ಸಾಗರ: 2021ಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಅಧಿಕಾರ ಮುಗಿದಿದೆ. ಈ ತನಕ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಕತ್ತು ಹಿಸುಕುವ ಕೆಲಸ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರದ್ದು ಸಂವಿಧಾನ ವಿರೋಧಿ ಧೋರಣೆ ಎನ್ನುವುದು ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಸಹ ನಿಗದಿತ ಸಮಯಕ್ಕೆ ಚುನಾವಣೆ ನಡೆಸಬೇಕು ಎಂದು ಆದೇಶ ನೀಡಿದೆ. ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ಆದೇಶವನ್ನು ಸಹ ಗಾಳಿಗೆ ತೂರಿದೆ ಎಂದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯುವ ಮಾದರಿಯಲ್ಲೇ ಜಿಲ್ಲಾ, ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಐದು ವರ್ಷ ಅವಧಿ ಮುಗಿದ ತಕ್ಷಣ ಚುನಾವಣೆ ನಡೆಯಬೇಕು ಎಂದು ಸಂವಿಧಾನದ 73 ಮತ್ತು 74ನೇ ಕಲಂಗೆ ತಿದ್ದುಪಡಿ ತಂದಿದ್ದಾರೆ ಎಂದು ಹೇಳಿದರು.
ಜನಪ್ರತಿನಿಧಿಗಳ ಚುನಾಯಿತ ಆಡಳಿತ ಐದು ವರ್ಷ ಇರಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಬಿಜೆಪಿಯವರಿಗೆ ಇದು ಗಂಭೀರ ವಿಷಯವಲ್ಲದೇ ಹೋದರೂ ಕಾಂಗ್ರೆಸ್ ಪಕ್ಷ ತಮ್ಮದೇ ಪ್ರಧಾನಿ ರಾಜೀವ್ ಗಾಂಧಿಯವರು ಜಾರಿಗೆ ತಂದಿರುವ ಕಾನೂನನ್ನು ಮೂಲೆಗುಂಪು ಮಾಡಿದೆ. ಒಂದರ್ಥದಲ್ಲಿ ಕಾಂಗ್ರೇಸ್ ಹೆತ್ತ ಕೂಸು ಅದೇ ಪಕ್ಷ ಕೆರೆಗೆ ಎಸೆದಂತೆ ಆಗಿದೆ ಎಂದು ವ್ಯಂಗ್ಯವಾಡಿದರು.
ಹತ್ತಕ್ಕೂ ಹೆಚ್ಚು ಬಾರಿ ಚುನಾವಣಾ ಆಯೋಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಜೊತೆಗೆ ಮೀಸಲಾತಿ ಘೋಷಣೆ ಅಧಿಕಾರ ಆಯೋಗಕ್ಕೆ ನೀಡುವಂತೆ ಮನವಿ ಮಾಡಿದೆ. ಆದರೆ ರಾಜ್ಯ ಸರ್ಕಾರ ಎಲ್ಲಿ ತಮ್ಮ ಶಾಸಕರ ಅಧಿಕಾರ ಮೊಟಕಾಗುತ್ತದೆಯೋ ಎಂದು ಚುನಾವಣೆ ನಡೆಸಲು ಆಸಕ್ತಿ ತೋರಿಸದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದರು.
ಇದರ ಜೊತೆಗೆ ರಾಜ್ಯದಲ್ಲಿ 400ಕ್ಕೂ ಹೆಚ್ಚು ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರ ಅವಧಿ ಮುಗಿದು ೯ ತಿಂಗಳು ಕಳೆದಿದೆ. ಕೊನೆಯ ಒಂದು ತಿಂಗಳಿನಲ್ಲಿ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಮಾಡಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಬಂದು 7-8 ತಿಂಗಳು ಕಳೆದರೂ ಮೀಸಲಾತಿ ಘೋಷಣೆ ಮಾಡಿಲ್ಲ. ಎರಡೂ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಅಧಿಕಾರದ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದ್ದು, ಇದನ್ನು ಖಂಡಿಸಿ ಮುಂದಿನ ತಿಂಗಳು ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಹಾಳು ಮಾಡುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.