ಸಾಗರ: ನಗರ ಹಾಗೂ ಗ್ರಾಮೀಣ ಪ್ರದೇಶದ ಕಾಮಗಾರಿಗಳನ್ನು 100 ದಿನದೊಳಗೆ ಪೂರೈಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಒಂದೊಮ್ಮೆ ನಿಮ್ಮಿಂದ ನಿರೀಕ್ಷಿತ ಅವ ಧಿಯಲ್ಲಿ ಕೆಲಸ ಮುಗಿಸಲು ಸಾಧ್ಯವಾಗದೆ ಹೋದಲ್ಲಿ ಬೇರೆ ಕಡೆ ಹೋಗಲು ಸೂಚಿಸಿದ್ದೇನೆ ಎಂದು ಶಾಸಕ ಎಚ್.ಹಾಲಪ್ಪ ತಿಳಿಸಿದರು.
ಇಲ್ಲಿನ ನಗರಸಭೆ ಕಚೇರಿಯಲ್ಲಿ ಶುಕ್ರವಾರ ಅಭಿವೃದ್ಧಿ ಕಾಮಗಾರಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಸುಮಾರು 400 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ತ್ವರಿತವಾಗಿ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಲು ತಿಳಿಸಲಾಗಿದೆ. ಮುಂದಿನ 100 ದಿನಗಳ ಕಾಲ ಲೋಕೋಪಯೋಗಿ, ಜಿಪಂ, ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಅಭಿಯಂತರರು ರಜೆ ಹಾಕುವಂತೆ ಇಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ಮಾಡಿದ್ದು, ಒಂದೊಮ್ಮೆ ಅ ಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅವರಿಗೆ ಅಮಾನತು ಆದೇಶ ನೀಡುವುದಾಗಿ ತಿಳಿಸಿದ್ದಾರೆ.
ನಮ್ಮ ಕ್ಷೇತ್ರವ್ಯಾಪ್ತಿಯ ಅಧಿಕಾರಿಗಳು ಅತ್ಯಂತ ಚಟುವಟಿಕೆಯಿಂದ ಇದ್ದು ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು. ಮಳೆಹಾನಿಯಿಂದ ಹಾಳಾದ ಗ್ರಾಮೀಣ ಪ್ರದೇಶದ ಕಾಮಗಾರಿಗಳ ಪುನರ್ ನಿರ್ಮಾಣಕ್ಕೆ ಸರ್ಕಾರ ಮೊದಲ ಹಂತದಲ್ಲಿ 6 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಗರ ಪ್ರದೇಶಕ್ಕೆ ಮೊದಲ ಹಂತದಲ್ಲಿ 2 ಕೋಟಿ ರೂ. ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.
13 ಸ್ಥಾನ ಗೆಲುವು: ಉಪ ಚುನಾವಣೆಯಲ್ಲಿ ಬಿಜೆಪಿ 12 ರಿಂದ 13 ಸ್ಥಾನ ಗೆಲ್ಲುವುದು ಖಚಿತ. ಯಡಿಯೂರಪ್ಪನವರು 15 ಕ್ಷೇತ್ರಗಳನ್ನು ಗೆಲ್ಲಲು ಅಹೋರಾತ್ರಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ನಾನು ಸಹ ಯಲ್ಲಾಪುರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೇನೆ. ಎಲ್ಲ ಕಡೆಯೂ ಬಿಜೆಪಿ ಪರವಾದ ವಾತಾವರಣವಿದೆ.
ಬಯಲು ಸೀಮೆಯ 7 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಗಳಿಸುತ್ತದೆ. ಯಡಿಯೂರಪ್ಪನವರ ಅಭಿವೃದ್ಧಿಪರ ಕಾರ್ಯಕ್ರಮಗಳು ಚುನಾವಣೆ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. ಹಿಂದೆಯೆ ನಾವು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಒಂದು ಓಟು, ಎರಡು ಸರ್ಕಾರ ಎಂದು ಜನರ ಬಳಿ ಮತಯಾಚನೆ ಮಾಡಿದ್ದೇವೆ. ಜನರು ನಮ್ಮ ಮಾತಿಗೆ ಬೆಲೆ ಕೊಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿತ್ತು. ಒಂದೊಮ್ಮೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೆ ಅವರು ದೊಡ್ಡ ವ್ಯಕ್ತಿಯಾಗುತ್ತಿದ್ದರು. ಹಿಂದೆ ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದೆ ತಪ್ಪು ಮಾಡಿದ್ದರು. ಈ ಬಾರಿ ಲೋಕಸಭೆಯಲ್ಲಿ ಹೀನಾಯ ಸೋಲುಂಡಾಗ ರಾಜೀನಾಮೆ ನೀಡದೆ ತಪ್ಪು ಮಾಡಿದ್ದರು.
ಜನಾದೇಶಕ್ಕೆ ವಿರುದ್ಧವಾಗಿ ನಡೆದಿರುವುದೇ ಉಪ ಚುನಾವಣೆ ಬರಲು ಕಾರಣವಾಗಿದೆ. ಉಪ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಆಶೀರ್ವದಿಸುವ ಮೂಲಕ ಪೂರ್ಣ ಪ್ರಮಾಣದ ಬಹುಮತ ನೀಡಲಿದ್ದಾರೆ ಎಂದರು.