Advertisement

ಸರ್ಕಾರಿ ನೌಕರರಿಗಾಗುವ ಕಿರುಕುಳ ತಡೆಗೆ ಒತ್ತಾಯ

03:53 PM Aug 03, 2019 | Naveen |

ಸಾಗರ: ಸಾರ್ವಜನಿಕ ಪ್ರತಿಭಟನೆಯ ಹೆಸರಿನಲ್ಲಿ ಪ್ರಾಮಾಣಿಕ, ಜನಸೇವಾ ಸರ್ಕಾರಿ ನೌಕರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಶುಕ್ರವಾರ ಜನಪರ ನಾಗರಿಕ ಬಳಗದ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ನಾಗರಿಕ ಸಮಾಜದಲ್ಲಿ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಒಂದು ಅಸ್ತ್ರ. ಅದನ್ನು ಅಗತ್ಯ ಬಿದ್ದಾಗ ಸಂಘಟನೆಗಳು, ಸಂಸ್ಥೆಗಳು ಬಳಸಿಕೊಳ್ಳಬೇಕು ಎಂಬ ವಾಸ್ತವದ ಹೊರತಾಗಿಯೂ ಪ್ರತಿಭಟನೆಯ ಸಂದರ್ಭದಲ್ಲಿ ಜನಪರವಾಗಿ ನಿರಂತರವಾಗಿ ಸೇವೆ ಸಲ್ಲಿಸುವ ಅಥವಾ ಸಾತ್ವಿಕ ಅಧಿಕಾರಿ, ನೌಕರರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡಿ ಅವರ ನೆಮ್ಮದಿ ಹಾಳು ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ಈ ರೀತಿಯಲ್ಲಿ ನಿರಂತರವಾಗಿ ಆರೋಪಗಳನ್ನು ಮಾಡುತ್ತಲೇ ಹೋಗುವ ಮೂಲಕ ಸಾರ್ವಜನಿಕವಾಗಿ ನಿರ್ದಿಷ್ಟ ಸರ್ಕಾರಿ ನೌಕರರನ್ನು ಹಿಂಸಿಸುವ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

ಪ್ರತಿಭಟನೆಯ ಸಂದರ್ಭಗಳಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರೆನ್ನಿಸಿಕೊಂಡವರು ಮಾಡುವ ಭಾಷಣ ಸಂದರ್ಭದಲ್ಲಿ ಔಚಿತ್ಯದ ಸೀಮೆಯನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ನಮ್ಮಂತಹ ಹತ್ತು ಹಲವು ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ನೆರವಾಗುವವರ ವಿರುದ್ಧ ‘ಹಿಟ್ ಆ್ಯಂಡ್‌ ರನ್‌’ ಮಾದರಿಯಲ್ಲಿ ಆರೋಪಗಳನ್ನು ಮಾಡುವುದರಿಂದ ದೀರ್ಘ‌ಗಾಮಿಯಾಗಿ ಸಮಾಜಕ್ಕೆಯೇ ಘಾಸಿಯಾಗುತ್ತದೆ. ಕೆಲವು ವಿಚಾರಗಳಲ್ಲಿ ಪ್ರತಿಭಟನೆ ಮಾಡುವವರು ಹೆಚ್ಚು ಸೂಕ್ಷ್ಮರಾಗಿರಬೇಕಾಗುತ್ತದೆ ಎಂದು ವಿವರಿಸಲಾಗಿದೆ.

