ಸಾಗರ: ಮೇ 31ರಂದು ಗದಗದಲ್ಲಿ ನಡೆಯಲಿರುವ ಸೈನಿಕ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ತಾಲೂಕಿನ ಯುವ ಅಭ್ಯರ್ಥಿಗಳಿಗೆ ಅಗತ್ಯ ಪೂರಕ ದಾಖಲೆ ಸಿಗದೇ ಹತಾಶರಾಗಿ ದಿಕ್ಕೆಟ್ಟು ಕುಳಿತ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಗುರುವಾರ ಮಧ್ಯ ಪ್ರವೇಶಿಸಿದ್ದಾರೆ. ಸಹಾಯಕ ಆಯುಕ್ತ ದರ್ಶನ್ ಮತ್ತು ನಿವೃತ್ತ ನೌಕರ ಪರಶುರಾಮಪ್ಪ ಮುಂತಾದವರು ಸಕಾಲದಲ್ಲಿ ಗಮನಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೊಳಗೆ ಅವಶ್ಯ ದಾಖಲೆಗಳು ಸಿಕ್ಕಬಹುದು ಎಂಬ ಭರವಸೆ ಅಭ್ಯರ್ಥಿಗಳಿಗೆ ಸಿಕ್ಕಿದೆ.
ಒಂದೊಮ್ಮೆ ಈ ಪ್ರಯತ್ನಗಳ ನಂತರವೂ ಮುಂದಿನ ಕೆಲವು ಗಂಟೆಗಳಲ್ಲಿ ದಾಖಲೆ ಲಭಿಸದಿದ್ದರೆ ಈ ಬಾರಿ ಗದಗದಲ್ಲಿ ಸೈನಿಕ ಆಯ್ಕೆಯಲ್ಲಿ ಪಾಲ್ಗೊಳ್ಳುವ ತಾಲೂಕಿನ ಯುವಕರ ಕನಸು ಭಗ್ನಗೊಳ್ಳಲಿದೆ.
ತಾಲೂಕಿನ ಯುವಕರು ಸೈನ್ಯಕ್ಕೆ ಸೇರುವ ಹಂಬಲದಿಂದ ಮೇ 5ರಂದು ಇಲ್ಲಿನ ತಾಲೂಕು ಕಚೇರಿಯಲ್ಲಿ ವಾಸ ದೃಢೀಕರಣ ಪತ್ರ, ಆದಾಯ ಪ್ರಮಾಣ ಪತ್ರ ಮುಂತಾದ ಪೂರಕ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಹ ಆನ್‌ಲೈನ್ ಅರ್ಜಿ ಸಲ್ಲಿಸುವ ನಿಯಮದ ಸಲುವಾಗಿ ಖಾಸಗಿ ಕಂಪ್ಯೂಟರ್ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸುವಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಆ ನಂತರ ಕಳೆದ ಒಂದು ವಾರದಿಂದ ಪ್ರತಿದಿನ ಯುವಕರು ತಾಲೂಕು ಕಚೇರಿಗೆ ಬಂದು ಅಗತ್ಯ ದಾಖಲೆ ನೀಡುವಂತೆ ಕೋರಿದ್ದಾರೆ. ಆದರೆ ಸರ್ವರ್ ಸಮಸ್ಯೆ ಎಂದು ಹೇಳಿ ಇದುವರೆಗೂ ಯುವಕರಿಗೆ ದಾಖಲೆ ನೀಡಲಾಗಿಲ್ಲ. ಅಲ್ಲದೆ ಈ ಬಾರಿ ಈ ಯುವಕರು ಆನಂದಪುರ ಮುರುಘಾಮಠದ ಆವರಣದಲ್ಲಿ ಮಾಜಿ ಸೈನಿಕ ಭೈರಾಪುರದ ಶಿವಕುಮಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಹ ಭಾಗವಹಿಸಿದ್ದರಿಂದ ಆಯ್ಕೆಯಾಗುವ ಹೆಚ್ಚಿನ ಸಾಧ್ಯತೆಗಳನ್ನು ಅವರು ಹೊಂದಿದ್ದರು. ಆದರೆ ನಾಳೆಯೇ ಆಯ್ಕೆ ಕ್ಯಾಂಪ್ ನಡೆಯುವ ಹಿನ್ನೆಲೆಯಲ್ಲಿ ಯುವಕರು ಅಗತ್ಯ ದಾಖಲೆ ಸಿಗದೇ ಹತಾಶರಾಗಿದ್ದರು.
