Advertisement

ಸಾಗರ: ಕನ್ನಡದ ಚೆಕ್ ಅಮಾನ್ಯ ಪ್ರಕರಣ; ಬ್ಯಾಂಕ್ ಗೆ ದಂಡ

12:14 PM Jun 24, 2019 | Naveen |

ಸಾಗರ: ಕನ್ನಡದಲ್ಲಿ ಬರೆದ ಚೆಕ್‌ನ್ನು ಸತತವಾಗಿ ಎರಡು ಬಾರಿ ನಗದೀಕರಿಸಲು ನಿರಾಕರಿಸಿ, ಸೂಕ್ತ ಕಾರಣವನ್ನು ಕೂಡ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ ಐದು ಸಾವಿರ ರೂ.ಗಳ ದಂಡ ವಿಧಿಸಿದ ಪ್ರಕರಣ ಸಾಗರದಲ್ಲಿ ನಡೆದಿದೆ. ನಗರದ ವರದಾ ರಸ್ತೆಯ ಎಸ್‌ಬಿಐ ಶಾಖೆಯ ವಿರುದ್ಧ ಈ ತೀರ್ಪು ಬಂದಿದೆ.

Advertisement

ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಶ್ರೀ ಸಿದ್ಧಿವಿನಾಯಕ ಅಡಕೆ ಸ್ಟೋರ್ಸ್‌ ಅಡಕೆ ಬೆಳೆಗಾರರ ಹೆಸರು ಹಾಗೂ ನಗದಿನ ವಿವರವನ್ನು ಕನ್ನಡ ಅಕ್ಷರದಲ್ಲಿಯೇ ಬರೆಯುವ ತನ್ನ ಸಂಪ್ರದಾಯದಂತೆ 2018ರ ಸೆ. 9ರಂದು ಒಂದು ಲಕ್ಷ ರೂ. ಬಿ- ಬಿಲ್ ವ್ಯವಹಾರಕ್ಕೆ ಚೆಕ್‌ ಕೊಡುತ್ತದೆ. ಈ ಚೆಕ್‌ ತಾಲೂಕಿನ ನಿಟ್ಟೂರಿನ ಕೆನರಾ ಬ್ಯಾಂಕ್‌ ಮೂಲಕ ನಗದೀಕರಣಕ್ಕೆ ಸಲ್ಲಿಸಲ್ಪಟ್ಟರೂ ಎಸ್‌ಬಿಐ ಇದನ್ನು ನಗದೀಕರಿಸಲು ಎರಡೆರಡು ಬಾರಿ ನಿರಾಕರಿಸುತ್ತದೆ. ಈ ಕುರಿತು ನಡೆಸಿದ ಪತ್ರ ವ್ಯವಹಾರಕ್ಕೆ 2018 ಅ. 5ರಂದು ಎಸ್‌ಬಿಐ ನೀಡಿದ ಉತ್ತರದಿಂದ ಕನ್ನಡದಲ್ಲಿ ಚೆಕ್‌ ಬರೆದಿರುವುದರಿಂದ ಅದನ್ನು ಮಾನ್ಯ ಮಾಡಲು ಬ್ಯಾಂಕ್‌ ನಿರಾಕರಿಸಿರುವುದು ಗ್ರಾಹಕರ ಅರಿವಿಗೆ ಬರುತ್ತದೆ. ಕನ್ನಡ ಭಾಷೆಗೆ ಆದ ಈ ರೀತಿಯ ಅವಮಾನದ ಕುರಿತ ವಿಶೇಷ ಲೇಖನ ‘ಉದಯವಾಣಿ’ಯಲ್ಲಿ ಕಳೆದ ನವೆಂಬರ್‌ನಲ್ಲಿ ಪ್ರಕಟವಾಗಿತ್ತು. ಚೆಕ್‌ ಕನ್ನಡದಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲಾಗದ ಹಿನ್ನೆಲೆಯಲ್ಲಿ ನಗದೀಕರಣ ಮಾಡಲಾಗಿಲ್ಲ ಎಂದು ಸಿಸಿಪಿಸಿ ತಿಳಿಸಿದೆ ಎಂದು ಎಸ್‌ಬಿಐನ ವರದಾ ಶಾಖೆಯ ಮ್ಯಾನೇಜರ್‌ ತಿಳಿಸಿದ್ದರು. ಪ್ರಕರಣದಲ್ಲಿ ಚೆಕ್‌ ಅಮಾನ್ಯಕ್ಕೆ ಸೂಕ್ತ ಕಾರಣ ನೀಡದೆ ಎಸಗಿದ ಸೇವಾ ನ್ಯೂನತೆ ವಿರುದ್ಧ ಅಡಕೆ ಸ್ಟೋರ್ಸ್‌ ಪಾಲುದಾರ ಮಾಧವ ಚಿಪ್ಪಳಿ 2018ರ ಡಿ. 19ರಂದು ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಿ, ಇಂಗ್ಲಿಷೇತರ ಚೆಕ್‌ಗಳನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಸುಧಾರಿಸಬೇಕು ಹಾಗೂ ವ್ಯವಹಾರದಲ್ಲಿ ತಮ್ಮ ಸಂಸ್ಥೆಯ ಗೌರವ ಘನತೆಗೆ ಆದ ನಷ್ಟ, ಮಾನಸಿಕ ಹಿಂಸೆಗೆ 2 ಲಕ್ಷ ರೂ.ಗಳ ದಂಡ ಪರಿಹಾರ ಒದಗಿಸಬೇಕು ಎಂದು ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬ್ಯಾಂಕಿಂಗ್‌ ಲೋಕಪಾಲ, ಚೆಕ್‌ ಅಮಾನ್ಯೀಕರಣದ ಕಾರಣಗಳನ್ನು ಸಕಾಲದಲ್ಲಿ ಗ್ರಾಹಕರಿಗೆ ಒದಗಿಸದೆ ಬ್ಯಾಂಕ್‌ ತಪ್ಪೆಸಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ನಿಬಂಧನೆ 13-ಎ ಅನ್ವಯ ಗ್ರಾಹಕರಿಗೆ ಐದು ಸಾವಿರ ರೂ.ಗಳ ದಂಡ ಪಾವತಿಸಬೇಕು ಎಂದು 2019ರ ಮೇನಲ್ಲಿ ನೀಡಿದ ತೀರ್ಪು ಪ್ರಕಟಿಸಿದೆ.

