Advertisement

ಬೆಂಗಳೂರಿಗೆ ಲಿಂಗನಮಕ್ಕಿ ನೀರು ಹರಿಸಲು ವಿರೋಧ

03:14 PM Jun 23, 2019 | Team Udayavani |

ಸಾಗರ: ಶಿವಮೊಗ್ಗ ಜಿಲ್ಲೆ ಒಂದು ದಿನ ಸ್ತಬ್ಧವಾಗುವ ಮೂಲಕ ಈ ಭಾಗದ ಜನರ ಅಭಿಪ್ರಾಯ ಸರ್ಕಾರಕ್ಕೆ ತಟ್ಟುವಂತಾಗಬೇಕು ಎಂಬ ಒಕ್ಕೊರಲಿನ ತೀರ್ಮಾನದಂತೆ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಜು. 10ರಂದು ಲಿಂಗನಮಕ್ಕಿ ಅಣೆಕಟ್ಟಿನಿಂದ ಬೆಂಗಳೂರಿಗೆ ಒಯ್ಯುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲೆ ಬಂದ್‌ಗೆ ಕರೆ ನೀಡುವ ನಿರ್ಣಯವನ್ನು ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಯಿತು.

Advertisement

ಡಾ| ನಾ.ಡಿಸೋಜ ಗೌರವಾಧ್ಯಕ್ಷತೆಯಲ್ಲಿ ಹಣಕಾಸು, ಕಾನೂನು ತಜ್ಞರು, ತಾಂತ್ರಿಕ ತಜ್ಞರು, ಬರ ಅಧ್ಯಯನಕಾರರು ಮತ್ತು ಮಾಧ್ಯಮ, ಸಾಮಾಜಿಕ ಜಾಲತಾಣ ಸಮಿತಿಗಳನ್ನು ರಚಿಸಲಾಗಿದ್ದು, ಅಂದಾಜು ರೂ 15 ಸಾವಿರದಷ್ಟು ಮೊದಲ ಸಭೆಯಲ್ಲಿ ಸಂಗ್ರಹವಾಯಿತು.

ರಾಜ್ಯ ಸರ್ಕಾರ ಅಸಾಧುವಾದ ಯೋಜನೆಯನ್ನು ಸಾಧ್ಯವಾಗಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಬರೀ ನಗರಗಳೇ ದೇಶ, ರಾಜ್ಯಕ್ಕೆ ಬೇಕು ಎಂಬುದರ ಬಗ್ಗೆ ಚರ್ಚೆಯಾಗಬೇಕು. ಸರ್ಕಾರ ಮೊದಲು ಬೆಂಗಳೂರು ಅಭಿವೃದ್ಧಿಯನ್ನು ಮಿತಿಗೊಳಿಸಿ, ಕಾಡಿನ ನಾಶವನ್ನು ಮಿತಗೊಳಿಸುವತ್ತ ಗಮನ ಹರಿಸಲಿ ಎಂದು ದೇಸಿ ಚಿಂತಕ ಪ್ರಸನ್ನ ಹೆಗ್ಗೋಡು ಒತ್ತಾಯಿಸಿದರು.

ಶರಾವತಿ ಘಟ್ಟದ ಕೆಳಗೆ ಹರಿಯುವ ನದಿ. ಅದನ್ನು ಅದನ್ನು ಘಟ್ಟದ ಮೇಲಕ್ಕೆ ಒಯ್ಯುತ್ತೇವೆ ಎನ್ನುವುದು ಗುಡ್ಡಕ್ಕೆ ಮಣ್ಣು ಹೊತ್ತು ಹಾಕುತ್ತೇವೆ ಎನ್ನುವಂತೆ ಆಗಿದೆ. ಮಲೆನಾಡಿನ ಗ್ರಾಮೀಣ ಪ್ರದೇಶದ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಬರ ಇದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಬೆಂಗಳೂರಿಗೆ ಶರಾವತಿ ನೀರು ಒಯ್ಯುತ್ತೇವೆ ಎನ್ನುವುದನ್ನು ನಾವು ಒಕ್ಕೊರಲಿನಿಂದ ಖಂಡಿಸಬೇಕು ಎಂದರು.

ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಮಾತನಾಡಿ, ಶರಾವತಿ ಸುಮಾರು 132 ಕಿಮೀ ಹರಿಯುವ ವಿಶಾಲ ನದಿ. ಈ ನದಿಗೆ ತನ್ನದೇ ಶ್ರೇಷ್ಟತೆ, ಪ್ರದೇಶವಾರು ವಿಸ್ತಾರತೆ ಇದೆ. ಅಂತಹ ನದಿಯ ನೀರು ಸಮುದ್ರ ಸೇರುತ್ತದೆ ಎಂದು ಅದನ್ನು ಬೆಂಗಳೂರಿಗೆ ಹರಿಸುವ ನಿರ್ಧಾರ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ ನಿರ್ಣಯ. ಇದರಿಂದ ರಾಜ್ಯದ ಜನರ ಕೋಟ್ಯಂತರ ರೂಪಾಯಿ ಹಣ ಅಪವ್ಯಯವಾಗುವುದು ಬಿಟ್ಟರೆ ಬೆಂಗಳೂರಿಗೆ ಖಂಡಿತವಾಗಿಯೂ ನೀರು ಹರಿಸಲು ಸಾಧ್ಯವಿಲ್ಲ ಎಂದರು.