ಈ ನಡುವೆ ನಿವೃತ್ತ ನೌಕರ ಪರಶುರಾಮಪ್ಪ ಸಹ ತಾಲೂಕು ಕಚೇರಿಗೆ ಭೇಟಿ ನೀಡಿ, ದಾಖಲೆ ನೀಡುವಂತೆ ಸಿಬ್ಬಂದಿಗಳಿಗೆ ಮನವಿ ಮಾಡಿದ್ದರು. ಕಚೇರಿಯ ಕೆಲವು ನೌಕರರು ಸಹ ಸಂಬಂಧಪಟ್ಟ ಸಿಬ್ಬಂದಿಗಳಿಗೆ ಸಲಹೆ ನೀಡಿದ್ದರು. ಆದರೆ ಸರ್ವರ್ ಸಮಸ್ಯೆ ಎಂದು ಹೇಳಿ ತಾಲೂಕು ಕಚೇರಿ ಸಿಬ್ಬಂದಿಗಳು 25 ದಿನ ಕಳೆದರೂ ಯುವಕರಿಗೆ ತುರ್ತು ಬೇಕಾದ ದಾಖಲೆ ನೀಡಲಿಲ್ಲ.
ಈ ಹಿನ್ನೆಲೆಯಲ್ಲಿ ಮಾಹಿತಿ ತಿಳಿದ ಶಾಸಕ ಎಚ್. ಹಾಲಪ್ಪ ಖುದ್ದು ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆ ಕೊಡುವಂತೆ ಸೂಚಿಸಿದ್ದಾರೆ. ಅಲ್ಲದೆ ರಾಜ್ಯ ಮಟ್ಟದ ನೋಡೆಲ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾಂತ್ರಿಕ ಸಮಸ್ಯೆ ವಿವರಿಸಿದರು. ಆ ನಂತರ ಎಸಿ ದರ್ಶನ್ ಕೂಡ ತಾಲೂಕು ಕಚೇರಿಗೆ ಬಂದು ಯುವಕರ ಅಹವಾಲನ್ನು ಆಲಿಸಿದರು. ದಾಖಲೆ ಅಗತ್ಯವಾದ ಯುವಕರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡು, ರಾತ್ರಿಯೊಳಗೆ ದಾಖಲೆ ನೀಡಿ, ಮೇ 31ರಂದು ಗದಗದಲ್ಲಿ ನಡೆಯುವ ಆಯ್ಕೆ ಶಿಬಿರದಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಭರವಸೆ ನೀಡಿದರು.
ಕೃಷ್ಣಮೂರ್ತಿ ಜಂಬಾನೆ, ಪ್ರಶಾಂತ ಕೊರ್ಲಿಕೊಪ್ಪ, ಶಶಾಂಕ ಜಂಬೂರುಮನೆ, ಪ್ರಜ್ವಲ್ ಸಾಗರ, ಪ್ರತೀಕ ಸಾಗರ, ಪ್ರವೀಣ ಚೆನ್ನಶೆಟ್ಟಿಕೊಪ್ಪ, ಪ್ರವೀಣ ಗೌತಮಪುರ ಮುಂತಾದ ಯುವಕರು ಹಾಜರಿದ್ದು, ತಮ್ಮ ಸಮಸ್ಯೆ ವಿವರಿಸಿದರು. ತಹಶೀಲ್ದಾರ್ ನಾಗರಾಜ, ನಿವೃತ್ತ ನೌಕರ ಪರಶುರಾಮಪ್ಪ, ಪೋಷಕರಾದ ಗಣಪತಿ ಜಂಬಾನೆ ಮತ್ತಿತರರು ಇದ್ದರು.