Advertisement

ಪ್ರಾದೇಶಿಕ ಭಾಷೆಗಳಲ್ಲಿ ಮೌಲ್ಯಯುತ ಚಿತ್ರ ನಿರ್ಮಾಣ

03:06 PM Oct 06, 2019 | Naveen |

ಸಾಗರ: ಪ್ರತಿ ವರ್ಷ ಎರಡು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಒದಗಿಸುವ ಭಾರತೀಯ ಚಿತ್ರರಂಗ ವಿಶ್ವದ ದೃಷ್ಟಿಯಲ್ಲಿ ಕೇವಲ ಬಾಲಿವುಡ್‌ಗೆ ಸೀಮಿತವಾಗಿದೆ. ಆದರೆ ಇವತ್ತು ಕಡಿಮೆ ಬಜೆಟ್‌ ಬಳಸಿ ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ದೊಡ್ಡ ಪ್ರಮಾಣದ ಮೌಲ್ಯಯುತ ಸಿನೆಮಾಗಳ ತಯಾರಿ ನಡೆದಿದೆ. ಆದರೆ ಜಗತ್ತು ಅದನ್ನು ಗಮನಿಸಲಾಗುತ್ತಿಲ್ಲ ಎಂದು ಮುಂಬೈನ ಚಲನಚಿತ್ರ ನಿರ್ದೇಶಕ, ಕ್ರಿಯಾ ವಿವಿಯ ಚಲನಚಿತ್ರ ತಜ್ಞ ಕೆ. ಹರಿಹರನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಹೆಗ್ಗೋಡಿನ ನೀನಾಸಂನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅವರು ಶನಿವಾರ ‘ಚಲನಚಿತ್ರಗಳಲ್ಲಿನ ಅನುಭವ’ ವಿಷಯ ಕುರಿತು ಮಾತನಾಡಿದರು. ಭಾರತದಂತಹ ಪ್ರಜಾಪ್ರಭುತ್ವ ಸಿದ್ಧಾಂತದ ದೇಶಗಳಿಗೆ ಚಲನಚಿತ್ರ ಮಾಧ್ಯಮ ಬಹಳ ಹೊಂದಿಕೆಯಾಗುತ್ತದೆ. ಪ್ರಜಾಪ್ರಭುತ್ವವಿಲ್ಲದ ದೇಶಗಳಲ್ಲಿ ಚಲನಚಿತ್ರ ಪರಿಣಾಮಕಾರಿ ಮಾಧ್ಯಮವಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವ ಇಲ್ಲದ ಬೇರೆ ಮಾದರಿಯ ಆಡಳಿತದ ದೇಶಗಳಲ್ಲಿ ಚಲನಚಿತ್ರ ನಿಯಂತ್ರಣದಲ್ಲಿರುತ್ತದೆ. ಚೀನಾದಲ್ಲಿ ವಾರ್ಷಿಕ ಕೇವಲ 234 ಚಲನಚಿತ್ರಗಳು
ಬಿಡುಗಡೆಯಾಗುತ್ತವೆ. ಇರಾನ್‌ ದೇಶದ ಚಲನಚಿತ್ರಗಳಲ್ಲಿ ಗಂಡು- ಹೆಣ್ಣು ಸಂಬಂಧದ ಚಲನಚಿತ್ರಗಳ ನಿಷೇಧ ಇದೆ. ಭಾರತದ ಚಲನಚಿತ್ರಗಳಲ್ಲಿ ಅನನ್ಯತೆ ಮತ್ತು ಸಮಸ್ಯಾತ್ಮಕ ರಾಷ್ಟ್ರೀಯತೆಯನ್ನು ಹೇಗೆ ಮತ್ತು ಏಕೆ ಜಾರಿಗೆ ತರಲಾಗುತ್ತದೆ ಎಂಬುದನ್ನು ಗ್ರಹಿಸಲು ವಿಶಾಲವಾದ ಸಾಮಾಜಿಕ ರಾಜಕೀಯ ದೃಷ್ಟಿಕೋನ ಅಗತ್ಯ ಎಂದರು.

