Advertisement

ಅಡಕೆ ಬೆಳೆ ನಾಶ; ಪರಿಹಾರಕ್ಕೆ ಒತ್ತಾಯ

12:50 PM Aug 23, 2019 | Naveen |

ಸಾಗರ: ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಅಡಕೆ ಬೆಳೆಗೆ ತೀವ್ರತರದ ಕೊಳೆರೋಗ ಬಾಧಿಸಿ ಶೇ. 50 ರಿಂದ 80ರಷ್ಟು ಬೆಳೆ ನಷ್ಟವಾಗಿದೆ. ಸರ್ಕಾರ ತಕ್ಷಣ ಕೊಳೆರೋಗಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಗುರುವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳು ಮತ್ತು ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಆರ್‌. ಜಯಂತ್‌, ಈ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಡಕೆ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ. ಕೊಳೆರೋಗ ನಿಯಂತ್ರಣಕ್ಕೆ ಬಾರದೆ ಸಾಗರ, ಸೊರಬ, ಹೊಸನಗರ ತಾಲೂಕಿನ ಅಡಕೆ ತೋಟಗಳಲ್ಲಿ ಸಂಪೂರ್ಣ ಅಡಕೆ ಉದುರಿ, ಬೆಳೆಗಾರರ ಬದುಕೇ ನಾಶವಾಗುವ ಸ್ಥಿತಿ ನಿರ್ಮಾಣವಾಗಿದ್ದು, ಶೇ. 50ರಿಂದ 80ರಷ್ಟು ಅಡಕೆ ಉದುರಿ ಹೋಗಿದೆ ಎಂದರು.

ಮಲೆನಾಡು ಭಾಗದಲ್ಲಿ ಶೇ. 90ರಷ್ಟು ಸಣ್ಣ ಮತ್ತು ಅತಿ ಸಣ್ಣ ಸಾಂಪ್ರದಾಯಿಕ ಅಡಕೆ ಬೆಳೆಗಾರರು ಇದ್ದಾರೆ. ಅಡಕೆ ಉತ್ಪನ್ನದಿಂದಲೇ ಬದುಕು ಸಾಗಿಸುವ ಬೆಳೆಗಾರ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ. ಒಂದು ಎಕರೆ ಅಡಕೆ ತೋಟದಲ್ಲಿ ಪ್ರಸ್ತುತ ಅಡಕೆ ದರದಲ್ಲಿ ರೂಪಾಯಿ 1.40 ಲಕ್ಷದಿಂದ 2 ಲಕ್ಷ ರೂ.ಗಳವರೆಗೆ ಕೊಳೆಬಾಧೆಯಿಂದ ಬೆಳೆಹಾನಿಯಾಗಿದೆ. ಸರ್ಕಾರ ಎನ್‌ಡಿಆರ್‌ಎಫ್‌ ಮಾನದಂಡ ಆಧರಿಸಿ 2012-13ರಲ್ಲಿ ಅಡಕೆೆ ಬೆಳೆಗೆ ಪರಿಹಾರ ನೀಡಿದೆ. ಹಾಲಿ ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್‌ ಮಾನದಂಡದ ಜೊತೆಗೆ ಹೆಚ್ಚುವರಿಯಾಗಿ ಒಂದು ಎಕರೆಗೆ ಗರಿಷ್ಟ ಪ್ರಮಾಣದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಲೆನಾಡಿನ ಅನೇಕ ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಬೆಟ್ಟಗುಡ್ಡಗಳು ಕುಸಿದು ಅಡಕೆ ಮತ್ತು ಭತ್ತದ ಗದ್ದೆಗಳ ಮೇಲೆ ಭಾರೀ ಪ್ರಮಾಣದ ಮಣ್ಣು, ಮರಳು, ಹೂಳು ತುಂಬಿದೆ. ಕೃಷಿ ಭೂಮಿಯ ಮೇಲೆ ಹಳ್ಳಗಳು ಉಕ್ಕಿ ಹರಿದು ಕೃಷಿ ಭೂಮಿಯ ಮೇಲೆ ಹರಿವಿನ ಪಾತ್ರ ಬದಲಾಗಿ ಹೋಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ನಿಯಮಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಯಮಗಳಡಿ ಮೂರು ಇಂಚಿಗಿಂತಲೂ ಜಾಸ್ತಿ ಮರಳು, ಹೂಳು ತೆಗೆಯಲು ಒಂದು ಹೆಕ್ಟೇರ್‌ಗೆ 12,200 ರೂ. ಮತ್ತು ಭೂಕುಸಿತ ನದಿ ಹರಿವು ದಾರಿ ಬದಲಾವಣೆಯಾದಲ್ಲಿ ಪುನರ್‌ ನಿರ್ಮಾಣಕ್ಕೆ ಹೆಕ್ಟೇರ್‌ಗೆ 37,500 ರೂ. ಕೊಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮವಾರು ಪ್ರತಿಯೊಬ್ಬ ಹಿಡುವಳಿದಾರರು ಹೊಂದಿದ ನಷ್ಟವನ್ನು ದಾಖಲಿಸಿ ನಷ್ಟದ ವಿವರ ನೀಡಬೇಕು ಎಂದು ಆಗ್ರಹಿಸಿದರು.

