Advertisement

ಮಾತ್ರೆ ಬಳಸಿ ಕೊಳೆರೋಗ ನಿಯಂತ್ರಣ

05:14 PM Jul 13, 2019 | Naveen |

ಸಾಗರ: ಅಡಕೆ ಬೆಳೆಯ ಕೊಳೆ ರೋಗ ನಿಯಂತ್ರಣಕ್ಕೆ ಹೊಸ ಔಷಧಗಳನ್ನು ಕಂಡುಹಿಡಿಯಲಾಗುತ್ತಿದ್ದು ಅಡಕೆ ಮರದ ಬುಡಕ್ಕೆ ಮಾತ್ರೆಗಳನ್ನು ಹಾಕಿ ರೋಗ ಬರದಂತೆ ಹತೋಟಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ. ಈ ಕೊಳೆರೋಗ ನಿಯಂತ್ರಣ ಔಷಧ ಪ್ರಯೋಗದ ಹಂತದಲ್ಲಿದ್ದು ಮುಂದಿನ 2 ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಶಿವಮೊಗ್ಗ ನವಿಲೆಯ ಅಡಕೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ| ಎಚ್. ನಾರಾಯಣ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಉಳ್ಳೂರಿನ ಸಿಗಂದೂರೇಶ್ವರಿ ಎಜುಕೇಶನಲ್ ಟ್ರಸ್ಟ್‌, ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ನವಿಲೆ ಇವರ ಸಹಯೋಗದಲ್ಲಿ ಅಡಕೆ ಕೃಷಿ ಮತ್ತು ಸಂರಕ್ಷಣೆ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕ ಬೆಳೆಯಾಗಿರುವ ಅಡಕೆಗೆ ಮಳೆಗಾಲದಲ್ಲಿ ಕೊಳೆರೋಗದಿಂದ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ನಷ್ಟವನ್ನು ತಪ್ಪಿಸಲು ಸೂಕ್ತ ಸಮಯದಲ್ಲಿ ಸುಧಾರಿತ ರೋಗ ನಿಯಂತ್ರಕ ಔಷಧಗಳನ್ನು ಬಳಸಿಕೊಳ್ಳಬೇಕು. ಅಡಕೆ ಬೇಸಾಯದ ಕ್ರಮದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಿದ್ದು ಅದರ ಉತ್ಪಾದಕತೆ ಹಾಗೂ ಬೆಳವಣಿಗೆಯಲ್ಲೂ ವ್ಯತ್ಯಾಸವಿದೆ. ನಿಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿಯನ್ನು ಆಯ್ಕೆ ಮಾಡಿಕೊಂಡು ತೋಟವನ್ನು ನಿರ್ಮಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಅನೇಕ ಅಡಕೆ ತಳಿಗಳಿದ್ದು ದಶಾವರಿ, ಮೋಹಿತ್‌ ನಗರ್‌, ಮಂಗಳ, ಸ್ವರ್ಣಮಂಗಳ, ಸುಮಂಗಲಾ ಹಾಗೂ ಇನ್ನೂ ಮುಂತಾದ ಹೊಸ ತಳಿಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು. ಆತಿಥೇಯ ಸಂಸ್ಥೆಯ ಅಧ್ಯಕ್ಷ ಎನ್‌. ಕೃಷ್ಣಮೂರ್ತಿ ಬಿಳೆಗಲ್ಲೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಶೇ. 70ರಷ್ಟು ಜನ ಕೃಷಿಕರಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಹವಾಮಾನ ವೈಪರೀತ್ಯದಿಂದ ರೈತರು ನಷ್ಟ ಅನುಭವಿಸುತ್ತಿದ್ದು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಬಳಸುತ್ತಿರುವ ಬೋರ್ಡೋ ದ್ರಾವಣ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ| ಎಂ.ಎಸ್‌. ಪ್ರಶಾಂತ್‌ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಉಮೇಶ್‌, ಪ್ರಗತಿಪರ ಕೃಷಿಕರಾದ ಶಶಿಕುಮಾರ್‌, ಕೃಷ್ಣಮೂರ್ತಿ ನಂದೀತಳೆ, ಚಂದ್ರಪ್ಪ ಉಳ್ಳೂರು, ಉಪನ್ಯಾಸಕರಾದ ಎಂ.ಕೆ. ಕೃಷ್ಣಮೂರ್ತಿ, ಚಂದ್ರಶೇಖರ್‌ ಕಾಂಜನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next