Advertisement

ಮತ್ತೆ ಆತಂಕ ತಂದ ಕಲ್ಲೊಡ್ಡು ಗುಮ್ಮ!

12:22 PM Aug 19, 2019 | Naveen |

ಸಾಗರ: ತಾಲೂಕಿನ ಗಡಿಪ್ರದೇಶದಲ್ಲಿನ ಬರೂರು ಗ್ರಾಪಂ ವ್ಯಾಪ್ತಿಯಲ್ಲಿನ ಕುಂದೂರು ಸಮೀಪದಲ್ಲಿ ಕಲ್ಲೊಡ್ಡು ಜಲಾಶಯ ಯೋಜನೆಯ ಗುಮ್ಮ ಮತ್ತೂಮ್ಮೆ ಜನರಲ್ಲಿ ಆತಂಕ ಸೃಷ್ಟಿಸಿದೆ. ತಮ್ಮ ಸರ್ಕಾರವಿದ್ದಾಗಲೂ ಕಾಂಗ್ರೆಸ್‌ ಪಕ್ಷದವರು ಕಲ್ಲೊಡ್ಡು ನಿರ್ಮಾಣವನ್ನು ವಿರೋಧಿಸಿ ಮಾತನಾಡಿದ್ದರೆ ಬಿಜೆಪಿ ಧ್ವನಿ ಎತ್ತಿರಲಿಲ್ಲ. ಈಗ ಶಿಕಾರಿಪುರದ ಶಾಸಕರಾದ ಬಿ.ಎಸ್‌. ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿಗಳಾಗಿರುವುದು ಮತ್ತು ಜಲಾಶಯದ ನಿರ್ಮಾಣಕ್ಕೆ ಸರ್ಕಾರ 121.17 ಕೋಟಿ ರೂ. ಮಂಜೂರಾತಿ ನೀಡಿರುವುದು ಸಾಗರದ ಈ ಭಾಗದ ರೈತರನ್ನು ಆತಂಕದ ಕಡಲಿಗೆ ನೂಕಿದೆ.

Advertisement

ಕಲ್ಲೊಡ್ಡು ಜಲಾಶಯದ ಇತಿಹಾಸ: ಸಾಗರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಕುಂದೂರು, ಕೊರ್ಲಿಕೊಪ್ಪ, ಮಿಡಿನಾಗರ ಭಾಗದ ಒಂದು ತಗ್ಗಿನ ಪ್ರದೇಶದಲ್ಲಿ ನೀರಿನ ಹರಿವಿದೆ. ಗುತ್ತಳ್ಳಿ ಭಾಗದಲ್ಲಿನ ಕೆರೆಯೊಂದರ ಜಲಮೂಲದಿಂದ ಹೊರಟ ಈ ಹರಿವು ಮುಂದೆ ಬಲಗೊಳ್ಳುತ್ತ ಅಂಬ್ಲಿಗೊಳ ಜಲಾಶಯದ ಚಾನೆಲ್ ನೀರನ್ನು ಸೇರುತ್ತದೆ. ತಗ್ಗು ಪ್ರದೇಶದಲ್ಲಿ ಜಲಾಶಯ ನಿರ್ಮಾಣದ ಯೋಜನೆಯನ್ನು ಅವತ್ತಿನ ಮುಖ್ಯಮಂತ್ರಿ ಗುಂಡೂರಾವ್‌ ಅವರ ಕಾಲದಿಂದಲೂ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಒಡ್ಡು ಕಟ್ಟಿ ಕೃಷಿಗೆ ಪೂರಕ ನೀರಾವರಿ ಒದಗಿಸುವ ಯೋಜನೆ ಬಗ್ಗೆ ಮಾತುಕತೆ ನಡೆದು ಗುಂಡೂರಾವ್‌ ಈ ಸ್ಥಳಕ್ಕೆ ಬಂದಿದ್ದರೆಂದು, ಶಂಕುಸ್ಥಾಪನೆ ಸಹ ಆಗಿತ್ತೆಂದು ಇಲ್ಲಿನ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಆ ಸಮಯ ಸ್ಥಾಪಿಸಲಾದ ಶಂಕುಸ್ಥಾಪನೆ ಸಮಾರಂಭದ ಕಲ್ಲುಗಳೆಲ್ಲವೂ ನಿರ್ನಾಮವಾಗಿದೆ. ಆ ಕಲ್ಲು ಮಾಯವಾಗಿದ್ದರೂ ತೂಗುಕತ್ತಿ ಮಾತ್ರ ಹಾಗೆಯೇ ತೂಗುತ್ತಿದೆ.

