Advertisement

ಸಾಗರ ತಾಲೂಕಿನಲ್ಲಿ ಅಡಕೆಗೆ ವ್ಯಾಪಕ ಕೊಳೆಬಾಧೆ

11:36 AM Aug 17, 2019 | Naveen |

ಸಾಗರ: ಒಂದೆಡೆ ಆಗಸ್ಟ್‌ ಮೂರರಿಂದ ವಾರ ಕಾಲ ಸುರಿದ ಆಶ್ಲೇಷಾ ಮಳೆಯಿಂದ ನೀರು ನುಗ್ಗಿ, ಧರೆ ಉರುಳಿ ಅಡಕೆ ತೋಟಗಳು ತೀವ್ರ ಹಾನಿಯಾಗುವುದನ್ನು ಕಂಡು ತತ್ತರಿಸಿದ್ದ ತಾಲೂಕಿನ ಅಡಕೆ ಬೆಳೆಗಾರ, ಮಳೆಯ ರಭಸ ಕಡಿಮೆಯಾಗುತ್ತಿದ್ದುದನ್ನು ನೋಡಿ ನಿಟ್ಟುಸಿರು ಬಿಡುವ ವೇಳೆಯಲ್ಲಿಯೇ ಕೊಳೆ ರೋಗ ಆವರಿಸಿದ್ದು ಅಡಕೆ ದೊಡ್ಡ ಪ್ರಮಾಣದಲ್ಲಿ ನೆಲಕಚ್ಚುತ್ತಿರುವುದು ರೈತರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.

Advertisement

ತಾಲೂಕಿನ ತಾಳಗುಪ್ಪ ಹೋಬಳಿಯ ಹೊಸಳ್ಳಿ, ಹಂಸಗಾರು ಭಾಗದಲ್ಲಿ ಈ ವರ್ಷ ಬಂದಿರುವ ಕೊಳೆ ರೋಗ ಕಳೆದೆರಡು ದಶಕಗಳಲ್ಲಿಯೂ ಬಂದಿರಲಿಲ್ಲ. ಹೊಸಳ್ಳಿಯ ಬಿ.ಎನ್‌. ರಾಜಾರಾಮ, ಎಚ್.ಎನ್‌. ಅಶೋಕ, ಗೋಟಗಾರಿನ ಅರುಣ ಜಿ.ಜಿ., ಅರೆಹದದ ಮಂಜುನಾಥ್‌, ಹೊಸಳ್ಳಿಯ ಜಗದೀಶ್‌ ಬಿ.ಆರ್‌. ಮೊದಲಾದವರ ತೋಟದಲ್ಲಿ ಅಡಕೆ ಮರದ ಮೇಲೆ ಇರಬೇಕಾದ ಅಡಕೆಯಷ್ಟೂ ನೆಲದಲ್ಲಿದೆ. ಅಡಕೆ ಮರದಲ್ಲಿ ಒಂದಡಿಕೆ ಉಳಿಯದಂತೆ ನೆಲಕ್ಕೆ ಬೀಳುತ್ತಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಇದೇ ಪರಿಸ್ಥಿತಿ ಇಕ್ಕೇರಿ ಸಮೀಪದ ಸುಳ್ಮನೆ, ಮಾವಿನಸರ ಮೊದಲಾದ ಕಡೆಗಳಲ್ಲಿಯೂ ಕಾಣಿಸಿದೆ. ಸುಳ್ಮನೆಯ ಗುರುಮೂರ್ತಿ, ಚಿಪಿÛ ಲಿಂಗದಹಳ್ಳಿಯ ವರದಭಟ್, ವರದಾಮೂಲದ ವಿ.ಟಿ. ನಾಗರಾಜ, ಶೆಡ್ತಿಕೆರೆಯ ಎಸ್‌.ಕೆ. ಚಂದ್ರಶೇಖರ್‌, ವಿದ್ಯಾಧರ, ಎಸ್‌.ಎಸ್‌. ಶ್ರೀಕಾಂತ್‌ ಮೊದಲಾದವರ ತೋಟದಲ್ಲಿಯೂ ಇದೇ ಕಥೆ. ತಾಲೂಕಿನ ಬಹುಪಾಲು ಅಡಕೆ ತೋಟಗಳಲ್ಲಿ ತುಸು ಕಡಿಮೆ ಅಥವಾ ಅದಕ್ಕಿಂತ ಹೆಚ್ಚು ಅಡಕೆ ಉದುರುವ ದೃಶ್ಯ ಕಾಣುತ್ತಿದೆ.

