ಸಾಗರ: ದೇಶೀಯ ಕಲೆಯ ಉಳಿವಿಗೆ ಸಾಂಘಿಕ ಪ್ರಯತ್ನದ ಅಗತ್ಯತೆ ಇದೆ. ಯುವ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವ ಸೌರಭಗಳ ಮೂಲಕ ವೇದಿಕೆ ನಿರ್ಮಿಸಿಕೊಡುತ್ತಿದೆ. ಕಲೆಗಳು ಮತ್ತು ಕಲಾವಿದರ ಮುಖಾಮುಖೀಯಾದರೆ ಹೊಸ ಪ್ರಯತ್ನಗಳಿಗೆ ಪೂರಕವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಎನ್. ಚೆಲುವಾದಿ ಹೇಳಿದರು.
ನಗರದಲ್ಲಿ ಶನಿವಾರ ಪರಿಣಿತಿ ಕಲಾಕೇಂದ್ರ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಿರುವ 5ನೇ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಕಲೆಗೆ ಬಹು ಬೇಡಿಕೆ ಇದೆ. ಅದರಲ್ಲಿಯೂ ನೃತ್ಯ ಮತ್ತು ಸಂಗೀತ ಪ್ರಾಚೀನ ಕಲೆಗಳು. ಇವುಗಳ ಅಭ್ಯಾಸಕ್ಕೆ ನಮ್ಮಲ್ಲಿ ಗುರುಕುಲ ಮಾದರಿಯ ಶಿಕ್ಷಣ ಇಂದಿಗೂ ಜಾರಿಯಲ್ಲಿದೆ. ಕಲಾವಿದ ನಿರಂತರ ಕಲಿಕೆಯ ಮೂಲಕ ಬೆಳೆಯಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ರಾಷ್ಟ್ರೀಯ ಉತ್ಸವಗಳ ಮೂಲಕ ಬೇರೆ ಬೇರೆ ರಾಜ್ಯದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತಂದು ಪರಿಚಯಿಸುವ ಪ್ರಯೋಗಾತ್ಮಕ ಪ್ರಯತ್ನ ಒಳ್ಳೆಯ ಬೆಳವಣಿಗೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಯುವ ಕಲಾವಿದರಿಗೆ ಮತ್ತು ಸಂಘಟನೆಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಎಂದರು. ಪರಿಣಿತಿ ಕೇಂದ್ರದ ಕಾರ್ಯದರ್ಶಿ ವಿದ್ವಾನ್ ಎಂ. ಗೋಪಾಲ್ ಮಾತನಾಡಿ, ಕಲಿಕೆಗೆ ಕೊನೆ ಇಲ್ಲ. ಅದರಲ್ಲಿಯೂ ನೃತ್ಯದಂತಹ ಕಲೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಪ್ರಕಾರಗಳನ್ನು ಹೊಂದಿದೆ. ಪುರಾಣದ ಕಥಾನಕಗಳನ್ನು ಜೀವಂತವಾಗಿಡುವಲ್ಲಿ ನಾಟ್ಯಶಾಸ್ತ್ರದ ಕೊಡುಗೆ ಬಹು ದೊಡ್ಡದು. ಒಂದು ಕಾಲದಲ್ಲಿ ರಾಜಾಶ್ರಯದಲ್ಲಿದ್ದ ಕಲೆ ಈಗ ಉತ್ಸವಗಳ ಮೂಲಕ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಸರ್ಕಾರ ಈ ಕಲೆಗಳನ್ನು ಉಳಿಸುವಲ್ಲಿ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅರುಣ್ ಘಾಟೆ, ಶ್ರುತಿ ಶ್ರೀನಾಥ್, ಸೃಷ್ಟಿ ಅವರಿಗೆ ಪರಿಣಿತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ನೃತ್ಯೋತ್ಸವದ ಅಧ್ಯಕ್ಷ ಎಸ್.ಎಸ್. ರಮೇಶ್, ಸುಗಮ ಸಂಗೀತ ಕಲಾವಿದ ಆನಂದ ಮಾದಲಗೆರೆ, ನಗರಸಭಾ ಸದಸ್ಯರಾದ ಅರವಿಂದ ರಾಯ್ಕರ್, ಎನ್. ಶ್ರೀನಿವಾಸ್, ಕೃಷ್ಣಮೂರ್ತಿ ಭಂಡಾರಿ, ಸಾಯಿ ಆರ್ಟ್ಸ್ಇಂ ಟರ್‌ನ್ಯಾಶನಲ್‌ನ ಸಾಯಿ ವೆಂಕಟೇಶ್, ಪಿ.ಆರ್. ವಿಕ್ರಮ್ ಕುಮಾರ್, ಉದ್ಯಮಿ ಸುರೇಶ ಎನ್. ಸಾಗರ್ ಇತರರು ಇದ್ದರು.