ಬಿಎಸ್‌ವೈ ಕ್ಷೇತ್ರಕ್ಕೆ ನೀರು! ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಮತ್ತೂಮ್ಮೆ ಕಲ್ಲೊಡ್ಡು ಭೂತಕ್ಕೆ ಜೀವ ಬಂದಿತ್ತು. ಆ ವೇಳೆ ಆಡಳಿತಾತ್ಮಕ ಅನುಮೋದನೆಯ ಸಂದರ್ಭದಲ್ಲಿ ಸುಮಾರು 20 ಕೋಟಿ ರೂ. ಅಂದಾಜು ಪಟ್ಟಿ ಸಿದ್ಧವಾಗಿತ್ತು ಎನ್ನುವ ಮಾತಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಜೀವ ಹೋದರೂ ಸರಿ, ಕಲ್ಲೊಡ್ಡು ಜಲಾಶಯ ಮಾಡಲು ಬಿಡಲ್ಲ ಎಂದು ಪದೇ ಪದೇ ಹೇಳಿದ ನಂತರವಷ್ಟೇ ಈ ವಿಷಯ ಜನರ ಗಮನಕ್ಕೆ ಬಂದಿತ್ತು.

ಮಡುಬ- ಸಿದ್ದಾಪುರ ಎಂಬ ಶಿಕಾರಿಪುರ- ಸಾಗರ ಗಡಿಪ್ರದೇಶ ಸಮೀಪದ ಸಾಗರ ತಾಲೂಕಿನದೇ ಭೂಭಾಗದಲ್ಲಿ ಯೋಜಿತ ಕಲ್ಲೊಡ್ಡು ಜಲಾಶಯ ನಿರ್ಮಾಣವಾದರೆ ಶಿಕಾರಿಪುರ ವ್ಯಾಪ್ತಿಯ ಕೃಷಿಕರಿಗೆ ನೀರಾವರಿ ಅನುಕೂಲವಾಗುತ್ತದೆ ಎನ್ನಲಾಗುತ್ತದೆ. ಸ್ಥಳೀಯರ ಶ್ರಾವಣ ತಿಂಗಳಿನಲ್ಲಾಗುವ ಒಂದೆರಡು ಮಳೆಗಳಿಗೆ ನೀರಿನ ಹರಿವು ಹೆಚ್ಚಾಗುತ್ತದೆ. ಅಂಥ ನೀರನ್ನು ಸಂಗ್ರಹಿಸಿ, ಚಾನೆಲ್ ನೀರಿನ ಜೊತೆ ಬಳಸಿಕೊಂಡರೆ ಶಿಕಾರಿಪುರ ಭಾಗದವರ ನೀರಿನ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎನ್ನಲಾಗುತ್ತದೆ. ಈ ಯೋಜನೆಯಲ್ಲಿ ಸಾಗರ ತಾಲೂಕಿನ ಕೃಷಿ ಫಲವತ್ತಾದ ಜಮೀನು ಮುಳುಗಡೆಯಾಗಿ ಶಿಕಾರಿಪುರದ ರೈತರಿಗೆ ಅನುಕೂಲವಾಗುತ್ತದೆ. ತಾತ್ವಿಕವಾಗಿ ವಿರೋಧ ವ್ಯಕ್ತಪಡಿಸಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಅವರಿಗೂ ಇದೇ ಕಾರಣದಿಂದ ಖಂಡತುಂಡ ವಿರೋಧ ಕಷ್ಟವಾಗಿರುವಂತಿದೆ.

ಮತ್ತೂಂದು ಮುಳುಗಡೆ? ತಾಲೂಕಿನಲ್ಲಿ ಈಗಾಗಲೇ ವಿವಿಧ ಜಲವಿದ್ಯುತ್‌ ಯೋಜನೆಗಳಿಂದಾಗಿ ಮುಳುಗಡೆ ಸಮಸ್ಯೆ ಸೃಷ್ಟಿಯಾಗಿದೆ. ಕಲ್ಲೊಡ್ಡು- ಹೊಸಕೆರೆ ನಿರ್ಮಾಣ ಮಾಡುವುದರಿಂದ ಬರೂರು ಗ್ರಾಪಂ ವ್ಯಾಪ್ತಿಯ ಕಲ್ಲೊಡ್ಡು, ಕುಂದೂರು, ಮಡಿವಾಳಕಟ್ಟೆ, ಕೊರಲಿಕೊಪ್ಪ, ಮುತ್ತಲಬೈಲು, ಮಿಡಿನಾಗರ, ಗುತ್ತನಹಳ್ಳಿ, ತೆಪ್ಪಗೋಡು, ಬರೂರು, ಕಲ್ಕೊಪ್ಪ ಹಾಗೂ ಪರ್ಸೆಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬರುವ 11,192 ಎಕರೆ ಜಮೀನು, 5,960 ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಎಂದು ಹೇಳಲಾಗಿದೆ.

