Advertisement

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

04:05 PM Oct 21, 2024 | sudhir |

ಸಾಗರ: ಇಲ್ಲಿನ ಮಹಾಗಣಪತಿ ದೇವಸ್ಥಾನದಿಂದ ಸೋಮವಾರ ಮಲೆನಾಡು ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮತ್ತು ಜನಾಂದೋಲನ ಜಾಥಾಕ್ಕೆ ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಹಳೆ ಊದುವ ಮೂಲಕ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಹೋರಾಟದ ಮೂಲಕ ಭೂಹಕ್ಕು ದಕ್ಕಿಸಿಕೊಳ್ಳುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೋರಾಟ ಜೈಲು ಅನ್ಯಾಯ ಬಯಲು ಎನ್ನುವ ಘೋಷವಾಕ್ಯ ನಮ್ಮ ಹೋರಾಟದ ಬದುಕಿನ ಘೋಷವಾಕ್ಯವಾಗಿತ್ತು. ನ್ಯಾಯ ಸಿಗುವವರೆಗೂ ಹೋರಾಟ ಮಾಡುವ ಗಟ್ಟಿತನ ಬೆಳೆಸಿಕೊಳ್ಳಬೇಕು. ಭೂ ಮಂಜೂರಾತಿಗಾಗಿ ಅನೇಕ ಹೋರಾಟಗಳು ಈ ನೆಲದಲ್ಲಿ ನಡೆದಿದೆ. ರೈತರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಧ್ವನಿ ಎತ್ತುವ ರೈತರಿಗೆ ತಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.

ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ರೈತರು ಭೂಹಕ್ಕು ದೊರಕಿಸಿಕೊಳ್ಳಲು ಪಕ್ಷಾತೀತ ಹೋರಾಟ ಅಗತ್ಯ. ಇದು ನಮ್ಮ ಜೀವನದ ಹೋರಾಟ, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈಗಾಗಲೇ ಚಳುವಳಿ ಮೂಲಕ ಗೇಣಿಹಕ್ಕು ಪಡೆದಿದ್ದೇವೆ. ಬಗರ್‌ಹುಕುಂ ಭೂಮಿ ಪಡೆಯಲು ಇನ್ನೊಂದು ದೊಡ್ಡಮಟ್ಟದ ಹೋರಾಟದ ಅಗತ್ಯವಿದ್ದು, ಅದಕ್ಕೆ ಶೀಘ್ರ ಚಾಲನೆ ಸಿಗಲಿದೆ. ನಾವು 64 ವರ್ಷಗಳಿಂದ ಉಳಿಸಿಕೊಂಡು ಬಂದ ಜಮೀನು ವಜಾ ಮಾಡುತ್ತಾರೆ ಎಂದರೆ ಸರ್ಕಾರದವರಿಗೆ ತಲೆ ಇದೆಯಾ ಎಂದು ಪ್ರಶ್ನಿಸಬೇಕಾಗುತ್ತದೆ. ನಾವೇನು ಬ್ರಿಟೀಷರ ಸರ್ಕಾರದಲ್ಲಿ ಇಲ್ಲ. ನಮ್ಮವರದ್ದೇ ಸರ್ಕಾರವಾಗಿದ್ದು, ರೈತರ ಭೂಹಕ್ಕು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರೈತರ ಭೂಮಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದರೆ ಕಾಗೋಡು ಚಳುವಳಿ ಮಾದರಿಯ ಇನ್ನೊಂದು ಹೋರಾಟದ ಅಗತ್ಯವಿದೆ. ರೈತರ ವಿವಿಧ ಭೂಹಕ್ಕು ಸಮಸ್ಯೆಗೆ ಎಲ್ಲಾ ಸರ್ಕಾರಗಳು ಕಾರಣವಾಗಿದೆ. ಮಲೆನಾಡು ರೈತರು ಭೂಮಿಯನ್ನು ಸಂರಕ್ಷಣೆ ಮಾಡಿಕೊಂಡು ಬಂದವರು. ತಲೆತಲಾಂತರದಿಂದ ಭೂಮಿ ಸಾಗುವಳಿ ಮಾಡಿಕೊಂಡು ಬಂದ ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡುವ ಕ್ರಮ ಸರಿಯಲ್ಲ. ರೈತ ಸಂಘ ಅತ್ಯಂತ ವ್ಯವಸ್ಥಿತವಾಗಿ ಹೋರಾಟ ಸಂಘಟಿಸಿದೆ. ಮಲೆನಾಡು ರೈತರ ಭೂಹಕ್ಕಿನ ಹೋರಾಟಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು.

