Advertisement

ಸಾಗರ ಮಾರಿಕಾಂಬಾ ಜಾತ್ರೆ ಶುರು

03:24 PM Feb 19, 2020 | Suhan S |

ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಮಾರಿಕಾಂಬಾ ದೇವಿಯ ಜಾತ್ರೆಯು ಮಂಗಳವಾರದಿಂದ ಪ್ರಾರಂಭಗೊಂಡಿತು. ಜನಸಾಗರದ ನಡುವೆ ಪ್ರಾರಂಭಗೊಂಡಿರುವ ಜಾತ್ರೆಯು ಮುಂದಿನ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

Advertisement

ಮಂಗಳವಾರ ಬೆಳಗ್ಗೆ 3 ಗಂಟೆಗೆ ಮಹಾಗಣಪತಿ ದೇವಾಲಯದಲ್ಲಿ ದೇವಿಯ ತಾಳಿ ಮತ್ತು ಆಭರಣಗಳಿಗೆ ಪೂಜೆ ಸಲ್ಲಿಸಿ, ಅರ್ಚಕ ರಮೇಶ್‌ ಭಟ್ಟರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನಂತರ ಮಂಗಳವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಮಂಗಳದ್ರವ್ಯಗಳನ್ನು ತರಲಾಯಿತು. ಮೆರವಣಿಗೆಯಲ್ಲಿ ಕೇರಳದ ಕಲಾತಂಡದವರು ಚಂಡೆವಾದನ ನಡೆಸಿಕೊಟ್ಟರು. ದೇವಿಯ ತವರು ಮನೆಯಲ್ಲಿ ಉತ್ಸವಮೂರ್ತಿಗೆ ಆಭರಣ ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹಿಂದಿನ ವರ್ಷಗಳಿಗಿಂತ ಹೆಚ್ಚು ಜನಸ್ತೋಮ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗಿನ ಜಾವದಿಂದಲೇ ಜನರು ದೇವಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದರು. ಮಾರಿಕಾಂಬಾ ದೇವಸ್ಥಾನದಿಂದ ಪೊಲೀಸ್‌ ಠಾಣೆಯ ಚಾಮರಾಜಪೇಟೆ ವೃತ್ತವನ್ನು ದಾಟಿ ಸೇವಾ ಸಾಗರ ಶಾಲೆಯನ್ನು ತಲುಪಿದ ಸರದಿ ಸಾಲಿನಲ್ಲಿ ಜನರು ಶಾಂತಿಯಿಂದ ನಿಂತು ಅಮ್ಮನವರ ದರ್ಶನ ಪಡೆದರು. ಈ ಭಕ್ತಾದಿಗಳಿಗೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಾನಕ, ಕುಡಿಯುವ ನೀರು ಒದಗಿಸುವ ಮೂಲಕ ಅಮ್ಮನವರ ಸೇವೆ ಮಾಡಿದ್ದು ವಿಶೇಷವಾಗಿತ್ತು.

ಕೌಂಟರ್‌ ಮೂಲಕ ಸೇವೆ: ದೇವಿಗೆ ಹರಕೆ ಸಲ್ಲಿಸುವವರಿಗಾಗಿ ಪ್ರತ್ಯೇಕ ಕೌಂಟರ್‌ಗಳನ್ನು ವ್ಯವಸ್ಥಾಪಕ ಸಮಿತಿ ನಿರ್ಮಿಸಿತ್ತು. ಉಡಿಸೇವೆ, ತುಲಾಭಾರ ಹಾಗೂ ಕುಂಕುಮಾರ್ಚನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ದೇವಿ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರಿಗೆ ಸುಲಭವಾಗಿ ದರ್ಶನ ಸಿಗಲಿ ಎನ್ನುವ ಕಾರಣಕ್ಕೆ ವ್ಯವಸ್ಥಾಪಕ ಸಮಿತಿ ಒಂದು ಸಾವಿರ ರೂ. ಮುಖಬೆಲೆಯ ವಿಶೇಷ ಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ದರ್ಶನ ಪಡೆದವರಿಗೆ ವ್ಯವಸ್ಥಾಪಕ ಸಮಿತಿ ಗಡಿಯಾರ, ಸ್ಟೀಲ್‌ ತಟ್ಟೆ, ಪ್ರಸಾದ ನೀಡುವ ಜೊತೆಗೆ, ತಕ್ಷಣ ದರ್ಶನ ಅವಕಾಶ ಕಲ್ಪಿಸಿದ್ದರೂ ಈ ಸರದಿ ಸಾಲು ಸಹ ಮಾರಿಕಾಂಬಾ ದೇವಸ್ಥಾನದಿಂದ ಬಿ.ಎಚ್‌.ರಸ್ತೆಯವರೆಗೆ ಇತ್ತು. ಜನರು ಬಿಸಿಲನ್ನು ಸಹ ಗಮನಿಸದೆ ಅಮ್ಮನ ದರ್ಶನಕ್ಕೆ ಕಾಯುತ್ತಿದ್ದರು.

ಸ್ನೇಹಿತರಿಂದ ಊಟದ ವ್ಯವಸ್ಥೆ: ಪ್ರತಿಬಾರಿಯಂತೆ ಈ ಬಾರಿ ಸಹ ಸ್ನೇಹಿತರು ಎಂಬ ಹೆಸರಿನ ಸಂಸ್ಥೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ 19ರಿಂದ ದೇವಸ್ಥಾನ ಪಕ್ಕದ ನಗರಸಭೆ ಕಾಂಪ್ಲೆಕ್ಸ್‌ನಲ್ಲಿ ಉಚಿತ ಭೋಜನ ವ್ಯವಸ್ಥೆ ಮಾಡಿದೆ. ಜೊತೆಗೆ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಮಾರ್ಕೆಟ್‌ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಾತ್ರಾ ಯಶಸ್ಸಿಗೆ ಕೆಲಸ ಮಾಡುವವರಿಗೆ ಮತ್ತು ಬರುವ ಭಕ್ತಾದಿಗಳಿಗೆ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಸಹ ಮಾಡಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಚಾಲನಾ ಸಮಿತಿ, ಸಮಿತಿ ಸದಸ್ಯರು ಅಮ್ಮನವರ ದರ್ಶನಕ್ಕೆ ಬರುವವರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ನಿಗಾ ವಹಿಸಿದ್ದರೆ ಆರಕ್ಷಕ ಸಿಬ್ಬಂದಿಗಳ ಜೊತೆ ಗೃಹರಕ್ಷಕದಳ, ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ತಂಡ ಭಕ್ತಾದಿಗಳು ಸುಲಭವಾಗಿ ದೇವಿ ದರ್ಶನ ಮಾಡಲು ಸಹಕಾರ ನೀಡಿದ್ದು ಗಮನ ಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next