Advertisement

ಶರಾವತಿ ಯೋಜನೆಗಳಿಂದಾಗಿ ವಲಸೆ ಹೋದ ಜನರು ಇಂದಿಗೂ ವಿವಿಧ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೊಳೆ ಆಚೆಗಿನ ದ್ವೀಪದ ಜನರು ಸೇತುವೆ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ಆನಂದಪುರ ಸಮೀಪದ ಅಂಬ್ಲಿಗೊಳ ಜಲಾಶಯ ನಿರ್ಮಾಣ, ಎತ್ತರ ಹೆಚ್ಚಳ ಸಂದರ್ಭ ಸೇರಿದಂತೆ ಮತ್ತೂಮ್ಮೆ ತಾಲೂಕಿನ ಜನ ಮುಳುಗಡೆ ಸಮಸ್ಯೆ ಅನುಭವಿಸಿದ್ದಾರೆ. ಕೆಲ ಸಂದರ್ಭದಲ್ಲಿ ಪರಿಹಾರ ಕೂಡ ವಿಳಂಬವಾಗಿ ದೊರಕಿದೆ. ಈ ಎಲ್ಲ ಕಾರಣದಿಂದಲೂ ಕಲ್ಲೊಡ್ಡು ಯೋಜನೆಗೆ ವಿರೋಧವಿದೆ.

ಶಿಕಾರಿಪುರ ತಾಲೂಕಿಗೆ ನೀರುಣಿಸುವ ಸಲುವಾಗಿ ನಮ್ಮ ಗ್ರಾಮಗಳನ್ನು ಮುಳುಗಡೆ ಮಾಡುವುದು ನ್ಯಾಯವಲ್ಲ. ಈಗಾಗಲೇ ಶಿಕಾರಿಪುರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಕೈಗೆತ್ತಿಕೊಂಡಿರುವ ಬನ್ನೂರು ಗ್ರಾಮದ ಸರ್ವೆ ನಂ. 29ರ ಮಲ್ಲಾಪುರದ 56.10 ಎಕರೆ ಕೆರೆ ಪ್ರದೇಶ ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸಿಕೊಳ್ಳುವ ಮೂಲಕ ಕಲ್ಲೊಡ್ಡು- ಹೊಸಕೆರೆ ನಿರ್ಮಾಣ ಕಾಮಗಾರಿಯನ್ನು ಕೈಬಿಡಬಹುದು ಎಂದು ಈ ಭಾಗದ ರೈತರು ಪ್ರತಿಪಾದಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಶರಾವತಿ ನೀರು ಬೆಂಗಳೂರಿಗೆ ಬೇಡ ಎಂದು ಆಗ್ರಹಿಸಿ ಪ್ರತಿಭಟನಾ ಆಂದೋಲನ ಮಾಡಿದ್ದ ಸಾಗರದ ಜನತೆ ಈಗ ಇನ್ನೊಮ್ಮೆ ಸಾಗರದ ನೀರು ಶಿಕಾರಿಪುರಕ್ಕೆ ಕೊಡಲಾಗದು ಎಂದು ಹೋರಾಟಕ್ಕಿಳಿಯುವ ಸಂದರ್ಭ ಒದಗಿಬಂದಿದೆ.

ಬೇಳೂರು ವಿರುದ್ಧ ಆಕ್ರೋಶ
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಕ್ತ ಕೊಟ್ಟೇವು, ಕಲ್ಲೊಡ್ಡು ಜಲಾಶಯ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಘೋಷಿಸಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರದ ಕಡೆ ಮುಖ ಹಾಕಿಯೇ ಇಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕು ಈ ಹಿಂದೆಂದೂ ಕಾಣದಂತ ನೆರೆ ಅನುಭವಿಸಿದ ಸಂದರ್ಭದಲ್ಲೂ ಬೇಳೂರು ಬಂದಿಲ್ಲದಿರುವುದನ್ನು ಜನ ಗಮನಿಸುತ್ತಿದ್ದಾರೆ. ಕಳೆದ ಬಾರಿ ಅರಳಗೋಡು ಭಾಗದಲ್ಲಿ ಮಂಗನ ಕಾಯಿಲೆ ಮಾರಣಾಂತಿಕವಾಗಿ ಎರಗಿದ ಸಮಯದಲ್ಲೂ ಬೇಳೂರು, ನನ್ನ ಮೇಲೆ ಯಡಿಯೂರಪ್ಪ ಮಾಟ ಮಾಡಿಸಿದ್ದಾರೆ ಎಂದು ಆರೋಪಿಸಿ ಬಾರದಿರುವುದಕ್ಕೆ ನೆಪ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಿದ್ದೀಯಪ್ಪಾ ಬೇಳೂರು ಎಂದು ಜನ ಕೇಳುವಂತಾಗಿದೆ. ಈ ನಡುವೆ ರಾಜಕಾರಣಿಗಳು ಇಂತಹ ವಿಷಯದಲ್ಲಿ ಆಸಕ್ತಿ ತೋರದಿದ್ದರೆ ವೃತ್ತಿಪರ ಹೋರಾಟಗಾರರು ಹೋರಾಟ ಕೈಗೆತ್ತಿಕೊಳ್ಳುವ ಮಾತನ್ನಾಡಿ ಇದರ ಲಾಭ ಪಡೆಯಬಹುದು ಎಂಬ ಆತಂಕವೂ ಕೆಲವು ನಾಗರಿಕರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next