ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಹಿಂದಿನಿಂದಲೂ ಮೂರು ತಿಂಗಳು ತಾವು ಪ್ರತಿನಿಧಿಸುವ ಪಕ್ಷವನ್ನು ಹೊಗಳುವುದು, ಆರು ತಿಂಗಳು ತೆಗಳುವುದು ಮಾಡಿಕೊಂಡು ಬಂದಿರುವುದು ಮಾಮೂಲಿ. ಸದ್ಯ ಅವರಿಗೆ ತಾವು ಯಾವ ಪಕ್ಷದಲ್ಲಿ ಇದ್ದೇವೆ ಎನ್ನುವುದೇ ಗೊತ್ತಿದ್ದಂತೆ ಕಾಣುತ್ತಿಲ್ಲ. ತಮ್ಮದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರು ಯಾರೆಂದು ತಮಗೆ ಗೊತ್ತಿಲ್ಲ ಎನ್ನುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಟೀಕಿಸಿದರು.
ನ.10ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಳೂರು ಅವರ ವರ್ತನೆಯಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುವಂತಾಗುತ್ತಿದೆ. ಸಾಗರ ಕ್ಷೇತ್ರವನ್ನು ಕಾಗೋಡು, ಎಲ್.ಟಿ.ತಿಮ್ಮಪ್ಪ ಹೆಗಡೆ, ಹರತಾಳು ಹಾಲಪ್ಪ ಅಂತಹವರು ಪ್ರತಿನಿಧಿಸಿ ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ಗುರುತಿಸುವಂತಹ ಕೆಲಸ ಮಾಡಿದ್ದಾರೆ. ಆದರೆ ಇವರ ಅವಧಿಯಲ್ಲಿ ಹಿನ್ನಡೆ ಅನುಭವಿಸುವಂತೆ ಆಗಿದೆ ಎಂದು ದೂರಿದರು.
ಸಂಸದ ಬಿ.ವೈ.ರಾಘವೇಂದ್ರ ಬಗ್ಗೆ ಶಾಸಕ ಬೇಳೂರು ಪದೇಪದೇ ಕೇವಲವಾಗಿ ಮಾತನಾಡಿದರೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ. ದೇಶದಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿರುವ ಬಿವೈಆರ್ ಲೋಕಸಭಾ ಕ್ಷೇತ್ರದಾದ್ಯಂತ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿಕೊಂಡು ಬರಲು ಶಾಸಕ ಗೋಪಾಲಕೃಷ್ಣರಿಗೆ ಮೂರು ತಿಂಗಳು ಹಿಡಿಯುತ್ತದೆ ಎಂದು ವ್ಯಂಗ್ಯ ಚಾಟಿ ಬೀಸಿದರು.
ಸಂಸದ ಬಿ.ವೈ.ರಾಘವೇಂದ್ರರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ, ಏರ್‌ಪೋರ್ಟ್, ಸೇತುವೆ, ರೈಲ್ವೆ ಅಭಿವೃದ್ಧಿ ಸೇರಿದಂತೆ ಸಂಸದರ ಕಾರ್ಯವೈಖರಿ ಅನುಕರಣೀಯವಾದದ್ದು. ಬೇಳೂರಿಗೆ ಮೂರು ಬಾರಿ ಶಾಸಕನಾಗಿದ್ದೆ ಎನ್ನುವ ಹೆಗ್ಗಳಿಕೆ ಬಿಟ್ಟರೆ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು.
ಈ ಶಾಸಕರ ಬಗ್ಗೆ ವರ್ಗಾವಣೆ, ಹಾಲಪ್ಪ ಹರತಾಳು ತಂದ ಅನುದಾನ ದುರುಪಯೋಗ, ಮರಳು ಸಾಗಾಣಿಕೆಗಳಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎನ್ನುವ ಮಾತು ಕ್ಷೇತ್ರವ್ಯಾಪ್ತಿಯಲ್ಲಿ ಚರ್ಚೆಯಲ್ಲಿದೆ. ಕೆಲವರು ಯೋಗ್ಯತೆ ಮೇಲೆ ಗೆದ್ದು ಬರುತ್ತಾರೆ. ಇನ್ನು ಕೆಲವರು ಯೋಗದ ಮೇಲೆ ಗೆದ್ದು ಬರುತ್ತಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಉಚಿತ ಭಾಗ್ಯ ಸೇರಿದಂತೆ ವಿವಿಧ ಯೋಗದಿಂದ ಗೆದ್ದು ಬಂದಿದ್ದಾರೆ. ಕಾಗೋಡು ತಿಮ್ಮಪ್ಪ ಭೀಷ್ಮರಿದ್ದಂತೆ. ಅವರು ನನ್ನ ಪಕ್ಕ ಇದ್ದರೆ ಗೆಲುವು ನಿಶ್ಚಿತ ಎಂದು ಹೇಳಿದ್ದವರು ಈಗ ಅವರಿಗೆ ತೊಂದರೆ ಕೊಡುತ್ತಿದ್ದಾರೆ. ಮಧು ಬಂಗಾರಪ್ಪ, ಶಿವರಾಜ್ ಕುಮಾರ್ ರ‍್ಯಾಲಿ ನಡೆಸಿ ಹೆಚ್ಚಿನ ಮತ ತರುವಲ್ಲಿ ಶ್ರಮಿಸಿದ್ದರು. ಈಗ ನನ್ನ ಗೆಲುವಿಗೆ ನಾನೇ ಕಾರಣ ಎನ್ನುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಹಗರಣದ ಬಗ್ಗೆ ಮಾತನಾಡುವ ಬೇಳೂರಿಗೆ ಅವರದ್ದೇ ಪಕ್ಷ ಅಧಿಕಾರದಲ್ಲಿದೆ. ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಕ್ಷೇತ್ರ ವಿಂಗಡಣೆ ಅವೈಜ್ಞಾನಿಕವಾಗಿದೆ. ಏನೇ ಆದರೂ ಬಿಜೆಪಿ ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುತ್ತದೆ ಎಂದರು.
ಗೋಷ್ಠಿಯಲ್ಲಿ ಭರ್ಮಪ್ಪ ಅಂದಾಸುರ, ರೇವಪ್ಪ ಕೆ.ಹೊಸಕೊಪ್ಪ, ನಟರಾಜ ಗೇರುಬೀಸು, ಶಾಂತಪ್ಪ ಗೌಡ, ಶಿವಾನಂದ ಉಪಸ್ಥಿತರಿದ್ದರು.