Advertisement

ಸಾಗರದಲ್ಲಿ 9 ಕೆಎಫ್‌ಡಿ ಕೇಸ್‌ ನೆಗೆಟಿವ್‌

01:32 PM Apr 11, 2020 | Naveen |

ಸಾಗರ: ತಾಲೂಕಿನ ಒಂಭತ್ತು ಪ್ರಕರಣಗಳಲ್ಲಿ ಮಂಗನ ಕಾಯಿಲೆಯ ವೈರಸ್‌ ಪತ್ತೆಯಾಗಿಲ್ಲ ಎಂಬ ಮಾಹಿತಿ ದೊರೆತಿದೆ. ಕಾರ್ಗಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ನಾಲ್ಕು, ತುಮರಿಯ 2 ಹಾಗೂ ಆವಿನಹಳ್ಳಿ, ಬ್ಯಾಕೋಡು, ಅರಳಗೋಡು ಪಿಎಚ್‌ಸಿ ವ್ಯಾಪ್ತಿಯ ತಲಾ ಒಂದು ಪ್ರಕರಣಗಳಲ್ಲಿ ರಕ್ತವನ್ನು ಪರೀಕ್ಷೆಗಾಗಿ ವಿಡಿಎಲ್‌ಗೆ ಕಳುಹಿಸಲಾಗಿತ್ತು. ಈ ಮಧ್ಯೆ ಮೂರು ದಿನಗಳಲ್ಲಿ ಎರಡು ಕೆಎಫ್‌ಡಿ ಪಾಸಿಟಿವ್‌ ಕಾಣಿಸಿದ ತುಮರಿ ಗ್ರಾಪಂ ವ್ಯಾಪ್ತಿಯ ಮಾರಲಗೋಡಿನಲ್ಲಿ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಆರೋಗ್ಯ ಇಲಾಖೆ ಜೊತೆ ಗ್ರಾಮಸ್ಥರೊಂದಿಗೆ ಗುರುವಾರ ಪರಿಶೀಲನಾ ಸಭೆ ನಡೆಸಿದರು.

Advertisement

ಅರಣ್ಯ ಇಲಾಖೆಯ ಫಾರೆಸ್ಟರ್‌ ರಾಘವೇಂದ್ರ, ಗಾರ್ಡ್‌ ರಾಜೇಶ್ವರಪ್ಪ, ಎಪಿಎಂಸಿ ಸದಸ್ಯರಾದ ಓಂಕಾರ್‌ ಜೈನ್‌, ಸದಸ್ಯರಾದ ಲೋಕಣ್ಣ, ಸುಮಿತ್ರಾ, ಜಡಿ ಕೃಪಾ, ಆರೋಗ್ಯ ಕಾರ್ಯಕರ್ತೆ ರಾಜೇಶ್ವರಿ, ಆಶಾ ಕಾರ್ಯಕರ್ತೆ ಚಂದ್ರಕಲಾ ಮತ್ತು ರುಕ್ಮಿಣಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಕಮಲಮ್ಮ ಹಾಗೂ ಮಂಗನ ಕಾಯಿಲೆಯಿಂದ ಗುಣಮುಖರಾಗುತ್ತಿರುವ ತುಮರಿ ಸೊಸೈಟಿ ನಿರ್ದೇಶಕ ಮಂಜಪ್ಪ ಹೆಸಿಗೆ ಅನುಭವಗಳನ್ನು ಹಂಚಿಕೊಂಡರು.

ಕಾಡಿನ ಜತೆ ಇರುವ ಸಂಬಂಧ ಕಡಿದುಕೊಳ್ಳದಿದ್ದರೆ, ಮುನ್ನೆಚ್ಚರಿಕೆ ಇಡದೇ ಇದ್ದರೆ ಮಂಗನ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದರಕು, ಕಟ್ಟಿಗೆ, ಮಾವಿನಕಾಯಿ, ವಾಟೆಕಾಯಿ ಹುಡುಕಲು ಸ್ಥಗಿತಗೊಳಿಸುವುದು ಅನಿವಾರ್ಯ. ಸತ್ತ ಮಂಗ ತಿನ್ನುತ್ತಿರುವ ನಾಯಿಗಳ ಬಗ್ಗೆ ಎಚ್ಚರ ಮತ್ತು ನಿಯಂತ್ರಣ ಕೂಡ ಮುಖ್ಯವಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಉಳಿದೆಡೆ ಪಾಸಿಟಿವ್‌: ವಿಡಿಎಲ್‌ ವರದಿಯನ್ವಯ ತಾಲೂಕಿನ ಪಕ್ಕದ ಸಿದ್ದಾಪುರದಲ್ಲಿ ನಾಲ್ಕು ಹಾಗೂ ತೀರ್ಥಹಳ್ಳಿಯ ಒಂದು ಪ್ರಕರಣದಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ. ವಿಡಿಎಲ್‌ ಒಟ್ಟು 36 ರಕ್ತದ ಸ್ಯಾಂಪಲ್‌ ಪರಿಶೀಲಿಸಿದ್ದು, ಸಾಗರದ 9 ಪ್ರಕರಣಗಳನ್ನು ಹೊರತುಪಡಿಸಿ ತೀರ್ಥಹಳ್ಳಿಯ 13, ಸಿದ್ದಾಪುರದ 7, ಸೊರಬ ಹಾಗೂ ಚಿಕ್ಕಮಂಗಳೂರು ಜಿಲ್ಲೆ ಕೊಪ್ಪದ ತಲಾ ಒಂದು ಪ್ರಕರಣಗಳಲ್ಲಿ ಕೆಎಫ್‌ಡಿ ವೈರಸ್‌ ನೆಗೆಟಿವ್‌ ಬಂದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next