ಈಗಾಗಲೇ ವಿಷಯ ಶಾಸಕ ಹಾಲಪ್ಪ ಅವರ ಗಮನಕ್ಕೂ ಬಂದಿದೆ. ನಾವು ತಾಲೂಕಿನ ಸಂಪೂರ್ಣ ಬೆಳೆಹಾನಿ ಪರಿಸ್ಥಿತಿಯ ಕುರಿತು ವಿಡಿಯೋ ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಕೊಳೆ ರೋಗ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪದ ನಿಧಿಯಿಂದ ಸಹಾಯ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕಳೆದ ವರ್ಷ ಕೂಡ ನಾಲ್ಕಾರು ಸಭೆ, ಒತ್ತಡ ತಂತ್ರಗಳನ್ನು ರೂಪಿಸಿ 18 ಕೋಟಿ ರೂ.ಗಳನ್ನು ಕೊಳೆ ಹಾನಿಯ ಪರಿಹಾರಕ್ಕೆ ಮಂಜೂರು ಮಾಡಿಸಲಾಗಿತ್ತು. ಆ ಮೊತ್ತದಲ್ಲಿಯೇ ಬಾಕಿ ಇರುವ 8.01 ಕೋಟಿ ರೂ. ಬಿಡುಗಡೆ ಮಾಡಲು ಒತ್ತಾಯಿಸುವ ಕೆಲಸವನ್ನು ತಾಪಂ ಮಾಡಿದ್ದು, ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ. ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್‌. ಜಯಂತ್‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಕ್ಕೆ ಆಗ್ರಹ ಮಂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಡಕೆ ಕೊಳೆ ರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ರೈತರು 30 ದಿನಗಳ ಅವಧಿಯಲ್ಲಿ ಎರಡೆರಡು ಬಾರಿ ಬೋರ್ಡೊ ಸಿಂಪಡನೆ ಮಾಡಿಯೂ ಕೊಳೆ ಬಂದಿದೆ. ಅಡಕೆ ಸಂಶೋಧನಾ ಕೇಂದ್ರ ಕೊಳೆ ರೋಗವನ್ನು ಗಂಭೀರವಾಗಿಯೇ ಪರಿಗಣಿಸಿಲ್ಲ. ಮಳೆಗಾಲದ ಸಂದರ್ಭದಲ್ಲಿ ಮಣ್ಣಿನಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯಾಗಿ ಕೊಳೆ ರೋಗ ಬರುತ್ತದೆಯೇ ಎಂಬುದು ಕೂಡ ಸಂಶೋಧನೆಯಾಗಬೇಕು. ಈ ಕೃಷಿ ವಿಜ್ಞಾನಿಗಳು ತೋಟಗಳಲ್ಲಿ ಪರಿಶೀಲನೆ ಮಾಡಿ, ಮಣ್ಣು ಪರೀಕ್ಷೆ ವರದಿ ಮೊದಲಾದ ಆಧಾರಗಳ ಮೂಲಕ ಪರಿಣಾಮಕಾರಿ ಸಲಹೆ ನೀಡಬೇಕಾಗಿದೆ ಎಂದು ಕೃಷಿಕ ಜಯಪ್ರಕಾಶ್‌ ಗೋಳಿಕೊಪ್ಪ ಪ್ರತಿಪಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next