Advertisement

ಯಕ್ಷಗಾನದ ವ್ಯಾಪ್ತಿ ವಿಶೇಷವಾದದ್ದು: ಸುಬ್ರಹ್ಮಣ್ಯಧಾರೇಶ್ವರ

07:28 PM Sep 29, 2019 | Team Udayavani |

ಸಾಗರ: ಹೊರಗಿನ ಅನೇಕ ಸಂಗತಿಗಳನ್ನು ಸ್ವೀಕರಿಸಿ, ತನ್ನ ಒಟ್ಟಂದಕ್ಕೆ ಪೂರಕವಾಗಿ ಬಳಸಿಕೊಳ್ಳುವುದು ಯಕ್ಷಗಾನದ ವಿಶೇಷ ಎಂದು ಬಡಗು ತಿಟ್ಟಿನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ವಿಜಯ ಸೇವಾ ಟ್ರಸ್ಟ್‌ನ ಅಂಗಸಂಸ್ಥೆ ಯಕ್ಷಶ್ರೀ ಸಂಸ್ಥೆಯ ವತಿಯಿಂದ ಶನಿವಾರ ರೈಲ್ವೆ ಸ್ಟೇಷನ್‌ ರಸ್ತೆಯ ಶಾರದಾಂಬಾ ದೇವಸ್ಥಾನ ಸಭಾಗೃಹದಲ್ಲಿ 39ನೇ ಪ್ರಯೋಗವಾಗಿ ಯಕ್ಷ ನಾದ ಲಾಸ್ಯ ಯಕ್ಷಗಾನ ಮತ್ತು ಸುಗಮ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನದ ಸಮೃದ್ಧಿ, ವ್ಯಾಪ್ತಿ ವಿಶೇಷವಾದುದು. ನರಕಾಸುರ ವಧೆ ಎಂಬ ಪ್ರಸಂಗವನ್ನು ಹೊಸ್ತೋಟ ಮಂಜುನಾಥ ಭಾಗವತರಿಂದ ಹಿಡಿದು ನಾಲ್ಕೈದು ಕವಿಗಳು ರಚಿಸಿದ್ದಾರೆ. ಪಾರಿಜಾತ, ನರಕಾಸುರ ವಧೆ, ಶ್ರೀಕೃಷ್ಣ ಪಾರಿಜಾತ ಎಂಬೆಲ್ಲಾ ಹೆಸರುಗಳಿವೆ.

ಇಡೀ ರಾತ್ರಿ ಸಮಯದಲ್ಲಿ ಆಡುವ ಕ್ರಮ ಸಹ ಇದೆ. ಬೆಳಗಿನ ಜಾವದಲ್ಲಿ 1ರಿಂದ 2 ತಾಸುಗಳಲ್ಲಿ ಪ್ರದರ್ಶಿಸುವ ಕ್ರಮ ಸಹ ಇದೆ. ವಿಸ್ತರಿಸಿ ಹಿಗ್ಗಿಸುವ, ಕುಗ್ಗಿಸುವ ಕಾರ್ಯಕ್ಕೆ ಪ್ರಸಂಗಗಳು ಒದಗುವುದು ವಿಶೇಷ ಎಂದರು. ಸಂಯೋಜಕ ಡಾ| ಎಚ್‌. ಎಸ್‌. ಮೋಹನ್‌ ಮಾತನಾಡಿ, ಯಕ್ಷಗಾನ ಮತ್ತು ಸುಗಮ ಸಂಗೀತವನ್ನು ಯಕ್ಷಶ್ರೀ ಸಂಸ್ಥೆಯಿಂದ 6ನೇ ಬಾರಿಗೆ ಒಂದೇ ವೇದಿಕೆಯಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ. ಪ್ರದರ್ಶನಗಳಲ್ಲಿ ಕಾಣಸಿಗದ ವೈವಿಧ್ಯತೆ, ಶೈಕ್ಷಣಿಕ ಸಂಗತಿ ಇಂಥ ಕಾರ್ಯಕ್ರಮಗಳಲ್ಲಿ ದೊರಕುತ್ತದೆ ಎಂದರು.

ನೆಬ್ಬೂರು ನಾರಾಯಣ ಭಾಗವತರ ಶಿಷ್ಯ ಶ್ರೀಧರ ಭಾಗವತ ಹಣಗಾರ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಯಕ್ಷಗಾನ ಪದ್ಯ ಹಾಡಿದರು. ಮದ್ದಳೆಯಲ್ಲಿ ಎನ್‌.ಜಿ. ಹೆಗಡೆ, ರಾಘವೇಂದ್ರ ಹೆಗಡೆ, ಚೆಂಡೆಯಲ್ಲಿ ಕೃಷ್ಣ ಯಾಜಿ ಇಡಗುಂಜಿ ಸಾಥ್‌ ನೀಡಿದರು. ಶಿವಮೊಗ್ಗದ ಸುರೇಖಾ ಹೆಗಡೆ ಅವರು ಎಂ.ಎನ್‌. ವ್ಯಾಸ, ಜಿ.ಎಸ್‌. ಶಿವರುದ್ರಪ್ಪ, ಶಿಶುನಾಳ ಶರೀಫ್‌ರ ರಚನೆಯನ್ನು ಪ್ರಸ್ತುತಪಡಿಸಿದರು. ಕೀಪ್ಯಾಡ್‌ ನಲ್ಲಿ ಮೈಸೂರಿನ ಗಣೇಶ್‌ ಭಟ್‌, ತಬಲಾದಲ್ಲಿ ತುಕರಾಂ ರಂಗಧೋಳ್‌, ರಿದಂಪ್ಯಾಡ್‌ನ‌ಲ್ಲಿ ವಿಠ್ಠಲ್ ರಂಗಧೋಳ್‌ ಸಾಥ್‌ ನೀಡಿದರು. ಮನು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next