ವಿವಿಧ ಲೋಪಗಳ ಹೊರತಾಗಿಯೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಿಂದ ಪ್ರತಿದಿನ ನೂರಾರು ಜನರಿಗೆ ಚಿಕಿತ್ಸೆ ಸಿಗುತ್ತಿದೆ. ಆರೋಗ್ಯ ಸುಧಾರಣೆಯಲ್ಲಿ ಆಸ್ಪತ್ರೆ ನೆರವು ನೀಡಿದೆ. ಇಂತಹ ಆಸ್ಪತ್ರೆಯಲ್ಲಿ ಬಹುಪಾಲು ಜನ ಬಡವರೇ ತಮ್ಮ ಅನಾರೋಗ್ಯ ಸಮಸ್ಯೆ ಮುಂದಿಟ್ಟುಕೊಂಡು ಬರುತ್ತಾರೆ. ಅವರ ನೆರವಿಗೆ ಆಸ್ಪತ್ರೆಯ ವಿವಿಧ ವೈದ್ಯರು, ಸಿಬ್ಬಂದಿಗಳು ಬರುವುದನ್ನು ನಾವು ದಿನಂಪ್ರತಿ ನೋಡುತ್ತಿದ್ದೇವೆ. ಪ್ರಸಕ್ತ ದಿನಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಪ್ರಾಮಾಣಿಕ ವೈದ್ಯ, ಸಿಬ್ಬಂದಿಯನ್ನೂ ದೂಷಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಾತ್ವಿಕ, ಪ್ರಾಮಾಣಿಕರು ಸಾಗರದಲ್ಲಿ ಕೆಲಸ ಮಾಡುವ ಸಾಧ್ಯತೆಗಳನ್ನೇ ದೂರವಿಡುವಂತೆ ಮಾಡುತ್ತಿದೆ. ಅಂತಿಮವಾಗಿ ಸರಿಯಾದ ಚಿಂತನೆ, ಗುರಿಗಳಿಲ್ಲದೆ ಕೆಲವು ವ್ಯಕ್ತಿಗಳು ಮಾಡುವ ಪ್ರತಿಭಟನೆ, ದೂಷಣೆ ಸಮಾಜದ ಅತಿ ಬಡ, ಶೋಷಿತ ವರ್ಗಕ್ಕೇ ನಷ್ಟವನ್ನುಂಟು ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ನಂಜುಂಡಸ್ವಾಮಿ ಸರ್ಕಾರಿ ನೌಕರಿಯಲ್ಲಿದ್ದರೂ ಬಡವರ ಪರ ಕಾಳಜಿ ಹೊಂದಿದ್ದಾರೆ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳು ಸಹ ಇಲ್ಲದೆ ನಂಜುಂಡಸ್ವಾಮಿ ಅವರನ್ನು ಗುರಿಯಾಗಿರಿಸಿಕೊಂಡು ಕೆಲವು ದಿನಗಳಿಂದ ಆರೋಪ ಹೊರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಜು. 25ರಂದು ಆಸ್ಪತ್ರೆ ಎದುರು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆನಂದಪುರದ ಸಾಮಾಜಿಕ ಕಾರ್ಯಕರ್ತ ಲಿಂಗರಾಜ್‌ ಎಂಬುವವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಇದು ನಂಜುಂಡಸ್ವಾಮಿ ಅವರ ಕುಟುಂಬದ ಆತಂಕಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗರಾಜ್‌ ಅವರು ಪ್ರತಿಭಟನಾ ಸಂದರ್ಭದಲ್ಲಿ ಮಾಡಿರುವ ಪ್ರಚೋದನಕಾರಿ ಭಾಷಣದ ವಿಡಿಯೋ ಪರಿಶೀಲಿಸಿ ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ನಂಜುಂಡಸ್ವಾಮಿ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

Advertisement

ಬಳಗದ ಅಧ್ಯಕ್ಷ ಎಂ. ರಾಮಪ್ಪ, ಸಂಚಾಲಕ ನಾರಾಯಣಮೂರ್ತಿ ಕಾನುಗೋಡು, ಪ್ರಮುಖರಾದ ಕವಲಕೋಡು ವೆಂಕಟೇಶ್‌, ಆರ್‌.ಎಂ. ಬಾಪಟ್, ಮುರಳೀಧರ ಹತ್ವಾರ್‌, ಐ.ವಿ. ಹೆಗಡೆ, ಟಿ.ಆರ್‌. ಸತ್ಯನಾರಾಯಣ, ಜ್ಯೋತಿ ನಂಜುಂಡಸ್ವಾಮಿ, ಹು.ಭಾ. ಅಶೋಕ್‌, ರಾಘವೇಂದ್ರ ಈಳಿಗೇರ್‌, ಗಜಾನನ, ಸತೀಶ್‌ ಜೋಗ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next