Advertisement

ಸಾಗರ : ಎಸಿ ನ್ಯಾಯಾಲಯಕ್ಕೆ ಜನನ ಮರಣ ನೋಂದಣಿ ; ವಕೀಲರ ಆಕ್ಷೇಪ

03:21 PM Jul 26, 2022 | Team Udayavani |

ಸಾಗರ : ಜನನ ಮರಣ ನೋಂದಣಿಯನ್ನು ಜೆಎಂಎಫ್‌ಸಿ ನ್ಯಾಯಾಲಯದಿಂದ ತೆಗೆದು ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿರುವುದನ್ನು ಖಂಡಿಸಿ, ತಕ್ಷಣ ಅಧಿಸೂಚನೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಮಂಗಳವಾರ ವಕೀಲರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಎಂ.ಎಸ್.ಗೌಡರ್, ಜನನ ಮರಣ ನೋಂದಾವಣೆಯನ್ನು ಹಿಂದಿನಿಂದಲೂ ಜೆಎಂಎಫ್‌ಸಿ ನ್ಯಾಯಾಲಯದ ಮೂಲಕ ಕೊಡುವ ಪದ್ಧತಿ ಇತ್ತು. ಇದು ನಿಗದಿತ ಅವಧಿಯಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿದಾರರು ಪಡೆದುಕೊಳ್ಳಲು ಅವಕಾಶವಿತ್ತು. ಇದೀಗ ರಾಜ್ಯ ಸರ್ಕಾರ ಅದನ್ನು ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಅನೇಕ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳಿಗೆ ಸಾಕ್ಷಿ, ದಾಖಲಾತಿ ಪರೀಕ್ಷೆ ಮಾಡಲು ಅವಕಾಶ ಇರುವುದಿಲ್ಲ. ನ್ಯಾಯಾಲಯದ ವ್ಯಾಪ್ತಿ ಮೀರಿ ಸರ್ಕಾರ ಮಾಡಿರುವ ಆದೇಶದಿಂದ ಇನ್ನಷ್ಟು ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇದ್ದು, ತಕ್ಷಣ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ನ್ಯಾಯವಾದಿ ಕೆ.ಎನ್.ಶ್ರೀಧರ್ ಮಾತನಾಡಿ, ಸರ್ಕಾರ ಜಾರಿಗೆ ತರುತ್ತಿರುವ ಅನೇಕ ಕಾನೂನುಗಳು ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಗೊತ್ತಿರುವುದಿಲ್ಲ. ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಕೆಲವು ಆದೇಶ ಹೊರಡಿಸುತ್ತಿದ್ದಾರೆ. ಈಚೆಗೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಮಾಡುವಂತಿಲ್ಲ ಎನ್ನುವ ಹಾಸ್ಯಾಸ್ಪದ ಆದೇಶ ಜಾರಿಯಾಗಿತ್ತು. ಸಾರ್ವಜನಿಕ ಪ್ರತಿಭಟನೆ ನಂತರ ಅದನ್ನು ಹಿಂದಕ್ಕೆ ಪಡೆಯಲಾಗಿತ್ತು. ಜನನ ಮರಣ ನೋಂದಾವಣೆ ಆದೇಶ ಸಹ ಅಂತಹದ್ದೇ ಆಗಿದೆ. ಈ ಆದೇಶ ಹೊರಡಿಸುವಾಗ ಸರ್ಕಾರ ನಡೆಸುವವರಿಗೆ ಇದರ ಗಂಭೀರತೆ ಬಹುಶಃ ಅರ್ಥವಾದಂತೆ ಕಾಣುತ್ತಿಲ್ಲ. 1969 ರಲ್ಲಿ ನ್ಯಾಯಾಲಯದ ಮೂಲಕ ಜನನ ಮರಣ ನೊಂದಾವಣೆ ಪಡೆಯಬೇಕು ಎನ್ನುವ ಆದೇಶ ಇದೆ. ಈಗ ಏಕಾಏಕಿ ನ್ಯಾಯಾಲಯದ ಆದೇಶ ಮೊಟಕುಗೊಳಿಸಿ ಉಪವಿಭಾಗಾಧಿಕಾರಿಗಳಿಗೆ ಕೊಟ್ಟಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಇದನ್ನೂ ಓದಿ : ರಸಗೊಬ್ಬರ ಕೊರತೆ: ನಕಲಿ ರಸಗೊಬ್ಬರ ಮಾರಾಟ ತಡೆಗೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ

ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿ, ವಕೀಲರ ಅಧಿಕಾರ ಕಿತ್ತುಕೊಳ್ಳುವ ಜೊತೆಗೆ ಜನಸಾಮಾನ್ಯರಿಗೆ ಶೋಷಣೆ ಆಗುತ್ತದೆ. ಶಿಕಾರಿಪುರ, ಹೊಸನಗರ, ಸೊರಬ ತಾಲೂಕಿನವರು ಜನನ ಮರಣ ನೊಂದಾವಣೆಗೆ ಸಾಗರ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ಆನರನ್ನು ಸತಾಯಿಸುವ ಜೊತೆಗೆ ಭ್ರಷ್ಟಾಚಾರಕ್ಕೂ ಇದು ಅನುವು ಮಾಡಿಕೊಡುವ ಉದ್ದೇಶ ಇದ್ದಂತೆ ಕಾಣುತ್ತದೆ. ಸರ್ಕಾರದ ಆದೇಶವು ನಕಲಿ ದಾಖಲೆ ಸೃಷ್ಟಿಗೂ ಕಾರಣವಾಗುತ್ತದೆ. ತಕ್ಷಣ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

Advertisement

ಪ್ರಮುಖರಾದ ಸುರೇಶಬಾಬು, ವಿ.ಶಂಕರ್, ಎಂ.ರಾಘವೇಂದ್ರ, ಪ್ರೇಮ್ ಸಿಂಗ್, ಎಸ್.ಎಲ್.ಮಂಜುನಾಥ್, ವಿನಯಕುಮಾರ್, ಅಣ್ಣಪ್ಪ ಎಚ್.ಕೆ., ಗಣಪತಿ, ರವೀಶ್ ಕುಮಾರ್, ರಮೇಶ್ ಮರಸ, ಎಚ್.ಬಿ.ರಾಘವೇಂದ್ರ, ನಾಗಲಕ್ಷ್ಮೀ, ಶೃತಿ, ವಿದ್ಯಾ, ಶ್ರಾವ್ಯ ಇನ್ನಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next