿತಿ ಪಡೆದು ಅದರಲ್ಲಿನ ವಿವಿಧ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೆವು. ಆ ಮೂಲಕ ಇಂದು ಈ ಉನ್ನತ ಸ್ಥಾನಕ್ಕೆ ಬಂದಿದ್ದೇನೆ. ಆದರೆ ಇಂದಿನ ವಿದ್ಯಾರ್ಥಿಗಳಿಗೆ ಪ್ರತಿ ಕ್ಷಣ ಕ್ಷಣಕ್ಕೂ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಿಂದ ಮಾಹಿತಿ ಸಿಗುತ್ತಿದೆ. ಅವುಗಳ ಸದುಪಯೋಗ ಪಡೆದುಕೊಂಡು ನಾಡಿಗೆ ಒಳ್ಳೆಯ ಕೊಡುಗೆ ನೀಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ನಮಗೆ ಸರ್ಕಾರದಿಂದ ಸಿಗುವ ಹುದ್ದೆ ಮುಖ್ಯವಲ್ಲ. ನಾವು ಮಾಡುವ ಕಾಯಕ ಮುಖ್ಯವಾದದ್ದು ಎನ್ನುವುದನ್ನು ಪ್ರತಿಯೊಬ್ಬ ಸರ್ಕಾರಿ ನೌಕರರು ತಿಳಿದುಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ನಮ್ಮಿಂದ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.

ಶಾಸಕ ಪ್ರಭು ಚವ್ಹಾಣ ಮಾತನಾಡಿ, ಗಡಿ ತಾಲೂಕಿನಲ್ಲಿ ಹುಟ್ಟಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಓದಿ ನಾಡಿನಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಔರಾದ್ಕರ್‌ ಅವರ ಆದರ್ಶ ಅರಿತು ವಿದ್ಯಾರ್ಥಿಗಳು ಅವರಂತೆ ಉನ್ನತ ಹುದ್ದೆ ಹೊಂದಬೇಕು ಎಂದು ಸಲಹೆ ನೀಡಿದರು.

Advertisement

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಪಾಲಕರು ತಮ್ಮ ಮಕ್ಕಳು ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಯಲ್ಲಿ ಓದಿದರೆ ಅವರಿಗೆ ಸರ್ಕಾರಿ ಹುದ್ದೆಗಳು ಸಿಗುವುದಿಲ್ಲ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಉನ್ನತ ಸ್ಥಾನಗಳು ಸಿಗುತ್ತವೆ ಎಂದು ತಿಳಿದುಕೊಂಡ ಪಾಲಕರಿಗೆ ಔರಾದಕರ್‌ ಅವರೇ ಉದಾರಣೆಯಾಗಿದ್ದಾರೆ. ಹಾಗಾಗಿ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು. ಗಡಿ ತಾಲೂಕಿನಲ್ಲಿರುವ ಅನೇಕ ಪ್ರತಿಭಾವಂತರನ್ನು ಗುರುತಿಸುವ ಕೆಲಸ ನಮ್ಮಿಂದ ನಡೆಯಬೇಕಾಗಿದೆ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ|ಬಸವಲಿಂಗ ಪಟ್ಟದೇವರು ಮಾತನಾಡಿ, ಔರಾದ ತಾಲೂಕಿನ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಅತಿ ಬುದ್ಧಿವಂತರಾಗಿದ್ದಾರೆ. ಅವರ ಬುದ್ಧಿ ಶಕ್ತಿಗೆ ಅನುಗುಣವಾಗಿ ಇಲ್ಲಿನ ಶಿಕ್ಷಕರು ಬೋದನೆ ಮಾಡಲು ಮುಂದಾಗಬೇಕು. ಆಗ ಮಾತ್ರ ಶಿಕ್ಷಣ ರಂಗದಲ್ಲಿ ಇನ್ನಷ್ಟು ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದರು.

ಶೈಕ್ಷಣಿಕ ರಂಗದಲ್ಲಿ ತೀರಾ ಹಿಂದುಳಿದಿರುವ ಗಡಿಯ ಔರಾದ ತಾಲೂಕಿನಲ್ಲಿನ ಶಿಕ್ಷಣ ಸುಧಾರಣೆಗಾಗಿ ಪ್ರತಿವರ್ಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೂ ಸನ್ಮಾನ ಮಾಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದರು.

ಎಸ್‌ಪಿ ಟಿ.ಶ್ರೀಧರ, ಭಾಲ್ಕಿ ಡಿವೈಎಸ್‌ಪಿ ವೆಂಕನಗೌಡ, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ದೇವರು, ಅಮರೇಶ್ವರ ಕಾಲೇಜಿ ಪ್ರಾಂಶುಪಾಲ ಶರಣಪ್ಪ ಬಿರಾದಾರ, ಶಿವರಾಜ ಅಲ್ಮಾಜೆ, ರಾಮಣ್ಣ ವಡೇಯರ್‌, ಬಂಡೆಪ್ಪ ಕಂಟೆ, ಅನೀಲಕುಮಾರ ಜಿರೋಬೆ, ಬಸವರಾಜ ದೇಶಮುಖ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next