ಸಾಗರ: ಮೇ 29ರಂದು ಮತದಾನ ನಡೆಯಲಿರುವ ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿದ ಹಲವು ಅಭ್ಯರ್ಥಿಗಳು ಮತ ಬೇಟೆಗಾಗಿ ಕರಪತ್ರದಲ್ಲಿ ವೈವಿಧ್ಯತೆ ಪ್ರದರ್ಶಿಸಿ ತಾವು ಈಗು ನೀವು ನೋಡುತ್ತಿರುವ ರಾಜಕಾರಣಿಗಳಿಗಿಂತ ತಾವು ಭಿನ್ನ ಎಂದು ತೋರಿಸಲು ಮುಂದಾಗಿದ್ದಾರೆ. ಪ್ರಚಾರಕ್ಕೆ ಬಳಸುವ ಕರಪತ್ರದಲ್ಲಿ ಮತದಾರರನ್ನು ಸೆಳೆಯಲು ಸರ್ಕಸ್ ಮಾಡುತ್ತಿದ್ದಾರೆ.
18ನೇ ವಾರ್ಡ್‌ನಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಗಣೇಶ್ ಗಟ್ಟಿ, ತಮಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂಬುದನ್ನು ಕರಪತ್ರದಲ್ಲಿ ನೇರವಾಗಿ ಆರೋಪಿಸಿದ್ದಾರೆ. ಕಸಗುಡಿಸುವ, ಬ್ಯಾನರ್ ಕಟ್ಟುವ ಕೆಲಸಗಳನ್ನು ಬಿಜೆಪಿಯಲ್ಲಿ ಮಾಡಿದ್ದೇನೆ, ವಿವಿಧ ಹುದ್ದೆ ನಿರ್ವಹಿಸಿದ್ದೇನೆ ಎಂದೆಲ್ಲ ನಮೂದಿಸಿದ ಗಣೇಶ್ ಗಟ್ಟಿ ತಮಗೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ತಪ್ಪಿದ್ದರಿಂದ ಪಕ್ಷೇತರವಾಗಿ ಸರ್ಸಿದ್ದಾಗಿ ಕರಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಬೇರೆ ವಾರ್ಡ್‌ನಿಂದ ವಲಸೆ ಬಂದವರಿಗೆ ಮಣೆ ಹಾಕದೆ ನಿರಂತರ ಸಂಪರ್ಕದಲ್ಲಿರುವ ಸ್ಥಳೀಯರಿಗೆ ಅವಕಾಶ ನೀಡಲು ಗಣೇಶ್ ಕರಪತ್ರದ ಮೂಲಕ ಕೋರಿದ್ದಾರೆ. ಮುಂದುವರಿದು ಕರಪತ್ರದ ಕೊನೆಯಲ್ಲಿ ‘ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟ’ ಎಂಬ ಘೋಷಣೆಯನ್ನು ಸಹ ಮಾಡಿಕೊಂಡಿದ್ದಾರೆ. ಬಿಜೆಪಿ ಟಿಕೆಟ್ ವಂಚಿತರು ಸಂಘಟಿತರಾಗಿ ಬಂಡಾಯದ ಬಾವುಟ ಹಾರಿಸಿದ್ದು, ಬಹುತೇಕ ಕರಪತ್ರಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 23ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಸಂತೋಷ್ ಸಹ ತಮ್ಮ ಕರಪತ್ರದಲ್ಲಿ ‘ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟ’ ಎಂಬ ವಾಕ್ಯವನ್ನು ಮುದ್ರಿಸಿದ್ದಾರೆ. 16ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಎಸ್.ವಿ.ಕೃಷ್ಣಮೂರ್ತಿ ತಮ್ಮ ಕರಪತ್ರದಲ್ಲಿ ಸ್ವಚ್ಛ ಭಾರತ್, ಸ್ವಚ್ಛ ಬಿಜೆಪಿ ಎಂದು ಮದ್ರಿಸಿದ್ದಾರೆ.
10ನೇ ವಾರ್ಡ್‌ನ ಸ್ವತಂತ್ರ ಅಭ್ಯರ್ಥಿ ಕೆ.ಕಿರಣ ಕರಪತ್ರದಲ್ಲಿ ತಮ್ಮ ಹೆಸರಿನ ಜೊತೆಗೆ ರಾವಣ ಎಂದು ಮುದ್ರಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ಭೂ ಕೈಲಾಸ ನಾಟಕದಲ್ಲಿ ರಾವಣನ ಪಾತ್ರ ಮಾಡಿದ್ದರಿಂದ ಬಹುತೇಕ ಎಲ್ಲರೂ ಅವರನ್ನು ರಾವಣ ಎಂದೇ ಕರೆಯುತ್ತಾರೆ. ಆದ್ದರಿಂದ ಕರಪತ್ರದಲ್ಲಿ ತಮ್ಮ ಹೆಸರಿನ ಜೊತೆಗೆ ರಾವಣ ಎಂದು ಅವರು ಮುದ್ರಿಸಿಕೊಂಡಿದ್ದಾರೆ.
11ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಎಂ.ಷಣ್ಮುಖ ?ನಾನು ಕಂಡಂತೆ ನಮ್ಮ ವಾರ್ಡ್? ಎಂಬ ಶೀರ್ಷಿಕೆಯ ಅಡಿಯಲ್ಲಿ ಸ್ಥಳೀಯವಾದ 20 ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಪ್ರತಿದಿನ ಮನೆಮನೆಗೆ ಸೈಕಲ್ಲಿನಲ್ಲಿ ಹಾಲು ವಿತರಣೆ ಕಾರ್ಯ ಮಾಡುವ ಷಣ್ಮುಖ ಅವರು ಬಿಎಸ್‌ಸಿ ಪದವಿಧರರಾಗಿದ್ದು, ದಿನ ಬೆಳಗಾಗುವುದರೊಳಗೆ ಎಲ್ಲ ಜನಸಾಮಾನ್ಯರ ಸಂಪರ್ಕಕ್ಕೆ ಸಿಗುವ ವ್ಯಕ್ತಿ ನಾನು ಎಂದು ಕರಪತ್ರದಲ್ಲಿ ಹೇಳಿಕೊಂಡಿದ್ದಾರೆ.