Advertisement

ಸಂಘಟನೆಯಿಂದ ಸಮಾಜಕ್ಕೆ ಬ

05:15 PM May 12, 2019 | Naveen |

ಸಾಗರ: ಅಂಬಿಗರು ನಂಬಿಕೆಗೆ ಅರ್ಹವಾದ ಜನಾಂಗ. 39 ಉಪ ಜಾತಿಗಳು ಸೇರಿ ಗಂಗಾಮತಸ್ಥ ಸಮಾಜವಾಗಿದ್ದು, ಸಮಾಜ ಸಂಘಟನಾತ್ಮಕವಾಗಿ ಇನ್ನಷ್ಟು ಪರಿಣಾಮಕಾರಿ ಹೆಜ್ಜೆಗಳನ್ನು ಇರಿಸಬೇಕು. ಸಂಘಟನೆಯಿಂದ ಸಮಾಜಕ್ಕೆ ಬಲ ಬರುತ್ತದೆ ಎಂದು ನರಸೀಪುರ ಮಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ತಿಳಿಸಿದರು.

Advertisement

ನಗರದ ಗಂಗಾಮತ ಸಮಾಜದ ವತಿಯಿಂದ ಶನಿವಾರ ಏರ್ಪಡಿಸಿದ್ದ ಗಂಗಾಪರಮೇಶ್ವರಿ ಸಮುದಾಯ ಭವನ ಲೋಕಾರ್ಪಣೆ ಮತ್ತು ಗಂಗಾ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ ಸಮಾನತೆಯನ್ನು ಸಾರುವ ಮೂಲಕ ಸಮಾನ ಸಮಾಜದ ಪರಿಕಲ್ಪನೆ ಬಿತ್ತಿದವರು. ಜಾತೀಯತೆ, ಮೂಢನಂಬಿಕೆ ಮೊದಲಾದವುಗಳನ್ನು ಸಮಾಜದಿಂದ ತೊಲಗಿಸಲು ವಚನದ ಮೂಲಕ ಕಾರ್ಯದ ಮೂಲಕ ಪ್ರಯತ್ನ ನಡೆಸಿದ್ದಾರೆ. ಅವರ ಆದರ್ಶದ ಮಾರ್ಗವನ್ನು ನಾವು ಅರಿತುಕೊಂಡು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಂಪ್ರದಾಯದ ಹೆಸರಿನಲ್ಲಿ ಪ್ರಾಣಿಬಲಿ, ಹಿನ್ನೆಲೆ ತಿಳಿಯದೆ ಬೇರೆಬೇರೆ ಧಾರ್ಮಿಕ ಆಚರಣೆ ಸರಿಯಲ್ಲ. ಚಿಂತೆ ಬದಲು ನಾವು ಸಮಾಜಮುಖೀಯಾಗಿ ಏನನ್ನಾದರೂ ಮಾಡಬೇಕು ಎನ್ನುವ ಚಿಂತನೆ ಇರಬೇಕು. ಗಂಗಾ ಜಯಂತ್ಯೋತ್ಸವ ನಮ್ಮನ್ನು ಚಿಂತನೆಯತ್ತ ಕೊಂಡೊಯ್ಯಬೇಕು ಎಂದು ಹೇಳಿದರು.

12ನೇ ಶತಮಾನದಲ್ಲಿ ಕನ್ನಡವನ್ನು ವಚನಗಳ ಮೂಲಕ ಪರಿಚಯಿಸಲಾಯಿತು. ಶಿವಶರಣರ ಯುಗದಲ್ಲಿ ಸಚ್ಛಾರಿತ್ರ್ಯದ ಬದುಕು ಕಟ್ಟಿಕೊಳ್ಳುವುದನ್ನು ವಚನಗಳ ಮೂಲಕ ತಿಳಿಸಿ ಕೊಟ್ಟಿದ್ದಾರೆ. ಸಣ್ಣ ಜನಾಂಗವೊಂದು ಅತ್ಯಂತ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡಿರುವುದು ನಿಜಕ್ಕೂ ಸ್ಮರಣೀಯ ಕೆಲಸವಾಗಿದೆ. ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಸಮುದಾಯ ಭವನದ ಜೊತೆಗೆ ಜನಾಂಗ ಬಾಂಧವರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಇಲ್ಲಿ ನಡೆದಿದೆ. ಸಮಾಜ ಸಂಸ್ಕಾರಯುತವಾಗಿರಬೇಕಾದರೆ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನ ಸಿಗುವಂತೆ ಆಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು, ಧರೆಯ ಪರಮಾಪ್ತೆ ಗಂಗೆ. ಎಲ್ಲ ಖಂಡಗಳಲ್ಲಿಯೂ ನೀರಿದೆ. ಆದರೆ ಎಲ್ಲ ನೀರು ಗಂಗೆಯಲ್ಲ. ಗಂಗೆಯ ಭೂಸ್ಪರ್ಶದ ದಿನವನ್ನು ಗಂಗಾ ಜಯಂತಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಗಂಗೆ ಪಾವನೆಯೇ ಹೊರತು ಪತಿತೆಯಲ್ಲ. ಅನೇಕರ ಪಾಪಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡು ಮನುಷ್ಯನನ್ನು ಪುನೀತವಾಗಿ ಮಾಡುವ ಶಕ್ತಿ ಇರುವುದು ಗಂಗಾನದಿಗೆ ಮಾತ್ರ. ಅಂಬಿಗರು ಎಷ್ಟು ನಿಷ್ಟರು ಎನ್ನುವುದನ್ನು ನಾವು ಗುಹ ಮತ್ತು ರಾಮನ ಸನ್ನಿವೇಶದಲ್ಲಿ ಕಾಣಬಹುದು ಎಂದರು.

Advertisement

ಸಮುದಾಯ ಭವನ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾಗಡಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಮುಖರಾದ ಕೆ.ಆರ್‌. ಧರ್ಮಪ್ಪ, ಇಕ್ಕೇರಿ ರಾಮಣ್ಣ, ಡಿ.ಬಿ. ಕೆಂಚಪ್ಪ, ಎ. ಹಾಲೇಶಪ್ಪ, ಜೆ. ಭೀಮಣ್ಣ, ನಾಗರಾಜ್‌, ಎಚ್.ಎಂ. ರಂಗನಾಥ್‌, ಕೆ.ಆರ್‌. ಮೇಘರಾಜ್‌, ರುಕ್ತೇಶ್‌, ಬಿ.ಡಿ. ರವಿಕುಮಾರ್‌, ಹುಳಿಗದ್ದೆ ನಾಗೇಂದ್ರ, ಗೀತಾ ಪರಶುರಾಮ್‌, ಲಲಿತಮ್ಮ ಇನ್ನಿತರರು ಇದ್ದರು. ಸೋಮಣ್ಣ ಪ್ರಾರ್ಥಿಸಿದರು. ನಟರಾಜ ಸ್ವಾಗತಿಸಿದರು. ಸಮುದಾಯ ಭವನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್‌.ವಿ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್‌ ಜಿ. ವಂದಿಸಿದರು. ರವಿ ಜಂಬಗಾರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next