ಸಾಗರ: ನಗರದ ಜೆಸಿ ರಸ್ತೆಯ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಾರಿಜಾತ್ರೆಯ ಅಂಗವಾಗಿ ಸೋಮವಾರ ಅಮ್ಯೂಸ್‌ಮೆಂಟ್ ಜಾಗದ ಹರಾಜು ಕಾರ್ಯ ನಡೆದಿದೆ. ಕೇರಳದ ದಿನೇಶ್ ಹಾಗೂ ಭದ್ರಣ್ಣ ಮಾಲೀಕತ್ವದ ವಿಜಯ್ ವಿಲ್ಸನ್ ಅಮ್ಯೂಸ್‌ಮೆಂಟ್‌ನ ವ್ಯವಸ್ಥಾಪಕ ಕುಷ್ಟಗಿ ಇಮ್ರಾನ್ ಅವರು ಅತ್ಯಂತ ಹೆಚ್ಚು ಮೊತ್ತದ ಹಣ ಕೂಗಿದ್ದಾರೆ.
65,55,555 ರೂ. ಮೊತ್ತದ ಹಣ ಬಿಡ್ ಆಗುವ ಮೂಲಕ ಈ ಸಾಲಿನ ಹರಾಜು ಪ್ರಕ್ರಿಯೆ ನಡೆದಿದೆ. 25ಕ್ಕೂ ಹೆಚ್ಚು ಮಧ್ಯವರ್ತಿಗಳು ಹಾಗೂ 5 ಐಟಂದಾರರು ಸೇರಿದಂತೆ ಸುಮಾರು 30 ಜನರು ಕ್ಲೋಸ್ಡ್
ಟೆಂಡರ್ ಪ್ರಕ್ರಿಯಲ್ಲಿ ಭಾಗವಹಿಸಿದ್ದರು. ಸಾಗರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಲ್.ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಹರಾಜು ಕಾರ್ಯದಲ್ಲಿ ಮಾರಿಕಾಂಬಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾಗೇಂದ್ರ, ಗಿರಿಧರ ಭಟ್ಟ, ನಾಗೇಂದ್ರ ಕುಮಟಾ, ನಗರಸಭಾ ಸದಸ್ಯ ಟಿ.ಡಿ. ಮೇಘರಾಜ್, ಹರಾಜು ಸಮಿತಿಯ ಸಂಚಾಲಕ ತಾರಾಮೂರ್ತಿ, ಬಸವರಾಜ್, ಬಾಲಕೃಷ್ಣ ಗುಳೇದ್ ಮುಂತಾದವರು ಇದ್ದರು. ಎರಡನೆಯ ಹೆಚ್ಚು ಮೊತ್ತವನ್ನು 64 ಲಕ್ಷ ರೂ. ರೆಹಮಾನ್ ಬಿಡ್ ಮಾಡಿದರೆ, 55 ಲಕ್ಷ ರೂ. ಮೊತ್ತಕ್ಕೆ ಬಿಡ್ ಮಾಡಿದ ಶ್ರೀನಾಥ್ ಮೂರನೆಯ ಬಿಡ್‌ದಾರರಾಗಿದ್ದರು.
ಯಶ ಪಡೆದ ಹಾಲಪ್ಪ: ಅಮ್ಯೂಸ್ ಮೆಂಟ್ ಪಾರ್ಕನ್ನು ಯಾವುದೇ ಬೆಲೆಗೆ ಹರಾಜು ಹಿಡಿದರೂ ತಾಲೂಕು ಹಾಗೂ ಇತರ ಭಾಗದ ಜನರಿಗೆ ಜಾತ್ರೆ ದುಬಾರಿಯಾಗಬಾರದು ಎಂಬ ನಿಲುವು ಪ್ರದರ್ಶಿಸಿದ್ದ ಶಾಸಕ ಎಚ್. ಹಾಲಪ್ಪ ಅಮ್ಯೂಸ್‌ಮೆಂಟ್ ಪಾರ್ಕ್‌ನ ಆಟಗಳ ಟಿಕೆಟ್ ದರ ಗರಿಷ್ಠ 50 ರೂ. ದಾಟುವಂತಿಲ್ಲ ಎಂಬ ನಿರ್ದೇಶನ ನೀಡಿದ್ದರು. ಈ ಬಾರಿ ಜಾತ್ರೆಯನ್ನು ದುಬಾರಿಯಾಗಲು ಬಿಡುವುದಿಲ್ಲ ಎಂಬ ಮಾತನ್ನು ಅವರು ಅವಕಾಶ ಸಿಕ್ಕ ಸಂದರ್ಭಗಳಲ್ಲಿ ಪುನರುಚ್ಚರಿಸಿದ್ದರು. ಈ ಕುರಿತು ಅವರು ಕೆಲದಿನಗಳ ಹಿಂದೆ ನಗರಸಭೆಯಲ್ಲಿ ಮಾರಿಕಾಂಬಾ ಜಾತ್ರಾ ಸಮಿತಿ ಹಾಗೂ ಅ ಧಿಕಾರಿಗಳ ಸಭೆ ಕೂಡ ನಡೆಸಿದ್ದರು. ಅವರ ಮಧ್ಯಪ್ರವೇಶದ ಕಾರಣ ಹರಾಜು ಹಿಡಿದ ಬಿಡ್‌ದಾರರಿಗೆ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಯಾವುದೇ ಆಟದ ಪ್ರವೇಶ ಶುಲ್ಕ 50 ರೂ. ನಿಗದಿಪಡಿಸುವ ಕರಾರು ಹಾಕಲಾಗಿದ್ದು ವಿಶೇಷವಾಗಿದೆ.
ಮಧ್ಯವರ್ತಿಗಳ ತಂತ್ರಗಾರಿಕೆ ವಿಫಲ: ಮಂಗಳವಾರ ನಡೆದ ಹರಾಜಿನ ಸಂದರ್ಭ ಮಧ್ಯವರ್ತಿಗಳು ತಾವೇ ಒಂದು ಗುಂಪು ರಚಿಸಿಕೊಂಡು 30-35 ಲಕ್ಷಕ್ಕೆ ಮೀರದಂತೆ ಬಿಡ್ ಮಾಡುವ ಯೋಜನೆ ರೂಪಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಈ ಗುಂಪಿನ ಮಾಹಿತಿ ಇಲ್ಲದ ಗುಂಪಿನೊಳಗೆ ಸೇರಿಕೊಳ್ಳದಿದ್ದ ಒಬ್ಬಿಬ್ಬರು ಮಧ್ಯವರ್ತಿಗಳು 30 ಲಕ್ಷ ರೂ. ಮೊತ್ತವನ್ನು ಮೀರಿ ಕೂಗಲು ಪ್ರಾರಂಭಿಸಿದಾಗ ಮಧ್ಯವರ್ತಿಗಳ ತಂತ್ರಗಾರಿಕೆ ವಿಫಲವಾಗಿದೆ ಎಂಬ ಮಾತು ಸಹ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಬಾರಿ ಅಮ್ಯೂಸ್‌ಮೆಂಟ್‌ನ ಮಾಲಿಕರೇ ಹರಾಜು ಹಿಡಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಹ ಆದಾಯವಾಗಿದ್ದು, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಪ್ರವೇಶ ಶುಲ್ಕ ನಿಗದಿಯಾಗಿದೆ.