ಸಾಗರ: ಸತತ 15 ವರ್ಷಗಳಿಂದ ಅಧಿಕಾರಕ್ಕಂಟಿ ಕುಳಿತಿದ್ದು ಸಾರ್ವಜನಿಕರಿಗೆ ಕಾಲಕಾಲಕ್ಕೆ ಲೆಕ್ಕ ಕೊಡದಿರುವ, ಪಾರದರ್ಶಕವಾಗಿ ನಡೆದುಕೊಳ್ಳದಿರುವ ಇಲ್ಲಿನ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಗೆ ನಾಡಿನ ಶಕ್ತಿ ದೇವಿಯಲ್ಲೊಬ್ಬಳಾದ ಮಾರಿಕಾಂಬೆ ಬುದ್ಧಿ ಕೊಟ್ಟು ತತ್ ಕ್ಷಣ ಸರ್ವಸದಸ್ಯರ ಸಭೆ ಕರೆಯುವಂತೆ ಮಾಡಲಿ ಹಾಗೂ ದಕ್ಷತೆಯುಳ್ಳ ಹೊಸ ಸಮಿತಿಯನ್ನು ಆಯ್ಕೆ ಮಾಡಲನುವು ಮಾಡಿಕೊಡಲಿ ಎಂದು ಪ್ರಾರ್ಥಿಸಿ ಸೋಮವಾರ ಮಾರಿಕಾಂಬಾ ಹಿತರಕ್ಷಣಾ ಸಮಿತಿ ವತಿಯಿಂದ ಮಾರಿಕಾಂಬಾ ದೇವಿಯ ತವರುಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್, ಹಾಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಬಗ್ಗೆ ದೊಡ್ಡಮಟ್ಟದ ಭ್ರಷ್ಟಾಚಾರ ಆರೋಪವಿದೆ. ಟೆಂಡರ್ ಕರೆಯದೆ ಅನೇಕ ಕಾಮಗಾರಿಗಳನ್ನು ನಿರ್ವಹಿಸಿದ್ದು ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಚರ್ಚೆ ನಡೆಯುತ್ತಿದೆ. ಜಾತ್ರೆ ಮುಗಿದು ಆರು ತಿಂಗಳಿನೊಳಗೆ ಲೆಕ್ಕಪತ್ರ ನೀಡಿ ಹೊಸ ಸಮಿತಿ ಆಯ್ಕೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸಮಿತಿ ೮ ತಿಂಗಳಾದರೂ ಸರ್ವಸದಸ್ಯರ ಸಭೆ ಕರೆಯದೆ ದರ್ಭಾರು ನಡೆಸುತ್ತಿದೆ ಎಂದು ದೂರಿದರು.
ಹಾಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯಲ್ಲಿರುವ ಬಹುತೇಕ ಪದಾಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಳುಗಿದ್ದು, ದೇವಸ್ಥಾನದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ನಡೆಸುವರಿಂದ ದೇವಸ್ಥಾನದ ಅಭಿವೃದ್ಧಿ ಸಾಧ್ಯವಿಲ್ಲ. 15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಈಗ ಶಾಲೆ, ಆಸ್ಪತ್ರೆ ಕಟ್ಟುತ್ತೇವೆ ಎಂದು ಶಾಸಕರಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಹೇಳಿರುವುದು ಇವರು ಅಧಿಕಾರ ಬಿಟ್ಟು ಕೆಳಗೆ ಇಳಿಯಲು ಮನಸ್ಸಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ತಕ್ಷಣ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧಿಕಾರ ಬಿಟ್ಟು ಕೆಳಗೆ ಇಳಿಯಬೇಕು. ಸರ್ವಸದಸ್ಯರ ಸಭೆಯನ್ನು ಕರೆದು ಲೆಕ್ಕಪತ್ರ ಮಂಡಿಸುವ ಮೂಲಕ ಉತ್ಸಾಹಿಗಳಿಗೆ ದೇವಸ್ಥಾನದ ಚುಕ್ಕಾಣಿ ನೀಡಿ ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಸಮಿತಿ ವಿರುದ್ಧ ಇನ್ನಷ್ಟು ಉಗ್ರವಾದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿತರಕ್ಷಣಾ ಸಮಿತಿಯ ಟಿ. ರಾಮಪ್ಪ, ಟೀ ಪುಡಿ ಮಂಜು, ಗೋಪಾಲಕೃಷ್ಣ ಶ್ಯಾನಭಾಗ್, ಗುರುಬಸವ ಗೌಡ, ನಿತ್ಯಾನಂದ ಶೆಟ್ಟಿ, ರಾಮಣ್ಣ ಅರಮನೆಕೇರಿ, ಬಾಲಕೃಷ್ಣ, ಪ್ರೇಮ್‌ಸಿಂಗ್, ರಘುನಾಥ್ ಎಂ. ಧರ್ಮರಾಜ್ ಇನ್ನಿತರರು ಹಾಜರಿದ್ದರು.