ಹಿಂದಿನ ಸಾಲಿನಲ್ಲಿ ಅಡಕೆ ಬೆಳೆ ನಷ್ಟಕ್ಕೆ ತಾಲೂಕಿಗೆ ಕೋಟ್ಯಂತರ ರೂ. ಪರಿಹಾರ ಬಿಡುಗಡೆಯಾಗಿದೆ. ಆದರೆ ಪರಿಹಾರ ಹಣ ವಿತರಣೆಯಲ್ಲಿ ತಾರತಮ್ಯವಾಗಿದೆ. ಪರಿಹಾರ ವಿತರಣೆ ಪಾರದರ್ಶಕವಾಗಿಲ್ಲ ಎನ್ನುವ ದೂರುಗಳಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಹಿಂದಿನ ಸಾಲಿನಲ್ಲಿ ಬಿಡುಗಡೆಯಾಗಿರುವ ಬೆಳೆ ಪರಿಹಾರವನ್ನು ಎಲ್ಲ ಬೆಳೆಗಾರರಿಗೆ ಮಾನದಂಡದ ಅನುಸಾರ ಬಿಡುಗಡೆ ಮಾಡಬೇಕು. ಈ ಸಾಲಿನಲ್ಲಿ ಗ್ರಾಮ ಲೆಕ್ಕಿಗರು ಬೆಳೆಗಾರರಿಂದ ಅರ್ಜಿಯನ್ನು ಪಡೆದು ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಿ ನೊಂದ ಬೆಳೆಗಾರರಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Advertisement

ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ: ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಹಾಲಪ್ಪ, ಈಗಾಗಲೇ ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಅಡಕೆ ತೋಟಗಳ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಜೊತೆಗೆ ಅಡಕೆ ಕೊಳೆರೋಗ ಸಂಬಂಧ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಜಿಲ್ಲಾಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಬೆಳೆಗಾರರಿಗೆ ಶೀಘ್ರ ಕೊಳೆರೋಗ ಸಂಬಂಧ ಪರಿಹಾರ ಕಲ್ಪಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.

ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ: ಸಾಗರ ಉಪ ವಿಭಾಗದ ಸಹಾಯಕ ಆಯುಕ್ತ ದರ್ಶನ್‌ ಪಿ.ವಿ. ಮಾತನಾಡಿ, ಕೊಳೆರೋಗದಿಂದ ಅಡಕೆ ಹಾನಿಯಾಗಿರುವ ಕುರಿತು ನನಗೆ ಬೆಳೆಗಾರರಿಂದ ದೂರು ಬಂದಿದೆ. ಮೂರು ತಾಲೂಕುಗಳಲ್ಲಿ ಕೊಳೆರೋಗದಿಂದ ಹಾನಿಯಾಗಿರುವ ಅಡಕೆ ತೋಟಗಳಿಗೆ ಮತ್ತು ಧರೆ ಕುಸಿತದಿಂದ ತೋಟಗಳು ನಾಶವಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸರ್ಕಾರದ ಗಮನ ಸೆಳೆದು ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಆಪ್ಸ್‌ಕೋಸ್‌ ಅಧ್ಯಕ್ಷ ಬಿ.ಎ. ಇಂದೂಧರ, ತೋಟಗಾರ್ ಅಧ್ಯಕ್ಷ ಕೆ.ಸಿ.ದೇವಪ್ಪ, ಎಪಿಎಂಸಿ ಅಧ್ಯಕ್ಷ ರವಿಕುಮಾರ್‌ ಎಚ್.ಎಂ., ಪ್ರಮುಖರಾದ ಎಚ್.ಎಸ್‌. ಮಂಜಪ್ಪ, ಕಟ್ಟಿನಕೆರೆ ಸೀತಾರಾಮಯ್ಯ, ವ.ಶಂ. ರಾಮಚಂದ್ರ ಭಟ್, ಸೂರ್ಯನಾರಾಯಣ ಖಂಡಿಕಾ, ತೀ.ನ. ಶ್ರೀನಿವಾಸ್‌, ರಘುಪತಿ ಭಟ್, ಸುಬ್ರಾವ್‌, ಖಂಡಿಕಾ ಪ್ರಭಾಕರ್‌, ಜಗದೀಶ ಗೌಡ, ಗುರುಪಾದ ಕೆರೆಕೊಪ್ಪ, ಸುಬ್ರಾವ್‌, ಹರೀಶ್‌ ಗಂಟೆ, ಮಹಾಬಲೇಶ್ವರ ಅರೆಹದ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next