Advertisement

ಲಿಂಗನಮಕ್ಕಿ ಅಣೆಕಟ್ಟಿನಲ್ಲಿ 151 ಟಿಎಂಸಿ ನೀರು ಸಂಗ್ರಹವಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಅದರಲ್ಲಿ ಶೇ. 40ರಷ್ಟು ಹೂಳು ತುಂಬಿದೆ. ಸುತ್ತಮುತ್ತಲು ಸಣ್ಣ ಮಳೆಯಾದರೂ ಡ್ಯಾಂ ತುಂಬುತ್ತದೆ. ಸರ್ಕಾರ ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮಲೆನಾಡಿಗರಾದ ನಾವು ಶರಾವತಿ ನದಿಯನ್ನು ಕಾಪಾಡಿಕೊಳ್ಳಲು ಹೋರಾಟ ರೂಪಿಸುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಇಂಧನ ತಜ್ಞ ಶಂಕರ ಶರ್ಮ ಮಾತನಾಡಿ, ತ್ಯಾಗರಾಜ ಸಮಿತಿ ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕವಾದದ್ದು. ಮೊದಲ ಹಂತದಲ್ಲಿ 30 ಟಿಎಂಸಿ, ಎರಡನೇ ಹಂತದಲ್ಲಿ 30 ಟಿಎಂಸಿ ನೀರನ್ನು ಬೆಂಗಳೂರಿಗೆ ಒಯ್ಯಬಹುದು ಎಂದು ಹೇಳಿರುವ ತಜ್ಞರ ತಂಡವೇ ಒಂದು ಮೂರ್ಖರ ತಂಡವಾಗಿದೆ. ಇದರಿಂದ ವಿದ್ಯುತ್‌ ಉತ್ಪಾದನೆ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ. ಯೋಜನೆ ಸಾಮಾಜಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಪರಿಸರದ ಹಿನ್ನೆಲೆ ಇರಿಸಿಕೊಂಡು ಮಾಡಿಲ್ಲ. ಸರ್ಕಾರ ಹೊಸಪೇಟೆಯಲ್ಲಿ ತುಂಗಭದ್ರಾ ಜಲಾಶಯದಿಂದ ಬೆಂಗಳೂರಿಗೆ, ಉತ್ತರ ಕನ್ನಡದ ಕಾಳಿ ನದಿಯಿಂದ ಬೆಂಗಳೂರಿಗೆ ನೀರು ಒಯ್ಯುವ ಯೋಜನೆ ಸಹ ಅವೈಜ್ಞಾನಿಕವಾಗಿಯೇ ರೂಪಿಸುತ್ತಿದೆ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಟಿ.ಡಿ. ಮೇಘರಾಜ್‌, ಬಿ.ಆರ್‌. ಜಯಂತ್‌, ಪರಿಸರ ತಜ್ಞ ಅಖೀಲೇಶ್‌ ಚಿಪಿÛ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿದಂಬರರಾವ್‌ ಜಂಬೆ, ಕೆ.ಜಿ. ಕೃಷ್ಣಮೂರ್ತಿ, ರೈತ ಮುಖಂಡ ಗೂರಲಕೆರೆ ಚಂದ್ರಶೇಖರ್‌, ಜಿಪಂ ಸದಸ್ಯ ಕಲಗೋಡು ರತ್ನಾಕರ್‌, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಒಕ್ಕೂಟದ ಪ್ರಮುಖರಾದ ಎಚ್.ಬಿ. ರಾಘವೇಂದ್ರ, ಹರ್ಷಕುಮಾರ್‌ ಕುಗ್ವೆ, ಶಶಿ ಸಂಪಳ್ಳಿ, ಪ್ರಮುಖರಾದ ಅಜಯ್‌ ಶರ್ಮ, ಅ.ಪು. ನಾರಾಯಣಪ್ಪ, ಕೆ.ವಿ. ಪ್ರವೀಣ್‌, ಮಿಥುನ್‌ ಹೇರ್ಗಳ, ವಾಮದೇವ ಗೌಡ, ಪ್ರದೀಪ್‌ ಹೊದಲ ತೀರ್ಥಹಳ್ಳಿ, ಪ್ರಭಾವತಿ ಚಂದ್ರಕಾಂತ್‌, ಹುಚ್ಚರಾಯಪ್ಪ, ಸರಸ್ವತಿ ನಾಗರಾಜ್‌, ವಿಲಿಯಂ, ಏಸುಪ್ರಕಾಶ್‌, ಅ.ರಾ. ಲಂಬೋದರ್‌, ಶಿವಾನಂದ ಕುಗ್ವೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next