ಸಮಾಧಾನ ತಾರದ ತೀರ್ಪು
2011-12ರ ಆರ್‌ಬಿಐ ಸುತ್ತೋಲೆ ಪ್ರಕಾರ ಗ್ರಾಹಕ ಚೆಕ್‌ಗಳನ್ನು ಹಿಂದಿ, ಇಂಗ್ಲಿಷ್‌ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು ಎಂದು ಸ್ಪಷ್ಟಪಡಿಸಲಾಗಿದೆ. ವಿವಾದಿತ ಚೆಕ್‌ನ್ನು ಎರಡೆರಡು ಬಾರಿ ನಗದೀಕರಣಕ್ಕೆ ಸಲ್ಲಿಸಿದ್ದರೂ ಅದು ಪಾವತಿಯಾಗಿರಲಿಲ್ಲ. ಆದರೆ ಒಂಬುಡ್ಸ್‌ಮನ್‌ ಆ ಚೆಕ್‌ ಪಾವತಿಯಾಗಿದೆ ಎಂದು ತಪ್ಪಾಗಿ ಹೇಳಿದೆ. ಪ್ರಕರಣ ದಾಖಲಿಸಿದ ನಂತರ ಬ್ಯಾಂಕ್‌ ಸಮಜಾಯಿಷಿಗೆ ಒಂಬುಡ್ಸ್‌ಮನ್‌ ನಮ್ಮ ಪ್ರತಿಕ್ರಿಯೆಯನ್ನು ಕೇಳಲಿಲ್ಲ. ಬ್ಯಾಂಕ್‌ನ ತಪ್ಪಿಗೆ ದೊಡ್ಡ ಮೊತ್ತದ ದಂಡ ಹೇರಬೇಕಾಗಿತ್ತು. ಒಂಬುಡ್ಸ್‌ಮನ್‌, ಕಾಯ್ದೆಯ ನಿಬಂಧನೆ 13 (ಎ) ರ ಅನ್ವಯ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರಿಂದ ತೀರ್ಪಿಗೆ ಮೇಲ್ಮನವಿಯನ್ನು ಕೂಡ ಸಲ್ಲಿಸುವ ಅವಕಾಶವಿಲ್ಲವಾಗಿದೆ ಎಂದು ಡಾ| ಮಾಧವ ಚಿಪ್ಪಳಿ ಅಸಮಾಧಾನ ವ್ಯಕ್ತಪಡಿಸಿದರು.

ತಪ್ಪು ಮಾಡದಿದ್ದರೂ ಶಿಕ್ಷೆ?
ಇಂದಿನ ಚೆಕ್‌ ನಗದೀಕರಣ ವ್ಯವಹಾರದಲ್ಲಿ ಸ್ಥಳೀಯ ಬ್ರಾಂಚ್‌ನ ಪಾತ್ರವೇನೂ ಇರುವುದಿಲ್ಲ. ಸೆಂಟ್ರಲೈಸ್ಡ್ ಕ್ಲಿಯರಿಂಗ್‌ ಪ್ರೋಸೆಸಿಂಗ್‌ ಸೆಂಟರ್‌ ಮೂಲಕ ಚೆಕ್‌ ನಗದಾಗುತ್ತದೆ. ಕನ್ನಡ ಚೆಕ್‌ನ ಈ ಪ್ರಕರಣದಲ್ಲೂ ಸ್ಥಳೀಯ ಬ್ರಾಂಚ್‌ನ ಗ್ರಾಹಕರು ಶಾಖೆಯ ಚೆಕ್‌ ವಿತರಿಸಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ. ಬ್ರಾಂಚ್‌ನ ಗ್ರಾಹಕರು ಮುಖ್ಯ ಕಚೇರಿಗೆ ತಮ್ಮ ದೂರು ಸಲ್ಲಿಸುವುದಾದರೂ ವರದಾ ಬ್ರಾಂಚ್ ಮ್ಯಾನೇಜರ್‌ ಮೂಲಕವೇ ರವಾನಿಸಬೇಕಾದುದು ಅನಿವಾರ್ಯ. ತನ್ನದಲ್ಲದ ತಪ್ಪಿಗೆ ಬ್ರಾಂಚ್‌ನ ಹೆಸರು ಕಾಣಿಸಿಕೊಂಡಿದೆ ಮತ್ತು ದಂಡ ವಿಧಿಸಿಕೊಳ್ಳುವಂತಾಗಿದೆ ಎಂದು ಹೆಸರು ಬಹಿರಂಗ ಬಯಸದ ಬ್ಯಾಂಕ್‌ ಉದ್ಯೋಗಿಯೊಬ್ಬರು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next