Advertisement

Sagara ಈಡಿಗ ಸಮಾಜಕ್ಕೆ ಎರಡು ಮಂತ್ರಿ ಸ್ಥಾನ ನೀಡಿ; ಹಾಲಪ್ಪ ಒತ್ತಾಯ

05:04 PM Dec 09, 2023 | Shreeram Nayak |

ಸಾಗರ: ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಸಮಾಜಕ್ಕೆ ಎರಡು ಮಂತ್ರಿ ಸ್ಥಾನವನ್ನು ನೀಡಲಾಗಿತ್ತು. ಮಲೆನಾಡಿಗೆ ಮತ್ತೊಂದು ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಈಗಲೂ ಸಮಾಜದ ಪರವಾಗಿ ಆಗ್ರಹಿಸುತ್ತೇನೆ ಎಂದು ಮಾಜಿ ಸಚಿವ ಎಚ್. ಹಾಲಪ್ಪ ಹರತಾಳು ಸರ್ಕಾರವನ್ನು ಆಗ್ರಹಿಸಿದರು.

Advertisement

ನಗರದ ತಮ್ಮ ನಿವಾಸದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಡಿಗರ ನಿಗಮ ಮಂಡಳಿಯು ಬಿಜೆಪಿ ಅಧಿಕಾರದಲ್ಲಿರುವಾಗಲೇ ಸ್ಥಾಪನೆಯಾಗಿದೆ. ಈ ಮಂಡಳಿಗೆ ಸರಿಯಾದ ಸ್ಥಾನಮಾನವನ್ನು ನೀಡಿ ಹೆಚ್ಚಿನ ಅನುದಾನವನ್ನು ನೀಡಬೇಕು. ಇದಕ್ಕೆ ಸಮಾಜದ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ ಅಧ್ಯಕ್ಷರನ್ನಾಗಿ ಮಾಡಬೇಕು. ನಮ್ಮ ಸಮಾಜಕ್ಕೆ ರಾಜ್ಯ ಮಂತ್ರಿಮಂಡಲದಲ್ಲಿ ಎರಡು ಮಂತ್ರಿ ಸ್ಥಾನವನ್ನು ನೀಡಬೇಕು. ಅಲ್ಲದೆ ನಿಗಮ ಮಂಡಳಿಯಲ್ಲಿಯೂ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಮಂತ್ರಿ ಸ್ಥಾನ ಕೇಳುತ್ತಿರುವುದು ತಪ್ಪಿಲ್ಲ:
ಈಗಿನ ಸರ್ಕಾರದಲ್ಲಿ ನಮ್ಮ ಸಮಾಜದ ಶಾಸಕರು ಮಂತ್ರಿ ಸ್ಥಾನ ಕೇಳುತ್ತಿದ್ದಾರೆ. ಇದರಲ್ಲಿ ಯಾವ ತಪ್ಪು ಕೂಡ ಇಲ್ಲ. ನಿಜವಾಗಿಯೂ ಮಂತ್ರಿ ಸ್ಥಾನ ನಮ್ಮ ಸಮಾಜಕ್ಕೆ ನೀಡದೆ ಸರ್ಕಾರ ವಂಚನೆ ಮಾಡುತ್ತಿದೆ. ಈಡಿಗ ಸಮಾವೇಶದ ಮೂಲಕ ಮಂತ್ರಿ ಸ್ಥಾನ ನಮ್ಮ ಸಮಾಜಕ್ಕೆ ಸಿಗಬೇಕು ಎಂದು ಆಗ್ರಹಿಸಬೇಕಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ರಾಜ್ಯ ಈಡಿಗರ ಸಮಾವೇಶ ಯಶಸ್ವಿಯಾಗಲಿ:
ಬೆಂಗಳೂರಿನಲ್ಲಿ ಭಾನುವಾರ ನಡೆಯುತ್ತಿರುವ ರಾಜ್ಯ ಈಡಿಗರ ಸಮಾವೇಶ ಅತ್ಯಂತ ಯಶಸ್ವಿಯಾಗಲಿ. ಅಲ್ಲದೆ ಈಡಿಗರ ಮುಖ್ಯವಾದ ಬೇಡಿಕೆಗಳನ್ನು ಸರ್ಕಾರ ಪೂರ್ಣಗೊಳಿಸುವಂತಾಗಲಿ ಎಂದು ಸಮಾವೇಶಕ್ಕೆ ಶುಭಾಶಯವನ್ನು ಕೋರುತ್ತೇನೆ. ಈಡಿಗರ ಸಮಾವೇಶ ಎನ್ನುವುದು ಮಲೆನಾಡಿಗರ ಆಶಾಕಿರಣವಾಗಬೇಕು. ಈ ಸಮಾವೇಶದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಜರಿದ್ದು ದೊಡ್ಡ ಮಟ್ಟದಲ್ಲಿ ಸಮಾಜದ ಜನರು ಭಾಗವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ ಅನೇಕ ಬೇಡಿಕೆಗಳು ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡೇರಿಸಬೇಕು ಎಂದು ಸಮಾಜದ ಪರವಾಗಿ ನಾನು ಆಗ್ರಹಿಸುತ್ತೇನೆ ಎಂದು ಹೇಳಿದರು.

