ಸಾಗರ: ತಾಲೂಕಿನಲ್ಲಿ ಪ್ರಮುಖ ಜನಪ್ರತಿನಿಧಿಗಳಲ್ಲೊಬ್ಬರಾದ ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ, ನೆರೆ ಸಂಬಂಧ ಅಧಿಕಾರಿಗಳು ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಾದಿಸುವ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಹಾಲಪ್ಪ ನೆಲದ ಜಲ ಸೆಲೆ ಕಡಿಮೆಯಾಗುವ ಮುಂದಿನ ಮೂರ್‍ನಾಲ್ಕು ದಿನ ಪರಿಹಾರ ಕಾಮಗಾರಿ ಬೇಡ ಎಂದು ಅಧಿಕಾರಿಗಳಿಗೆ ಆದೇಶಿಸಿರುವುದು ಕಳೆದೆರಡು ದಿನಗಳಿಂದ ಸಾಗರ ತಾಲೂಕಿನಲ್ಲಿ ನಡೆದಿರುವ ವಿದ್ಯಮಾನ. ಅವುಗಳ ಸರಿತಪ್ಪುಗಳ ವಿಮರ್ಶೆ ಜನರ ಬಾಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದೆ. ಆದರೆ ಈ ಪ್ರಕ್ರಿಯೆಗಳಿಗೆ ನಡೆಯುತ್ತಿರುವ ಸಾತ್ವಿಕ ಪ್ರತಿಭಟನೆಯೇನೋ ಎಂಬಂತೆ ತಾಲೂಕಿನ ಶರಾವತಿ ಹಿನ್ನೀರಿನ ಕಲ್ಕಟ್ಟು ಭಾಗದ ಜನ ತಾವೇ ಮುಂದಾಗಿ ಶುದ್ಧ ಹಳ್ಳಿ ಶೈಲಿಯಲ್ಲಿ ಶನಿವಾರ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಈ ಘಟನೆ ಮತ್ತೂಮ್ಮೆ ಜನಪ್ರತಿನಿಧಿಗಳ ನಿಲುವುಗಳ ಕುರಿತು ಜಿಜ್ಞಾಸೆ ಮೂಡುವಂತೆ ಮಾಡಿದೆ.
ಸಂಪರ್ಕ ಕಡಿತದ ಕಥೆ: ತಾಲೂಕಿನ ತುಮರಿಯ ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ಕಲ್ಕಟ್ಟು ಭಾಗದ ಸೇತುವೆ ಬಂದ ನೆರೆ ನೀರಿನಲ್ಲಿ 12 ದಿನಗಳ ಹಿಂದೆ ಕೊಚ್ಚಿಹೋಯಿತು. ಇದರಿಂದ ಇಲ್ಲಿನ 15 ಮನೆಗಳಿಗೆ ಸಂಪರ್ಕ ಮಾರ್ಗವೇ ಇಲ್ಲದಂತಾಯಿತು. 75 ಜನ ವಾಸ ಮಾಡುವ ಕಲ್ಕಟ್ಟು ಭಾಗದಲ್ಲಿ 20 ವಿದ್ಯಾರ್ಥಿಗಳು ಮತ್ತು ಇಬ್ಬರು ಶೇ. 90ಕ್ಕೂ ಹೆಚ್ಚು ಸಮಸ್ಯೆಯ ಅಂಗವಿಕಲರಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ವರದಿ ತಯಾರಿಕೆಗೆ ಅನುಕೂಲವಾಯಿತೇ ಹೊರತು ಜನರಿಗಲ್ಲ. ಕೊನೆಪಕ್ಷ ಸಂಪರ್ಕ ಕಲ್ಪಿಸುವ ತುರ್ತು ಕೆಲಸವನ್ನೂ ಮಾಡಲಿಲ್ಲ. ಈ ನಡುವೆ ಕ್ಷೇತ್ರದ ಶಾಸಕ ಹಾಲಪ್ಪ ಸಾಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೆರೆ ಪರಿಹಾರ ಕಾಮಗಾರಿಯನ್ನು ಇನ್ನೂ ನಾಲ್ಕು ದಿನ ವಿಳಂಬ ಮಾಡಿರುವುದನ್ನು ಪ್ರಕಟಿಸುತ್ತಿದ್ದಂತೆ ಈ ಭಾಗದ ಜನ ನಿರ್ಧಾರ ಪ್ರಕಟಿಸಿದರು. ಸರ್ಕಾರ ಬದಲಿ ವ್ಯವಸ್ಥೆ ಮಾಡದಿದ್ದರೆ ನಾವೇ ಕಾಲುಸಂಕ ಕಟ್ಟಿಕೊಳ್ಳುತ್ತೇವೆ ಎಂದು!
