Advertisement

ಮುಕ್ತಿ ವಾಹನವೀಗ ಕೋವಿಡ್ ಜಾಗೃತಿ ರಥ!

06:21 PM Apr 11, 2020 | Naveen |

ಸಾಗರ: ಶವಗಳನ್ನು ಸಾಗಿಸುವ ನಗರದ ಮಾರಿಕಾಂಬಾ ಸಮಿತಿಯ ಮುಕ್ತಿ ವಾಹನ ಈಗ ಗಂಟೆ ಬಾರಿಸುತ್ತ ನಗರದ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿದೆ. ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಜನಜಾಗೃತಿ ವಹಿಸದಿದ್ದರೆ ಎದುರಾಗಬಹುದಾದ ಪರಿಸ್ಥಿತಿಯನ್ನು ಈ ವಾಹನ ಸಂಕೇತಿಸುತ್ತಿದೆ.

Advertisement

ತಾಲೂಕು ಆಡಳಿತದ ಅನುಮತಿ ಪಡೆದು ಸಾಗರದ ಮಾರಿಕಾಂಬಾ ಸಮಿತಿ ಮುಕ್ತಿ ವಾಹನವನ್ನು ಕೋವಿಡ್  ಜಾಗೃತಿ ಮೂಡಿಸುವ ರಥವನ್ನಾಗಿ ಪರಿವರ್ತಿಸಿದೆ. ಬೆಳಗ್ಗೆ 7ರಿಂದ 12ರ ವರೆಗೆ, ಸಂಜೆ 6ರಿಂದ 8 ಗಂಟೆ ವರೆಗೆ ಈ ವಾಹನ ಓಡಾಡುತ್ತದೆ. ಶವ ಮಲಗಿಸುವ ಪೆಟ್ಟಿಗೆಯ ಹಿಂಭಾಗದಲ್ಲಿ ಕೋಣನ ಎರಡು ಕೊಂಬುಗಳನ್ನು ಅಳವಡಿಸಲಾಗಿದೆ. ಬಣ್ಣದ ಲೈಟ್‌ಗಳಿವೆ.

ಸಮಿತಿಯ ಖಜಾಂಚಿ ನಾಗೇಂದ್ರ ಕುಮಟಾ ರಂಗಕರ್ಮಿಯೂ ಆಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಅದ್ಭುತ ವಿವರಣೆಯೊಂದನ್ನು ರೆಕಾರ್ಡಿಂಗ್‌ ಮಾಡಿಕೊಟ್ಟಿದ್ದಾರೆ. ಬಂಧುಗಳೇ, ಹೊರಗೆ ಬರಬೇಡಿ. ಕೋವಿಡ್ ನಿಮ್ಮನ್ನು ಅಪ್ಪಿಕೊಳ್ಳುತ್ತದೆ. ನಿಮ್ಮ ಸಾವು ಖಚಿತ. ಮುಕ್ತಿ ವಾಹಿನಿಯ ರಥವೇರಬೇಕೇ? ಹೊರಬನ್ನಿ. ಸುಮ್ಮನೇ ತಿರುಗಬೇಡಿ. ನೀವು ಹಾಗೂ ನಿಮ್ಮ ಕುಟುಂಬದ ಬದುಕು ನಿಮ್ಮ ಕೈಯಲ್ಲಿದೆ. ಸರ್ಕಾರ ನಿಮ್ಮ ಜೊತೆಯಲ್ಲಿದೆ. ದಯಮಾಡಿ ಸಹಕರಿಸಿ. ದೇಶವನ್ನು ಕೊರೊನಾ ಮುಕ್ತವನ್ನಾಗಿಸುವಾ ಬನ್ನಿ ಎಂಬ ಜಾಗೃತಿ ವಾಕ್ಯ ಮೈಕ್‌ನಲ್ಲಿ ಮೊಳಗುತ್ತದೆ.

ಮುಕ್ತಿ ವಾಹನ ಹಲವರಿಗೆ ಅಪಶಕುನ ಸೂಚಕ. ಹಾಗಾಗಿ, ಕೆಲವರು ಇದನ್ನು ನೋಡಿ ದೂರದಿಂದಲೇ ಓಡಿದರೆ, ಕೆಲವರು ರಥ ನೋಡಿ ಕೈ ಮುಗಿದು ಸಾಗುತ್ತಿದ್ದಾರೆ. ಮುಕ್ತಿ ವಾಹನ ಜನರಲ್ಲಿ ಭಯ ಮತ್ತು ಭಕ್ತಿ ಎರಡನ್ನೂ ಮೂಡಿಸುತ್ತಿದ್ದು, ಕೋವಿಡ್  ಜಾಗೃತಿ ಮೂಲಕ ಜನರನ್ನು ಎಚ್ಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next