Advertisement
ನಗರ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‌ಗಳಿವೆ. ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ವಿವಾದ ರಾಜ್ಯದ ಹೈಕೋರ್ಟ್ ಮೆಟ್ಟಿಲು ಏರಿರುವುದರಿಂದ ಅದು ಬಗೆಹರಿಯುವವರೆಗೂ ಚುನಾವಣೆ ದಿನಾಂಕ ಪ್ರಕಟವಾಗುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದ ರಾಜಕೀಯ ಪಕ್ಷಗಳ ಪ್ರಮುಖರಿಗೆ ದಿಢೀರನೆ ಚುನಾವಣೆ ದಿನಾಂಕ ಪ್ರಕಟವಾಗಿರುವುದು ಅಚ್ಚರಿ ಮೂಡಿಸಿದೆ.ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮೇ 9ರಂದು ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಮೇ 20 ಕೊನೆಯ ದಿನ. ಮೇ 29ಕ್ಕೆ ಮತದಾನ ನಡೆದರೆ, 31ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇ 23ರವರೆಗೆ ನೀತಿಸಂಹಿತೆಯ ಪಾಶದಲ್ಲಿರುವ ಆಡಳಿತಕ್ಕೆ, ಈ ಸಂಹಿತೆ ಮತ್ತೂ ಒಂದು ವಾರ ಮುಂದುವರಿಯಲಿದೆ.
Related Articles
Advertisement
ಪಾಪಪ್ರಜ್ಞೆಯಿಂದ ಪ್ರತಿಭಟನೆಗಿಳಿಯದ ಬಿಜೆಪಿ!: ಆಡಳಿತ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಚುರುಕು ತೋರದ ಸಂದರ್ಭದಲ್ಲಿ ಅದನ್ನು ಧರಣಿ, ಪ್ರತಿಭಟನೆ ಮೊದಲಾದವುಗಳ ಮೂಲಕ ಜನರ ಮುಂದಿಡಬೇಕಾಗಿದ್ದ ಬಿಜೆಪಿ ಹಿಂದಿನ ಐದು ವರ್ಷಗಳ ತನ್ನ ಆಡಳಿತದ ಪಾಪಪ್ರಜ್ಞೆಯಿಂದ ಅಂತಹ ಕ್ರಮಕ್ಕೆ ಮುಂದಾಗಲೇ ಇಲ್ಲ ಎಂಬ ವ್ಯಂಗ್ಯದ ಮಾತು ಕೂಡ ಕೇಳಿಬರುತ್ತಿದೆ. ವಾಸ್ತವವಾಗಿ ಹಿಂದಿನ ಅವಯಲ್ಲಿ ಆಡಳಿತ ನಡೆಸಿದ ಬಿಜೆಪಿಯ ವಿರುದ್ಧದ ಅಲೆ ಕೂಡ ಕಾಂಗ್ರೆಸ್ ಮುನ್ನಡೆಗೆ ಕಾರಣವಾಗಿತ್ತು.
ಜನರಿಗೆ ಪರ್ಯಾಯಗಳೇ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತದಿಂದ ಜನ ರೋಸಿ ಹೋಗುತ್ತಿರುವಾಗ ತಾನೇ ಮುಂದಿನ ಆಡಳಿತ ವಹಿಸಿಕೊಳ್ಳುವಂತಾಗುವುದು ನಿಶ್ಚಿತವಾದಾಗ ಹೆಚ್ಚಿನ ಶ್ರಮ ಏಕೆ ಎಂಬ ಆಲೋಚನೆಯೂ ಆ ಪಕ್ಷದಲ್ಲಿ ಸುಳಿದಾಡಿರಬಹುದು. ಸಾಗರ ನಗರದಲ್ಲಿ ಜೆಡಿಎಸ್‌ನ ಪ್ರಭಾವ ಒಂದು ಸ್ಥಾನಕ್ಕೆ, ಅದೂ ಜಾತಿ ಆಧಾರಿತವಾಗಿ ಸೀಮಿತವಾದ ಹಿನ್ನೆಲೆಯಲ್ಲಿ ಆ ಪಕ್ಷ ಗಂಭೀರ ಸ್ಪರ್ಧೆಯಲ್ಲಿಲ್ಲ ಎಂದೇ ಹೇಳಬೇಕಾಗಿದೆ.
ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುವುದು ಖಚಿತವಾಗಿದೆ. ಕಳೆದ ಐದು ವರ್ಷಗಳಲ್ಲಿ ತಾಲೂಕಿನ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಶಾಸಕ ಎಚ್. ಹಾಲಪ್ಪ ನಗರಸಭೆಯ ಸಾಮಾನ್ಯ ಸಭೆಗಳಿಗೆ ಹಾಜರಾಗುವ ಹಾಗೂ ನಗರಸಭೆ ಆವರಣದಲ್ಲಿಯೇ ತಮ್ಮ ಶಾಸಕ ಕಚೇರಿ ತೆರೆಯುವ ಮೂಲಕ ನಗರಸಭೆ ಆಡಳಿತದ ಮೇಲೆ ಹಿಡಿತ ಸಾಧಿಸಬೇಕು ಎಂಬ ಇಂಗಿತವನ್ನು ಪರೋಕ್ಷವಾಗಿ ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಬೇಳೂರು ರಾಜಕೀಯ ಅಸ್ತಿತ್ವದ ಪ್ರಶ್ನೆಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಚುನಾವಣಾ ರಾಜಕಾರಣಕ್ಕೆ ಖ್ಯಾತರು. ಆದರೆ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಪದೇ ಪದೆ ಹಿನ್ನೆಲೆಯಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಸಿಗದು ಎಂಬ ಸುದ್ದಿ ಹೊರಟು ಅವರು ಸಾಗರದ ಕಾರ್ಯಕರ್ತರ ಸಭೆ ಕರೆದಾಗ ದೊಡ್ಡ ಸಂಖ್ಯೆಯಲ್ಲಿ ನಗರಸಭೆ ವ್ಯಾಪ್ತಿಯ ಬಿಜೆಪಿ ಪ್ರಮುಖರು ಅವರನ್ನು ಬೆಂಬಲಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅವರು ಕಾಂಗ್ರೆಸ್ ಕಡೆ ಬೆಂಬಲ ವ್ಯಕ್ತಪಡಿಸಿದಾಗ ಅನಿವಾರ್ಯವಾಗಿ ಬಿಜೆಪಿಗೆ ಮರಳಿರುವ ಆ ಪ್ರಮುಖರ ಟಿಕೆಟ್ ಆಕಾಂಕ್ಷೆಗೆ ಶಾಸಕ ಹಾಲಪ್ಪ ಬಳಗದಿಂದ ಕೊಡಲಿ ಏಟು ಬೀಳುತ್ತದೆಯೇ ಎಂಬುದು ಕುತೂಹಲಕಾರಿ ಅಂಶ. ತಮ್ಮ ರಾಜಕೀಯ ಶಕ್ತಿ ವೃದ್ಧಿಸಿಕೊಳ್ಳಲು ಬೇಳೂರು ಅವರಿಗೆ ನಗರಸಭೆ ಚುನಾವಣೆ ಕೊನೆಯ ಅವಕಾಶವನ್ನು ಕಲ್ಪಿಸಿದೆ ಎಂಬ ಪ್ರತಿಪಾದನೆಯೂ ಕೇಳಿಬಂದಿದೆ. ಎರಡೂ ಪಕ್ಷಗಳಲ್ಲಿ ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಮೂಲಕ ಪಕ್ಷದ ಅಧಿಕಾರ ವ್ಯಾಪ್ತಿಯಲ್ಲಿ ತಮ್ಮ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸಿರುವವರು ಹೆಚ್ಚುತ್ತಿದ್ದಾರೆ. ಇದರಿಂದ ಅನೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಎರಡೂ ಪಕ್ಷಗಳಲ್ಲೂ ಭಿನ್ನಮತ, ಬಂಡಾಯ ಎದುರಿಸಬೇಕಾದ ಅನಿವಾರ್ಯ ಭೀತಿ ಕಾಡುತ್ತಿದೆ. ನಗರದ ಮಟ್ಟಿಗೆ ಸಣ್ಣ ಶಕ್ತಿಯಾದ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬುದನ್ನು ಕೂಡ ಕಾದು ನೋಡಬೇಕಿದೆ.