Advertisement
ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಅರಳಿಕೊಪ್ಪ ಗ್ರಾಮದ ಸರ್ವೆ ನಂ. 88 ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಖಾತೆಯಾದ ಎರಡು ಎಕರೆ ಜಾಗವಿದೆ. ಅವತ್ತಿನ ಎಡಜಿಗಳೇಮನೆ ಮಂಡಲ ಪಂಚಾಯ್ತಿಗೆ ಸೇರಿದ್ದ ಈ ಜಾಗವನ್ನು ಅಂದಿನ ಉಪಪ್ರಧಾನ ಚಿಪ್ಳಿ ಸುದರ್ಶನ್‌ರ ಆಸಕ್ತಿಯಿಂದ ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿತ್ತು. ಇಂತದೊಂದು ಅಮೂಲ್ಯ ಜಾಗ ತನ್ನ ವಶದಲ್ಲಿರುವುದು ಖುದ್ದು ಪ್ರವಾಸೋದ್ಯಮ ಇಲಾಖೆಯ ಅರಿವಿಗೇ ಬಂದಿಲ್ಲ. ಪ್ರವಾಸೋದ್ಯಮ ಇಲಾಖೆಯ ವಶದಲ್ಲಿಯೇ ಜಾಗವಿದ್ದಿದ್ದರೆ ಹೋಟೆಲ್, ಡಾರ್ಮೆಂಟರಿ ಮೊದಲಾದವುಗಳ ನಿರ್ಮಾಣ ಸಾಧ್ಯವಾಗುತ್ತಿದ್ದು. ಇಕ್ಕೇರಿ, ಸಿಗಂದೂರು, ವರದಹಳ್ಳಿ, ಜೋಗ, ಕೆಳದಿ ಮೊದಲಾದ ಜಾಗಕ್ಕೆ ಭೇಟಿ ಕೊಡುವ ಪ್ರವಾಸಿಗರಿಗೆ ಅನುಕೂಲವಾಗುತ್ತಿತ್ತು.
Related Articles
Advertisement
ಸದರಿ ಜಾಗದ ರಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆ 5 ಲಕ್ಷ ರೂ. ವೆಚ್ಚದಲ್ಲಿ ಕಲ್ಲುಕಂಬ ಹಾಗೂ ಮುಳ್ಳುತಂತಿಗಳನ್ನು ಬಳಸಿ ಸುಭದ್ರ ಬೇಲಿಯನ್ನು ಕರ್ನಾಟಕ ಭೂಸೇನಾ ನಿಗಮ ಮೂಲಕ ಮಾಡಿಸಿತ್ತು. ಆದರೆ ಕಾಣದ ಕೈಗಳ ಕಾರಣ ವಿವಾದಿತ ಜಾಗದಲ್ಲಿದ್ದ ಮನೆಯವರ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳಾವಕಾಶ ಕಲ್ಪಿಸಿ ಸರ್ಕಾರದ ಹಣದಲ್ಲಿ ಒತ್ತುವರಿದಾರರಿಗೆ ಸುಭದ್ರ ಬೇಲಿ ಮಾಡಿಕೊಟ್ಟಂತಾಗಿದ್ದುದು ತೀವ್ರ ಟೀಕೆಗೆ ಒಳಗಾಗಿತ್ತು.
ಎಂಟು ವರ್ಷಗಳ ನಂತರವೂ ಇಲಾಖೆಯ ಧ್ವನಿ ಬದಲಾಗಿಲ್ಲ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ, “ಇಲಾಖೆಗೆ ಸೇರಿದ್ದ ಜಾಗ ಒತ್ತುವರಿಯಾದ ಕಾರಣ ಬೇಲಿ ಹಾಕಿ ರಕ್ಷಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಇಲಾಖೆ ಪರವಾಗಿ ಆದೇಶವಾಗಿದೆ. ಆದೇಶ ಪ್ರತಿ ದೊರಕಿದ ತಕ್ಷಣ ಇಲಾಖೆಯ ಜಾಗವನ್ನು ತೆರವುಗೊಳಿಸುವ ಕ್ರಮ ತೆಗೆದುಕೊಳ್ಳಲಾಗಿವುದು ಎನ್ನುತ್ತಾರೆ. ನ್ಯಾಯಾಲಯದ ತೀರ್ಪು ಲಭಿಸಿ ಮೂರು ವರ್ಷಗಳೇ ಸಂದಿವೆ!
ಪ್ರವಾಸೋದ್ಯಮ ಇಲಾಖೆಗೆ ಕಾದಿರಿಸಿದ್ದ ಜಾಗ ಒತ್ತುವರಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಒತ್ತುವರಿ ತೆರವು ಸಂಬಂಧ ನ್ಯಾಯಾಲಯ ಆದೇಶ ನೀಡಿದ್ದು, ಇಲಾಖೆ ತೆರವು ಕಾರ‍್ಯ ನಡೆಸಿದಾಗ, ಕಂದಾಯ ಇಲಾಖೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಹಶೀಲ್ದಾರ್ ಕಚೇರಿಯ ಪರಮೇಶ್ವರ್ ಭರವಸೆ ನೀಡುತ್ತಾರೆ. ಪತ್ರಿಕೆ ಮೂರು ವರ್ಷಗಳ ಕೆಳಗೆ ಮಾತನಾಡಿಸಿದಾಗಲೂ ಅವರಿಂದ ಇದೇ ಭರವಸೆಯೇ ಪ್ರಸ್ತಾಪವಾಗಿತ್ತು.
ತನ್ನದೇ ಇಲಾಖೆಯ ಜಾಗವನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಕಿಂಚಿತ್ತೂ ಆಸಕ್ತಿಯೂ ಇಲ್ಲ. ಅವರದೇ ಜಾಗದ ಅತಿಕ್ರಮಣವಾಗಿರುವ ಕುರಿತು ನಾವೇ ಮಾಹಿತಿ ನೀಡಿ, ವ್ಯಾಜ್ಯ ನ್ಯಾಯಾಲಯದಲ್ಲಿ ಪ್ರವಾಸೋದ್ಯಮ ಇಲಾಖೆ ಪರವಾಗಿ ಇತ್ಯರ್ಥವಾಗಿದ್ದರೂ ಒತ್ತುವರಿಯನ್ನು ಖುಲ್ಲಾ ಮಾಡಿಸುವಲ್ಲಿ ಇಲಾಖೆ ಅನಗತ್ಯವಾಗಿ ವಿಳಂಬ ಮಾಡುತ್ತಲೇ ಇದೆ. ಈ ಬಗ್ಗೆ ಕೇಳಿದರೆ ಎಸಿಗೆ ಬರೆದಿದ್ದೇವೆ, ಡಿಸಿಗೆ ಬರೆದಿದ್ದೇವೆ ಎಂಬ ಸಬೂಬು ಮಾತ್ರ ಇಲಾಖೆಯ ಅಧಿಕಾರಿಗಳಿಂದ ಕೇಳಿಬರುತ್ತಿದೆ.
– ಜಯಪ್ರಕಾಶ್ ಗೋಳಿಕೊಪ್ಪ, ಪರಿಸರ ಕಾರ್ಯಕರ್ತ
ಮಾ.ವೆಂ.ಸ.ಪ್ರಸಾದ್