ಸಾಗರ: ಬೆಳೆವಿಮೆ ವಿಸ್ತರಿಸಬೇಕು ಹಾಗೂ ಪಹಣಿಯಲ್ಲಿ ಬಹು ವಾರ್ಷಿಕ ಬೆಳೆಗಳಾದ ಅಡಿಕೆ ಮತ್ತು ಕಾಳುಮೆಣಸು ಖಾಯಂ ಆಗಿ ದೃಢೀಕರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಜು.30ರ ಭಾನುವಾರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ನಿಯೋಗ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಭೇಟಿ ನೀಡಿ ಮನವಿ ಮಾಡಿತು.
2023-24ನೇ ಸಾಲಿನ ಬೆಳೆವಿಮೆ ಜು. 20ಕ್ಕೆ ಪ್ರಾರಂಭವಾಗಿದ್ದು, ಜು. 31 ಕೊನೆ ದಿನ. ಇಷ್ಟು ಕಡಿಮೆ ಅವಧಿಯಲ್ಲಿ ಬೆಳೆವಿಮೆ ಮಾಡಲು ಸಾಧ್ಯವಿಲ್ಲ. ಸರ್ವರ್ ಡೌನ್, ಫ್ರೂಟ್ಸ್ ಲಿಂಕ್ ಇನ್ನಿತ್ರ ಕಾರಣಗಳಿಂದ ರೈತರಿಗೆ ನಿಗದಿತ ಸಮಯದಲ್ಲಿ ಬೆಳೆವಿಮೆ ಮಾಡಿಸಿಕೊಳ್ಳಲು ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ಬೆಳೆವಿಮೆ ನೊಂದಣಿ ದಿನವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಬೇಕು ಎಂದು ಮನವಿ ಮಾಡಲಾಯಿತು.
ಪಹಣಿಯಲ್ಲಿ ಬೆಳೆ ನೋಂದಣಿ ಇಲ್ಲದೆ ಇರುವುದರಿಂದ ಬೆಳೆವಿಮೆ ಮಾಡಿ ಕೊಡುತ್ತಿಲ್ಲ. ಬೆಳೆವಿಮೆ ಪಹಣಿಯಲ್ಲಿ ದಾಖಲಿಸಿಕೊಳ್ಳದೆ ಇದ್ದರೂ ರೈತರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು. ಶ್ಯಾನಭೋಗರು ಕೈಬರಹದ ಮೂಲಕ ಬರೆದು ಕೊಟ್ಟಿದ್ದನ್ನು ವಿಮೆಗೆ ಪರಿಗಣಿಸಬೇಕು. ಬಹುವಾರ್ಷಿಕ ಬೆಳೆಗೆ ಖಾಯಂ ಬೆಳೆ ನಮೂದು ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಲಾಯಿತು.
ಸರ್ಕಾರದ ಗಮನ ಸೆಳೆಯುತ್ತೇನೆ: ಬೆಳೆಗಾರ ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಬೆಳೆಗಾರರ ಪರವಾಗಿ ಸರ್ಕಾರ ಇದ್ದು, ವಿಮೆ ನೋಂದಾವಣೆ ದಿನಾಂಕವನ್ನು ಮುಂದೂಡುವುದು ಸೇರಿದಂತೆ ಪಹಣಿಯಲ್ಲಿ ಬೆಳೆ ನಮೂದಿಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಚೇತನರಾಜ್ ಕಣ್ಣೂರು ಇನ್ನಿತರರು ಹಾಜರಿದ್ದರು.