Advertisement

ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣಕ್ಕೆ ಬಿಡಲ್ಲ: ಕಾಗೋಡು

01:17 PM Sep 19, 2019 | Team Udayavani |

ಸಾಗರ: ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣದಿಂದ ಆಗುವ ಅನಾಹುತದ ಬಗ್ಗೆ ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು. ನಿಮ್ಮ ತಾಲೂಕಿಗೆ ನೀರು ಒದಗಿಸಲು ಸಿದ್ಧವಾಗಿರುವ ಈ ಯೋಜನೆಯಿಂದ ನಮ್ಮ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ 10ಕ್ಕೂ ಹೆಚ್ಚು ಹಳ್ಳಿಗಳು ಮುಳುಗಿ ಹೋಗುತ್ತವೆ. ಮನೆ, ಜಮೀನು ಕಳೆದುಕೊಂಡ ಜನರು ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

Advertisement

ತಾಲೂಕಿನ ಬರೂರಿನಲ್ಲಿ ಬುಧವಾರ ನಿರ್ಮಾಣದ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕೊರ್ಲಿಕೊಪ್ಪದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯೋಜನೆ ಕೈಬಿಡುವವರೆಗೂ ನಿರಂತರ ಹೋರಾಟ ಅನಿವಾರ್ಯ. ಗ್ರಾಮಸ್ಥರು ಮತ್ತು ಹೋರಾಟ ಸಮಿತಿ ಹಮ್ಮಿಕೊಳ್ಳುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಈಗಾಗಲೇ ತಾಲೂಕಿನ ಜನರು ಶರಾವತಿ ಹಿನ್ನೀರಿನಲ್ಲಿ ಮಡೆನೂರು ಮತ್ತು ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಎರಡು ಬಾರಿ ಮುಳುಗಡೆಯಾಗಿದ್ದಾರೆ. ಹಿಂದೆ ಮುಳುಗಡೆಯಾದವರಿಗೆ ಕಷ್ಟಪಟ್ಟು ಭೂಮಿಯನ್ನು ನೀಡಲಾಗಿತ್ತು. ಆದರೆ ಈಗ ಜನರನ್ನು ಮತ್ತೆ ಮುಳುಗಿಸಿದರೆ ಅವರಿಗೆ ಭೂಮಿ ಕೊಡಲು ಭೂಮಿ ಎಲ್ಲಿದೆ ಎಂದು ಪ್ರಶ್ನಿಸಿದ ಕಾಗೋಡು, ಅನಾಹುತವಾಗುವುದಕ್ಕಿಂತ ಮೊದಲು ಮುಖ್ಯಮಂತ್ರಿಗಳು ಯೋಜನೆ ಬಗ್ಗೆ ಪುನರ್‌ ಪರಶೀಲನೆ ನಡೆಸಬೇಕು ಎಂದು ತಿಳಿಸಿದರು.

ಬರೂರು ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಮೂಲ ಇಲ್ಲ. ಅದರ ಬದಲಾಗಿ ಅಣೆಕಟ್ಟನ್ನು ಮಲ್ಲಾಪುರ ಮತ್ತು ಮುಡುಬಾ ಸಿದ್ದಾಪುರ ನಡುವಿನ ಬನ್ನೂರು ಕೆರೆ ಭಾಗದಲ್ಲಿ ನಿರ್ಮಾಣ ಮಾಡುವುದು ಹೆಚ್ಚು ಸೂಕ್ತ. ಆಗ ಹೆಚ್ಚಿನ ಮುಳುಗಡೆಯಾಗುವುದಿಲ್ಲ. ಹಾಲಿ ಕಲ್ಲೊಡ್ಡು ಹಳ್ಳ ನಿರ್ಮಿಸುವ ಜಾಗದಲ್ಲಿ ಅರಣ್ಯ ಮತ್ತು ಜನವಸತಿ ಪ್ರದೇಶವಿದೆ. ಜನರಿಗೆ ತೊಂದರೆ ಕೊಡುವ ಯೋಜನೆಯನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು.

ಯಡಿಯೂರಪ್ಪನವರು ಹಿಡಿದ ಕೆಲಸ ಬಿಡುವ ಜಾಯಮಾನದವರಲ್ಲ. ಹೋರಾಟದ ಮೂಲಕವೇ ಅವರನ್ನು ಯೋಜನೆಯಿಂದ ಹಿಂದೆ ಸರಿಯುವಂತೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ ಹದಿನೈದು ದಿನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಯೋಜನೆ ಕೈ ಬಿಡುವಂತೆ ಒತ್ತಾಯಿಸುವ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಲು ಗ್ರಾಮಸ್ಥರು ಸಜ್ಜಾಗಬೇಕು ಎಂದು ತಿಳಿಸಿದರು.

Advertisement

ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಎಪಿಎಂಸಿ ಸದಸ್ಯ ಕೆ. ಹೊಳೆಯಪ್ಪ, ಹೋರಾಟ ಸಮಿತಿಯ ಟಾಕಪ್ಪ, ಶಿವಪ್ಪ, ವೀರೇಶ್‌ ಬರೂರು, ಎಂ.ಸಿ. ಪರಶುರಾಮಪ್ಪ, ಚಂದ್ರಶೇಖರ್‌, ಕೃಷ್ಣಮೂರ್ತಿ, ಸುರೇಶ್‌ ಕೊರ್ಲಿಕೊಪ್ಪ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next