Advertisement

ಕನ್ನಡ ಆಡಳಿತ ಭಾಷೆಯಾಗಲಿ: ಹಕ್ರೆ

07:32 PM Nov 02, 2019 | Naveen |

ಸಾಗರ: ಸುಮಾರು 45 ವರ್ಷಗಳ ಹಿಂದೆ ನೀಡಲಾದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವ ಮೂಲಕ ಕರ್ನಾಟಕದಲ್ಲಿ ಆಡಳಿತ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಚ್‌.ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದ್ದಾರೆ.

Advertisement

ನಗರದ ಕೆಳದಿ ರಸ್ತೆಯ ರಾಣಿ ಚೆನ್ನಮ್ಮಾಜಿ ವೃತ್ತದಲ್ಲಿ ಶುಕ್ರವಾರ ವಿದ್ಯಾರಣ್ಯ ಯುವಕ ಸಂಘ ಮತ್ತು ನಗರಸಭೆ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಇಂದಿಗೂ ನ್ಯಾಯಾಲಯ ಸೇರಿದಂತೆ ಕೆಲವು ಕಚೇರಿಗಳಲ್ಲಿ ಕನ್ನಡ ಭಾಷೆ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಬಹುತೇಕ ವ್ಯವಹಾರಗಳು ಇಂಗ್ಲಿಷ್‌ ಭಾಷೆಯಲ್ಲಿ ನಡೆಯುತ್ತಿದೆ. ಇದರಿಂದ ಕನ್ನಡ ಭಾಷೆಗೆ ಅಪಮಾನವಾಗುತ್ತಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಅಧಿಕಾರಿಗಳು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಭಾಷೆಯ ಕುರಿತು ತೋರುಗಾಣಿಕೆ ಪ್ರೀತಿ ತೋರಿಸುವುದಕ್ಕಿಂತ ತಮ್ಮ ಕಚೇರಿಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.ಕೆಳದಿಯಿಂದ ಆಗಮಿಸಿದ ವಿದ್ಯಾರಣ್ಯ ಕನ್ನಡ ಜ್ಯೋತಿಯನ್ನು ಸ್ವಾಗತಿಸಿ ಮಾತನಾಡಿದ ಸಹಾಯಕ ಆಯುಕ್ತ ಡಾ| ಎಲ್‌. ನಾಗರಾಜ್‌, ಕನ್ನಡ ಭಾಷೆ ಎನ್ನುವುದು ನಮ್ಮ ಸಂಸ್ಕೃತಿಯಾಗಿದೆ. ಕನ್ನಡ ಭಾಷೆಗೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಭಾಷೆಯ ಬೆಳವಣಿಗೆಗೆ ಕನ್ನಡಿಗರಾದ ನಾವೆಲ್ಲ ಸಂಘಟಿತವಾಗಿ ಪ್ರಯತ್ನ ನಡೆಸಬೇಕಾಗಿದೆ ಎಂದು ತಿಳಿಸಿದರು.

ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರಪ್ಪ, ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌, ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ಎಎಸ್‌ಪಿ ಯತೀಶ್‌ ಎನ್‌., ಪೌರಾಯುಕ್ತ ಎಸ್‌. ರಾಜು, ತಾಪಂ ಕಾರ್ಯ ನಿರ್ವಹಣಾ ಧಿಕಾರಿ ಮಂಜುನಾಥಸ್ವಾಮಿ, ವಿದ್ಯಾರಣ್ಯ ಯುವಕ ಸಂಘದ ಅಧ್ಯಕ್ಷ ಪ್ರದೀಪ್‌ ಮತ್ತು ಪದಾ ಧಿಕಾರಿಗಳು, ನಗರಸಭೆ ಸದಸ್ಯರಾದ ಆರ್‌. ಶ್ರೀನಿವಾಸ್‌, ಅರವಿಂದ ರಾಯ್ಕರ್‌ ಮತ್ತಿತರರು ಇದ್ದರು.ನಂತರ ವಿದ್ಯಾರಣ್ಯ ಕನ್ನಡ ಜ್ಯೋತಿಯ ಮೆರವಣಿಗೆಯು ರಾಣಿ ಚೆನ್ನಮ್ಮಾಜಿ ವೃತ್ತದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next