ಸಾಗರ: ಕೊರೊನಾ ಲಾಕ್ಡೌನ್ನಿಂದ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಕೆರೆ ಬೇಟೆ ನಡೆದಿರದ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಂತರ ಈ ಬಾರಿ ಮಲೆನಾಡಿನಾದ್ಯಂತ ಕೆರೆಗಳಲ್ಲಿ ಮೀನು ಹಿಡಿಯುವ ಕೆರೆ ಬೇಟೆ ವಿಜೃಂಭಣೆಯಿಂದ ನಡೆಯುತ್ತಿದ್ದು ಕೆಳದಿಯ ಕೆರೆಬೇಟೆಯಲ್ಲಿ 8 ಕೆಜಿ ಗಾತ್ರದ ಕಾಟ್ಲ ಮೀನು ಸೆರೆ ಸಿಕ್ಕು ಗಮನ ಸೆಳೆಯಿತು.
ತಾಲೂಕಿನ ಕೆಳದಿಯ ಮಠದ ಕೆರೆಯಲ್ಲಿ ಕೆರೆ ಬೇಟೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ನೀರಿಗಿಳಿದು ಮೀನು ಹಿಡಿಯಲು ಮುಂದಾದರು. ಹೆಂಗಸರು ಮಂಕರಿ ಹಿಡಿದು ಗೋರಿ, ಸಣ್ಣ ಮೀನು ಹಿಡಿದರೆ, ಪುರುಷರು ಬಿದಿರಿನಿಂದ ತಯಾರಿಸಿದ ಕುಣಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಬೇಟೆಯಾಡಿದರು. ಮುರಗೋಡು, ಕುಚ್ಚಿ, ಚೇಳು, ಕಾಟ್ಲ ಅಲ್ಲದೇ ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಹಿಡಿದರು. ಇಡೀ ಊರಿನ ಜನರು ಮೀನು ಹಿಡಿದು ಸಂಭ್ರಮಿಸಿದರು.
ಕೆರೆಯಲ್ಲಿ ಒಂದು ಕಡೆ ಮೀನು ಸಿಕ್ಕ ಖುಷಿ, ಇನ್ನೊಂದು ಕಡೆ ಎಲ್ಲರೂ ಒಟ್ಟಿಗೆ ಓಡಾಡುವಾಗ ಗದ್ದಲವೋ ಗದ್ದಲ. ಕೆರೆಯಲ್ಲಿ ಭಾರಿ ಗಾತ್ರದ ಮೀನುಗಳು ಕೂಡ ಬಲೆಗೆ ಸಿಕ್ಕವು. ಮೀನು ಹಿಡಿದ ಮೇಲೆ ಅದರಲ್ಲಿ ಸಾಂಬಾರು ತಯಾರಿಸಿ ಅಕ್ಕಿ ರೊಟ್ಟಿ ಸುಟ್ಟು ಹತ್ತಿರದ ಸಂಬಂಧಿಕರು, ಅಳಿಯಂದಿರನ್ನು ಆಹ್ವಾನಿಸಿ ಔತಣ ಏರ್ಪಡಿಸುತ್ತಾರೆ. ಕೆರೆಬೇಟೆಯಲ್ಲಿ ಸ್ಥಳೀಯರಿಗೆ, ಒಂದು ಮನೆಯಿಂದ ಒಬ್ಬೊಬ್ಬರಿಗೆ ಮಾತ್ರ ಅವಕಾಶವಿತ್ತು. ಕೆರೆಬೇಟೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಪ್ರತಿಯೊಬ್ಬರು ಕೆರೆ ಮೀನನ್ನು ಹಿಡಿದು ಅದನ್ನು ವಿವಿಧ ಆಹಾರ ಪದಾರ್ಥಗಳನ್ನು ಮಾಡಿ ತಿನ್ನಬೇಕು ಎನ್ನುವುದು ಕೆರೆ ಬೇಟೆಯ ಉದ್ದೇಶ ಎಂದು ಪ್ರಗತಿಪರ ಕೃಷಿಕ ರಮೇಶ್ ಈ. ತಿಳಿಸಿದರು.
ಇದನ್ನೂ ಓದಿ : ರಮ್ಯಾ ವಿರುದ್ಧ ಸೂಕ್ತ ಕ್ರಮಕ್ಕೆ ಗೋಪಾಲಕೃಷ್ಣ ಬೇಳೂರು ಒತ್ತಾಯ