Advertisement

Sagara: ಒಂಬತ್ತನೇ ದಿನಕ್ಕೆ ಕಾಲಿರಿಸಿದ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

04:24 PM Oct 29, 2024 | Poornashri K |

ಸಾಗರ: ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘ, ಮಲೆನಾಡು ರೈತ ಹೋರಾಟ ವೇದಿಕೆ ಸೇರಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಮಲೆನಾಡು ರೈತರ ಭೂ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ ಒಂಬತ್ತನೇ ದಿನಕ್ಕೆ ಕಾಲಿರಿಸಿದೆ.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಮಲೆನಾಡಿನ ಭೂ ಹಕ್ಕು ವಂಚಿತರ ಪರ ಹೋರಾಟ ಆರಂಭಿಸಿ ಒಂಬತ್ತು ದಿನ ಕಳೆದಿದೆ. ಸರ್ಕಾರ ಮಾತುಕತೆಗೆ ಬರಲು ಲಿಖಿತವಾಗಿ ಆಹ್ವಾನ ಈ ತನಕ ನೀಡಿಲ್ಲ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಸರ್ಕಾರದ ಹಂತದಲ್ಲಿ ನಡೆಯಬೇಕು. ದೆಹಲಿ ಮಾದರಿಯಲ್ಲಿ ವರ್ಷಗಟ್ಟಲೆ ಚಳುವಳಿಯನ್ನು ಮುನ್ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಮಲೆನಾಡು ರೈತರು ತ್ಯಾಗ ಮಾಡದೆ ಹೋಗಿದ್ದರೆ ರಾಜ್ಯಕ್ಕೆ ವಿದ್ಯುತ್ ಜೊತೆಗೆ ಹೊಸಪೇಟೆವರೆಗೆ ಕೃಷಿಯೂ ಅಭಿವೃದ್ಧಿಯಾಗುತ್ತಿರಲಿಲ್ಲ. ದೇವರಾಜ ಅರಸು, ಕಾಗೋಡು ತಿಮ್ಮಪ್ಪ ಅವರು ಹಕ್ಕುಪತ್ರ ಕೊಟ್ಟ ಬಳಿಕ ಹಕ್ಕುಪತ್ರವನ್ನು ರದ್ದುಮಾಡಲು ಹಾಲಿ ಅರಣ್ಯ ಸಚಿವರು ನೋಟೀಸ್ ನೀಡಲು ಸೂಚನೆ ನೀಡಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಮಲೆನಾಡು ರೈತರನ್ನು ದರೋಡೆಕೋರರು, ಕಳ್ಳರಂತೆ ನೋಡುತ್ತಿದ್ದಾರೆ. ಮಲೆನಾಡು ರೈತರ ಭೂಹಕ್ಕಿನ ಸಮಸ್ಯೆ ಬಗೆಹರಿಸುವ ತನಕ ಕಾಗೋಡು ಚಳುವಳಿ ಮಾದರಿಯಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ನಾಡಿಗೆ ಬೆಳಕು ನೀಡಲು ಸರ್ವಸ್ವ ಕಳೆದುಕೊಳ್ಳುವ ಜೊತೆಗೆ ತಮ್ಮ ಸಂಸ್ಕೃತಿಯನ್ನೇ ಕಳೆದುಕೊಂಡಿದ್ದಾರೆ. ಏಳು ದಶಕಗಳಿಂದ ಹಕ್ಕುಪತ್ರ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಮನಸ್ಸು ಮಾಡಿದರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದು ದೊಡ್ಡದಲ್ಲ. ಕಾನೂನು ಬದಲಾವಣೆ ಮಾಡುವ ಇಚ್ಛಾಸಕ್ತಿ ಆಳುವವರಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ರೈತ ಹೋರಾಟಕ್ಕೆ ನಮ್ಮ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸುಂದರ ಸಿಂಗ್, ಪರಶುರಾಮ್ ಸಿದ್ದಿಹಳ್ಳಿ, ರಾಘವೇಂದ್ರ ಸಂಪಳ್ಳಿ, ರಾಜೇಶ್ ಬುಕ್ಕಿಬರೆ, ಚಕ್ರಪಾಣಿ, ಇಂದ್ರಕುಮಾರ್, ವೀರಣ್ಣ ಗೌಡ, ಜಿ.ಟಿ.ಸತ್ಯನಾರಾಯಣ, ಗಣೇಶ್ ತುಮರಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next