Advertisement

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಮಲೆನಾಡಿನ ರೈತರು ಸಂಕಷ್ಟದ ನಡುವೆ ಸಂಘರ್ಷದ ಬದುಕು ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರು ಸೇರಿದಂತೆ ಜಿಲ್ಲೆಯ ಅನೇಕ ವಿದ್ಯುತ್ ಯೋಜನೆಗಳಿಗೆ ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಬಗರ್‌ಹುಕುಂಗೆ ಅರ್ಜಿ ಸಲ್ಲಿಸಿದ್ದರೂ ಈತನಕ ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ತಕ್ಷಣ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಂದಾಯ, ಅರಣ್ಯ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನವೆಂಬರ್ ಒಂದರಂದು ಪ್ರತ್ಯೇಕ ರಾಜ್ಯ ಘೋಷಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸೊರಬ ತಾಲೂಕು ಶೀಗೆಹಳ್ಳಿ ಗ್ರಾಮದ 100ಕ್ಕೂ ಹೆಚ್ಚು ಕುಟುಂಬಗಳಿಗೆ ಒಕ್ಕಲೆಬ್ಬಿಸಲು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ರೈತರು ಬಾರಿಕೋಲು ಬಾರಿಸಿಕೊಳ್ಳುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪ್ರತಿಭಟನೆಯಲ್ಲಿ ತೀ.ನ.ಶ್ರೀನಿವಾಸ್, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಡಾ. ರಾಜನಂದಿನಿ, ರವಿ ಕುಗ್ವೆ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಶ್ರೀಕರ್, ಪರಶುರಾಮ ಸೀಗೆಹಳ್ಳಿ, ಡಾ. ರಾಮಚಂದ್ರಪ್ಪ, ಭರ್ಮಪ್ಪ ಅಂದಾಸುರ, ಶಿವಾನಂದ ಕುಗ್ವೆ, ಎನ್.ಡಿ.ವಸಂತ ಕುಮಾರ್, ರೇವಪ್ಪ ಕೆ. ಹೊಸಕೊಪ್ಪ ಇನ್ನಿತರರು ಹಾಜರಿದ್ದರು.

ಮೈಕ್ ಎಸೆದ ಡಾ. ರಾಮಪ್ಪ ಸಿಗಂದೂರು!
ಸಾಗರ: ಗಣಪತಿ ದೇವಸ್ಥಾನ ಆವರಣದಲ್ಲಿ ರೈತ ಜಾಥಾಕ್ಕೆ ಕಾಗೋಡು ತಿಮ್ಮಪ್ಪ ಚಾಲನೆ ನೀಡಿ ಮಾತನಾಡಿದರು. ನಂತರ ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿದರು. ಸಂಘಟಕರು ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಭಾಷಣ ಮಾಡಲು ಮೈಕ್ ಕೊಟ್ಟಾಗ ಸಿಗಂದೂರು ರಾಮಪ್ಪ ಸಿಡಿದು ನಿಂತರು. ಸಂಘಟಕರ ಕೈನಿಂದ ಮೈಕ್ ಕಿತ್ತುಕೊಂಡು ಎಸೆದು ಮೆರವಣಿಗೆ ಪ್ರಾರಂಭ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಸ್ವಲ್ಪಹೊತ್ತು ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಹಾಲಪ್ಪ ಇದರ ನಡುವೆಯೂ ಮಾತನಾಡಿದರು. ಸಂಘಟಕರು ಎಲ್ಲರನ್ನೂ ಶಾಂತಗೊಳಿಸಿ ಮೆರವಣಿಗೆಯಲ್ಲಿ ಕರೆದೊಯ್ದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next