ಪಕ್ಷಾತೀತವಾಗಿ ಸಮಾವೇಶ ನಡೆಯಬೇಕಿತ್ತು:
ಈಡಿಗರ ಸಮಾವೇಶ ಪಕ್ಷಾತೀತವಾಗಿ ನಡೆಯಬೇಕಿತ್ತು. ಇದೇ ಮೊದಲ ಬಾರಿ ದೊಡ್ಡ ಸಂಖ್ಯೆಯಲ್ಲಿ ಈಡಿಗರು ಸಮಾವೇಶದಲ್ಲಿ ಹಾಜರಿರುತ್ತಾರೆ. ಇಂತಹ ಸಂದರ್ಭದಲ್ಲಿ ಕೇವಲ ಒಂದೇ ಪಕ್ಷದ ಐಕಾನ್ ಆಗದೆ ಪಕ್ಷಾತೀತವಾಗಿ ರಾಜಕೀಯ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡಬೇಕಿತ್ತು. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಜೆಡಿಎಸ್ ಎಚ್.ಡಿ. ಕುಮಾರಸ್ವಾಮಿಯನ್ನು ಸಮಾವೇಶಕ್ಕೆ ಕರೆದು ಗೌರವಿಸಿದ್ದರೆ ನಮ್ಮ ಹಕ್ಕೋತ್ತಾಯದ ಕನಸು ಈಡೇರುವ ಸಾಧ್ಯತೆ ಇತ್ತು ಎಂದರು.

Advertisement

ಅಲ್ಲದೆ ಮಲೆನಾಡಿನ ಬಹುದೊಡ್ಡ ಸಮಸ್ಯೆಯಾದ ಮುಳುಗಡೆ ಸಂತ್ರಸ್ಥರ ಸಮಸ್ಯೆ ಹಾಗೂ ಅರಣ್ಯ ಸಮಸ್ಯೆ ಇತ್ಯಾದಿಗಳು ರ‍್ಯೆತರ ಬದುಕಿಗೆ ಮಾರಕವಾಗಿದೆ. ಬಹುತೇಕ ಈಡಿಗ ಸಮಾಜದ ರೈತರು ಇಂತಹ ಕಾನೂನಿನಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ. ರಾಜನಂದಿನಿ, ರತ್ನಾಕರ್ ಹೊನಗೋಡು, ಅರುಣ್ ಕುಗ್ವೆ, ದೇವೇಂದ್ರಪ್ಪ, ರೇವಪ್ಪ, ಸುವರ್ಣ ಟೀಕಪ್ಪ, ಭೈರಪ್ಪ, ಗೋಪಾಲ ಬೆಳಲಮಕ್ಕಿ, ರವೀಂದ್ರ ಬಿ.ಟಿ. ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next