ಸಾಗರ: ನಗರಸಭೆಯಲ್ಲಿ ಪೌರಸೇವೆ ಮಾಡುತ್ತಿರುವ ನೇರಪಾವತಿ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ವಿಭಾಗದ ನೌಕರರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ನೌಕರಿ ಖಾಯಂಗೊಳಿಸಲು ಒತ್ತಾಯಿಸಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನೇರಪಾವತಿ ಪೌರಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆ ನ್ಯಾಯಸಮ್ಮತವಾಗಿದೆ. ಅನೇಕ ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರ ನೌಕರಿಯನ್ನು ಖಾಯಂಗೊಳಿಸುವತ್ತ ಸರ್ಕಾರ ಗಮನ ಹರಿಸಬೇಕು. ಪೌರ ಕಾರ್ಮಿಕರ ಸೇವೆ ಅತ್ಯಂತ ಶ್ರೇಷ್ಟವಾದದ್ದು. ಈ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿರುವ ನೌಕರರ ನೌಕರಿಯನ್ನು ಸರ್ಕಾರ ತಕ್ಷಣ ಖಾಯಂಗೊಳಿಸುವ ಮೂಲಕ ಅವರಿಗೆ ಜೀವನ ಭದ್ರತೆ ಮತ್ತು ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ; ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಗುತ್ತಿಗೆ ಪೌರ ಕಾರ್ಮಿಕರು ಅನೇಕ ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಸರ್ಕಾರ ನೌಕರಿಯನ್ನು ಖಾಯಂಗೊಳಿಸುವತ್ತ ಗಮನ ಹರಿಸಬೇಕು. ಚಳುವಳಿಗೆ ಕುಳಿತವರನ್ನು ಕೆಲಸದಿಂದ ತೆಗೆದು ಹಾಕುವ ಪ್ರಯತ್ನ ಸಾಗರ ನಗರಸಭೆಯಲ್ಲಿ ನಡೆಯುತ್ತಿರುವುದನ್ನು ಖಂಡಿಸುತ್ತಿದ್ದೇವೆ. ಈ ಊರಿನಲ್ಲಿ ಅಂತಹದ್ದಕ್ಕೆ ಅವಕಾಶವಿಲ್ಲ. ಅಂತಹದ್ದು ಮಾಡಿದರೆ ಗುತ್ತಿಗೆದಾರನ ವಿರುದ್ಧ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆಡಳಿತ ಧರಣಿ ಕುಳಿತ ಪೌರ ಕಾರ್ಮಿಕರ ಪರ ನಿಲ್ಲಬೇಕು. ಧರಣಿ ಕುಳಿತ ಒಬ್ಬರಿಗೆ ತೊಂದರೆ ಕೊಟ್ಟರೂ ನಗರಸಭೆಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಸದಸ್ಯೆ ಮಧು ಮಾಲತಿ, ಸಂಘದ ಪ್ರಮುಖರಾದ ಕಾಮರಾಜ್, ಎಂ.ನಾಗರಾಜ್, ತಂಗರಾಜ್, ದೇವರಾಜ್, ನಾಗರಾಜ್ ವಿ., ವೀರಾ ಆರ್., ಸಿ.ಮೂರ್ತಿ, ರಾಜೇಂದ್ರ, ಮಹೇಶ್ ಎಂ., ತಂಗರಾಜ್, ಸಿ.ಮಣಿಕಂಠ, ರಾಘವೇಂದ್ರ, ಸತೀಶ್, ಮುರುಗೇಶ್, ಆನಂದ್ ಬಾಳೆಕೊಪ್ಪ, ಸುರೇಶ್, ಚೆಲುವಿ, ಸುಲೋಚನಾ ಇನ್ನಿತರರು ಹಾಜರಿದ್ದರು.