ಚಲನಚಿತ್ರವು ತಂತ್ರಜ್ಞಾನ ಪ್ರಭಾವಿತ ಕಲಾಮಾಧ್ಯಮವಾಗಿದೆ. ಭಾರತೀಯ ಚಲನಚಿತ್ರರಂಗವು ಪ್ರೇಕ್ಷಕರ ಪ್ರಭಾ ವಲಯದಲ್ಲಿದೆ. ದಕ್ಷಿಣ ಭಾರತದ 4 ಭಾಷೆ ಸೇರಿದಂತೆ ಭಾರತೀಯ 16 ಭಾಷೆಗಳಲ್ಲಿ ವಾರ್ಷಿಕ 2000 ಚಲನಚಿತ್ರಗಳು ನಿರ್ಮಾಣವಾಗುತ್ತವೆ. 13500 ಚಲನಚಿತ್ರ ಮಂದಿರಗಳಿದ್ದು, ಅವುಗಳಲ್ಲಿ ಕೇವಲ 1700 ಮಾತ್ರ ಮಲ್ಟಿಫ್ಲೆಕಸ್‌ ಚಿತ್ರಮಂದಿರಗಳಾಗಿವೆ.
3,50.000 ಜನರು ಚಲನಚಿತ್ರ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಅವರಲ್ಲಿ ದಿನಗೂಲಿ ಆಧಾರದ, ಯಾವುದೇ ಜೀವನಭದ್ರತೆ ಇಲ್ಲದವರೇ ಬಹಳ ಜನರಿದ್ದಾರೆ ಎಂದರು.

ಚಲನಚಿತ್ರ ಶಿಕ್ಷಣ ನಮ್ಮ ಆದ್ಯತೆ ಆಗಬೇಕು. ಚಲನಚಿತ್ರ ಶಿಕ್ಷಣ ಎಂದರೆ ಕಲಾವಿದರ ತರಬೇತಿ ಎಂಬ ಸೀಮಿತತೆ ಸಲ್ಲದು. ಐಐಟಿಯಲ್ಲಿ ಚಲನಚಿತ್ರ ತಂತ್ರಜ್ಞಾನದ ಬಗ್ಗೆ ಪಠ್ಯಕ್ರಮ ಅಗತ್ಯ. ಭಾರತೀಯ ಚಲನಚಿತ್ರ ಮಂದಿರಗಳು
ಸುಸಜ್ಜಿತವಾಗಿಲ್ಲ. ತಂತ್ರಜ್ಞಾನವೇ ಚಲನಚಿತ್ರದ ಮೂಲಧಾರವಾದ ಕಾರಣ ಚಿತ್ರ ಮಂದಿರಗಳ ತಾಂತ್ರಿಕ ಅಭಿವೃದ್ಧಿ ಸಹ ಅಗತ್ಯ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಭಾರತೀಯ ಚಲನಚಿತ್ರ ರಂಗ ಎಲ್ಲ ಹಂತದಲ್ಲಿಯೂ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ವಿದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಚಲನಚಿತ್ರವೊಂದರ ತಯಾರಿಕೆ ಈಗ ಸವಾಲಿನದ್ದಲ್ಲವಾದರೂ ನಮ್ಮಲ್ಲಿನ ಕೆಲವು ಕಾನೂನುಗಳು ಚಲನಚಿತ್ರ ತಯಾರಿಕರಿಗೆ ಸವಾಲು ತಂದೊಡ್ಡುತ್ತಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಬಿರದ ಸಂಯೋಜಕ ಜಸ್ವಂತ್‌ ಜಾಧವ್‌ ಕಾರ್ಯಕ್ರಮ ನಿರ್ವಹಿಸಿದರು. ಕೆ.ವಿ. ಅಕ್ಷರ, ಸುಂದರ ಸಾರುಕೈ, ವಿವೇಕ್‌ ಶ್ಯಾನಭಾಗ್‌, ಎಸ್ತರ್‌ ಅನಂತಮೂರ್ತಿ, ಮಾಧವ ಚಿಪ್ಳಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next