ಸಾಗರ: ನಗರದ ಮಾರಿಕಾಂಬಾ ದೇವಿಯ ಜಾತ್ರೆಯ ಉತ್ಸವ ಮೂರ್ತಿ ಮೆರವಣಿಗೆ ಮಂಗಳವಾರ ರಾತ್ರಿ ಅತ್ಯಂತ ವೈಭವದಿಂದ ನಡೆಯಿತು. ರಾತ್ರಿ 11-30ಕ್ಕೆ ಪ್ರಾರಂಭವಾದ ಮೆರವಣಿಗೆಯು ಬೆಳಗ್ಗೆ 6-30ಕ್ಕೆ ಅಮ್ಮನವರ ಗಂಡನ ಮನೆ ಪ್ರವೇಶದವರೆಗೂ 25 ಸಾವಿರಕ್ಕೂ ಅಧಿಕ ಜನಸ್ತೋಮದ ನಡುವೆ ನಡೆಯಿತು.
ಉಡುಪಿಯ ಕಲಾವಿದರ ಹುಲಿವೇಷ ಕುಣಿತ, ಕೇರಳದ ಚಂಡೆವಾದನ, ತಮಿಳುನಾಡಿನ ಪೆಂಪೆ, ಚಿಕ್ಕಮಗಳೂರಿನ ವೀರಗಾಸೆ, ಹಲಗೆ ಮೇಳ, ಡೊಳ್ಳು ಕುಣಿತ ಇನ್ನೂ ಸೇರಿದಂತೆ ಮುಂತಾದ ಕಲಾತಂಡಗಳ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಇದಕ್ಕೂ ಮೊದಲು ಅಮ್ಮನ ತವರು ಮನೆ ದೇವಸ್ಥಾನದಲ್ಲಿ ಹೆಣ್ಣು ಒಪ್ಪಿಸುವ ಶಾಸ್ತ್ರ ನಡೆಯಿತು. ಈ ಸಂದರ್ಭದಲ್ಲಿ ಪೋತರಾಜನು ಗಂಡನ ಮನೆಯಿಂದ ಉಡಿ ತರುವ ಶಾಸ್ತ್ರ ನಡೆಯಿತು. ಪೋತರಾಜ ಆವೇಶಗೊಂಡು ಕೆಲವು ಹೊತ್ತು ಅಮ್ಮನ ಎದುರು ಚಾಟಿಸೇವೆ ಮಾಡಿದನು. ನಂತರ ಗಂಡಿನ ಕಡೆಯವರು ಅಮ್ಮನನ್ನು ಹೊಗಳುವ, ತೆಗಳುವ ಶಾಸ್ತ್ರ ನಡೆಯಿತು. ನಂತರ ಉಪ್ಪಾರ ಸಮಾಜದವರಿಗೆ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹೆಣ್ಣು ಒಪ್ಪಿಸುವ ಶಾಸ್ತ್ರ ಮಾಡಿಕೊಟ್ಟರು.
ನಂತರ ದೇವಿಯ ದಂಡಿನ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಗಂಡನ ಮನೆಯಲ್ಲಿ ವಿಶೇಷ ಪೂಜೆ: ಬೆಳಗ್ಗೆ 6-30ಕ್ಕೆ ಗಂಡನ ಮನೆಗೆ ಶ್ರೀದೇವಿ ಉತ್ಸವ ಮೂರ್ತಿ ಆಗಮಿಸುತ್ತಿದ್ದಂತೆ ಅಮ್ಮನಿಗೆ ಒಡವೆ ವಸ್ತ್ರಗಳನ್ನು ತೊಡಿಸಿ, ಹೂವಿನ ಅಲಂಕಾರ ಮಾಡಲಾಯಿತು. ಬೆಳಗ್ಗೆ 9-30ಕ್ಕೆ ವಿಶೇಷ ಪೂಜೆ ನಡೆಯಿತು.
ಸಾವಿರಾರು ಭಕ್ತರು ಬಿಸಿಲಿನ ನಡುವೆಯೂ ಸರದಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದರು. ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್. ನಾಗೇಂದ್ರ, ಪೂಜಾ ಸಮಿತಿ ಸಂಚಾಲಕ ಗಂಗಾಧರ ಜಂಬಿಗೆ, ಜಯರಾಂ, ಬಸವರಾಜ್, ಜಯಂತಿ, ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ, ಪ್ರಚಾರ ಸಮಿತಿ ಸಂಚಾಲಕ ರವಿ ನಾಯ್ಡು ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಇದ್ದರು.