ಸ್ವಾತಂತ್ರ್ಯ ದಿನಾಚರಣೆಯ ದಿನ ಸಭೆ ಸೇರಿದ ಗ್ರಾಮಸ್ಥರು ತಾವೇ ಹಳ್ಳಿ ಮಾದರಿ ಕಾಲು ಸಂಕ ನಿರ್ಮಾಣ ಮಾಡುವ ತೀರ್ಮಾನ ಬಂದರು. ಗ್ರಾಪಂ ಆಡಳಿತದ ಸಹಕಾರ ಕೇಳಿದರು. ಗ್ರಾಪಂನಿಂದ ನಿರ್ಮಾಣ ವೆಚ್ಚ ಭರಿಸುವ ಭರವಸೆ ನೀಡಲಾಯಿತು. ಶನಿವಾರ ಬೆಳಗ್ಗೆಯಿಂದ ಕಾಲುಸಂಕ ನಿರ್ಮಾಣ ಪ್ರಕ್ರಿಯೆಯನ್ನು ಜನರೇ ಕೈಗೆತ್ತಿಕೊಂಡರು. ಕೆಲಸ ಶುರು ಆಯಿತು. ಇದಕ್ಕೆ ಪೂರಕವಾಗಿ ತುಮರಿ ಗ್ರಾ ಪಂ ಆಡಳಿತ ಈ ಕೆಲಸ ಮಾಡಲು ಒಂದು ಕುಶಲ ಕೂಲಿಗಳ ತಂಡ ರಚನೆ ಮಾಡಿತ್ತು. ಆ ತಂಡ ಶುಕ್ರವಾರವೇ ಸಲಕರಣೆ ಸಿದ್ಧ ಮಾಡಿಕೊಂಡಿತ್ತು. ದುಡಿಯುವ ಜನ ಆಗಮಿಸಿ ಮರದ ದಿಮ್ಮಿಗಳು ಹಾಕಿ ಅದಕ್ಕೆ ಬಿಗಿತ ಮಾಡಿ ಶುದ್ಧ ಗ್ರಾಮ್ಯ ಶೈಲಿಯಲ್ಲಿ 3 ಸಂಕ ಹಾಕಿ, ಅಡಕೆ ದಬ್ಬೆ ಅಡ್ಡ ಜೋಡಿಸಿ, ಸಂಜೆ ಹೊತ್ತಿಗೆ 75 ಅಡಿ ಉದ್ದದ ಕಾಲು ಸಂಕ ಮಾಡಿದರು. ಅಡ್ಡಲಾಗಿ ಶೇಡ್ ನೆಟ್‌ನ ಪರದೆ ಅಳವಡಿಸಿದರು. ಸಂಜೆಯ ವೇಳೆಗೆ ಸೇತುವೆ ಸಿದ್ಧವಾಯಿತು. ಅಲ್ಲಿಯೇ ಸಿಹಿ ಹಂಚಿ ಜನ ಖುಷಿಯಿಂದ ಕಾಲುಸಂಕದ ಮೇಲೆ ಕುಣಿದಾಡಿದರು. ಗ್ರಾಪಂ ಉಪಾಧ್ಯಕ್ಷೆ ಮಂಜಮ್ಮ, ಹಿರಿಯ ಮುಖಂಡ ಕೆ.ಸಿ. ರಾಮಚಂದ್ರ, ಪ್ರಕಾಶ್, ಪ್ರಸನ್ನ ಕಿಡದುಂಬಿ, ಗ್ರಾಪಂ ಸದಸ್ಯ ಲೋಕಪಾಲ ಸಿ.ಪಿ., ವಸಂತಕುಮಾರಿ, ಲಕ್ಷ್ಮಣ ಮೇಸ್ತ್ರಿ, ರವಿಮೇಸ್ತ್ರಿ, ಸಂದೀಪ್, ಮಣಿಕಂಠ, ಸುಬ್ರಹ್ಮಣ್ಯ ಮೊದಲಾದ ನೂರಾರು ಮನಸ್ಸುಗಳು, ಹತ್ತಾರು ಜನರು ಕೈಜೋಡಿಸಿದ್ದರಿಂದ ಕಾಲುಸಂಕವಾಗಿದೆ ಎಂದು ಗ್ರಾಮಸ್ಥರು ನೆನೆಯುತ್ತಾರೆ.
