ಸಾಗರ: ತಾಲೂಕಿನ ಚೆನ್ನಗೊಂಡ ಗ್ರಾಪಂ ವ್ಯಾಪ್ತಿಯ ಕಾರಣಿ ಗ್ರಾಮದ 25 ವರ್ಷದ ಯುವಕನಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಾಲ್ಕು ಮನೆಗಳಿರುವ ಪೂರ್ಣ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.
ಗ್ರಾಮದ ಎಲ್ಲಾ ಮನೆಯವರಿಗೆ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದ್ದು, ಅವರಿಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಜೀವನಾವಶ್ಯಕ ವಸ್ತುಗಳ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಪಿ 5827 ಜೂನ್ 4ರಂದು ಮುಂಬೈಯಿಂದ ಶ್ರಮಿಕ್ ರೈಲಿನಲ್ಲಿ ಬೈಂದೂರಿಗೆ ಬಂದಿದ್ದಾರೆ. ಅಲ್ಲಿನ ರೈಲ್ವೆ ನಿಲ್ದಾಣದಲ್ಲಿ ಅವರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಬೈಂದೂರಿನಿಂದ ಕಾರಣಿ ಗ್ರಾಮದಲ್ಲಿರುವ ತಮ್ಮ ಸಹೋದರನ ಮನೆಗೆ ಇವರು ಬಂದಿದ್ದಾರೆ.
ಕೋವಿಡ್ ಪೀಡಿತ ಪ್ರದೇಶದಿಂದ ಬಂದಿರುವ ವ್ಯಕ್ತಿ ಎನ್ನುವ ಕಾರಣಕ್ಕೆ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಶಿವಮೊಗ್ಗದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಜ್ವರ, ಕೆಮ್ಮಿನ ಲಕ್ಷಣಗಳು ಕಾಣಿಸಿಲ್ಲ ಎನ್ನಲಾಗಿದೆ. ಈ ನಡುವೆ ಸೋಂಕು ತಗುಲಿರುವ ವ್ಯಕ್ತಿಯ ಅಣ್ಣ, ಅತ್ತಿಗೆ ಹಾಗೂ ಇಬ್ಬರು ಮಕ್ಕಳ ಗಂಟಲು ದ್ರವದ ಮಾದರಿಯನ್ನು ಕೂಡ ಮಂಗಳವಾರವೇ ಪರೀಕ್ಷೆಗೆ ಕಳುಹಿಸಲಾಗಿದ್ದರೆ, ಬುಧವಾರ ತಾಯಿಯ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ತಲುಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ತಾಯಿಯನ್ನು ಕೂಡ ಕೋವಿಡ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ನಡುವೆ ಕಾರಣಿಯಲ್ಲಿ ಸೋಂಕಿತ ನೆಲೆಸಿದ ಮನೆಗೆ ಬುಧವಾರ ವೈರಸ್ ನಾಶಕ ದ್ರಾವಣ ಸಿಂಪಡಣೆ ಮಾಡಲಾಗಿದೆ.
ಸೋಂಕಿತ ಹೋಂ ಕ್ವಾರಂಟೈನ್ ನಿಯಮ ಪಾಲಿಸದೆ ಕುಟುಂಬದ ಇತರ ಸದಸ್ಯರೊಂದಿಗೆ ಹಲವೆಡೆ ಸಂಚರಿಸಿರುವುದರಿಂದ ಮನೆಯ ಉಳಿದ ಐವರ ಪರೀಕ್ಷಾ ವರದಿಯನ್ನು ಸ್ಥಳೀಯ ಜನ ಆತಂಕದಿಂದ ನಿರೀಕ್ಷಿಸುವಂತಾಗಿದೆ. ಒಂದೊಮ್ಮೆ ಉಳಿದವರಲ್ಲಿ ಒಬ್ಬರಿಗೆ ಪಾಸಿಟಿವ್ ಬಂದರೂ ಅವರ ಸಂಪರ್ಕಗಳನ್ನು ಪತ್ತೆ ಹಚ್ಚುವುದು ಜಟಿಲವಾಗಲಿದೆ. ಈ ಸಂಬಂಧ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ್ ಕರೂರು, ಗ್ರಾಪಂ ವ್ಯಾಪ್ತಿಯ ಜನರು ಯಾವುದೇ ನಿರ್ಲಕ್ಷ್ಯ ಮಾಡದೆ ಕೋವಿಡ್ 19 ಸಂಬಂಧ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳನ್ನು ಅನುಸರಿಸಲು ಮನವಿ ಮಾಡಿದ್ದಾರೆ.