ಸಂಪರ್ಕದ ತುರ್ತು ಕೆಲಸಕ್ಕೇಕೆ ಹಿಂಜರಿಕೆ?
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ, ಮನುಷ್ಯನ ನಿತ್ಯ ಜೀವನದಲ್ಲಿ ಈ ರೀತಿಯ ನೈಸರ್ಗಿಕ ಅವಘಡಗಳು ಎದುರಾದಾಗ ನಿಯಮಾವಳಿಗಳು ಎಂದು ಕತೆ ಹೇಳುತ್ತಾ ಕೂರಲು ಸಾಧ್ಯ ಇಲ್ಲ. 15 ಸಾವಿರ ರೂ. ಅಂದಾಜಿನ ಕೆಲಸ ಪಂಚಾಯತ್ ನಿಯಮ ಪ್ರಕಾರ ನಡೆಯುವುದಾದರೆ ತಿಂಗಳು ಬೇಕು. ವಾಸ್ತವವಾಗಿ ಜಿಲ್ಲಾಡಳಿತ ಮನಸ್ಸು ಮಾಡಿದ್ದರೆ ಕಬ್ಬಿಣದ ಕಾಲು ಸೇತುವೆಯನ್ನು ಎರಡು ಲಕ್ಷ ರೂ. ಬಂಡವಾಳದಲ್ಲಿ ಮಾಡಿ ಮುಗಿಸಬಹುದಿತ್ತು. ಆದರೆ ನಾವು ಅಸೀಮ ನಿರ್ಲಕ್ಷ್ಯವನ್ನು ಅನುಭವಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಹಾಲಪ್ಪ ಅವರಿಗೆ ಸಾರ್ವಜನಿಕ ಹಣ ವ್ಯರ್ಥವಾಗಬಾರದು ಎಂಬ ಕಾಳಜಿ ಇರುವುದು ಸ್ವಾಗತಾರ್ಹ. ಆದರೆ ಅವರು ಉತ್ತರ ಕರ್ನಾಟಕ, ಹಿರೇಕೆರೂರು ಭಾಗದವರೇನೂ ಅಲ್ಲ. ಅವರಿಗೆ ಸಂಪರ್ಕವೇ ಕಡಿತವಾದ ಜನಕ್ಕೆ ಸೌಕರ್ಯ ಕಲ್ಪಿಸಲೇಬೇಕು ಎಂಬ ಇಚ್ಛಾಶಕ್ತಿ ಇದ್ದರೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಮಸ್ಯೆ ಇರಲಿಲ್ಲ. ಮರಳಿಗೆ ಪರ್ಯಾಯವಾಗಿ ಎಂ- ಸ್ಯಾಂಡ್ ವ್ಯವಸ್ಥೆ ಮಾಡಬಹುದು. ಸರ್ಕಾರದ ಮಟ್ಟದಲ್ಲಿ ಸಂಗ್ರಹಿಸಿಟ್ಟ ಮರಳನ್ನು ತೀರಾ ಅಗತ್ಯ ಕಾಮಗಾರಿಗಳಿಗೆ ತುರ್ತಾಗಿ ಬಳಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ, ಶಾಸಕರಿಗೆ ಮುಖ್ಯವಾಗಿ ಶಾಸಕಾಂಗದ ಕೆಲಸಗಳ ಜವಾಬ್ದಾರಿಯನ್ನು ಸಂವಿಧಾನ ನೀಡಿದ್ದರೆ, ತಾಲೂಕು ಮಟ್ಟದ ಆಡಳಿತ ಕಾರ್ಯದ ನಿರ್ವಹಣೆ ತಾಪಂ ಅಧ್ಯಕ್ಷರದು. ಈಗ ಆಚರಣೆಗಳು ಬದಲಾಗಿ ಶಾಸಕರೇ ಮೋರಿ, ಸೇತುವೆ ಮಾಡಿಸಲು ಮುಂದಾಗುವುದಕ್ಕೂ ನಮ್ಮ ವಿರೋಧ ಏನೂ ಇಲ್ಲ. ಆದರೆ ಗೆಣಸಿನಕುಣಿ ಶೆಡ್ತಿಕೆರೆ ಭಾಗದ ಜನ ಸಂಪರ್ಕ ರಸ್ತೆಗಾಗಿ ಕಾದು, ಮನವಿ ಸಲ್ಲಿಸಿ ವಿಫಲವಾಗಿ ಕೊನೆಗೆ ತಾವೇ ಮುಂದಾಗಿ ಸಂಪರ್ಕ ವ್ಯವಸ್ಥೆ ಮಾಡಿಕೊಳ್ಳುವುದು ಎಲ್ಲ ಜನಪ್ರತಿನಿಧಿಗಳ ವಿಳಂಬ ನೀತಿಯನ್ನು ಖಂಡಿಸಿದಂತಲ್ಲವೇ ಎಂದು ಪ್ರಶ್ನಿಸುತ್ತಾರೆ.
ಸರ್ಕಾರದ ಲೆಕ್ಕದಲ್ಲಿ ಪ್ರಗತಿ ಎಂದರೆ ಯೋಜನೆಯ ಹಣ ಖರ್ಚು ಮಾಡುವುದು ಎಂದಿರುತ್ತದೆ. ಆದರೆ ನಾನು ಖರ್ಚಾಗುವ ಹಣದಿಂದ ಆಸ್ತಿ ನಿರ್ಮಾಣವಾಗುವಂತಾಗಬೇಕು ಎಂಬ ನಂಬಿಕೆಯಿಂದ ಕೆಲಸ ಮಾಡುತ್ತೇನೆ ಎಂದು ಈಗಾಗಲೇ ಹಾಲಪ್ಪ ಸ್ಪಷ್ಟಪಡಿಸಿದ್ದಾರೆ. ಶನಿವಾರದಿಂದ 48 ಗಂಟೆಗಳ ಅವಧಿಯಲ್ಲಿ ತಾಲೂಕಿನಲ್ಲಿ ಬಹುತೇಕ ಮಳೆ ಕಡಿಮೆಯಾಗಿದೆ. ಬಿಸಿಲು ಬಿಟ್ಟಿದೆ. ಇನ್ನು ಯಾವುದೇ ನೆಪ ಹೇಳದೆ ಸೋಮವಾರದಿಂದ ಸಮರೋಪಾದಿಯಲ್ಲಿ ನೆರೆ ಪರಿಹಾರ ಕೆಲಸ ಆರಂಭವಾಗುತ್ತದೆ ಎಂದು ಜನ ನಂಬಿದ್ದಾರೆ.