Advertisement

ಔಷಧ ವನ ಬೆಳೆಸಿದ್ರೆ ಆಸ್ಪತ್ರೆ ನಿರ್ಮಿಸಿದಂತೆ: ಡಾ|ಪತಂಜಲಿ

05:47 PM May 08, 2019 | Naveen |

ಸಾಗರ: ಸಾರ್ವಜನಿಕರಿಗೆ ಔಷಧ ಸಸ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಿ ಗ್ರಾಮಗಳಲ್ಲಿ ಔಷಧ ವನಗಳನ್ನು ನಿರ್ಮಾಣ ಮಾಡಿದರೆ ಊರಿನಲ್ಲಿ ಒಂದು ಆಸ್ಪತ್ರೆ ನಿರ್ಮಾಣ ಮಾಡಿದಂತೆ ಎಂದು ಆಯುರ್ವೇದಿಕ್‌ ತಜ್ಞ ಡಾ| ಪತಂಜಲಿ ಹೇಳಿದರು.

Advertisement

ತಾಲೂಕಿನ ನೀಚಡಿ ಗ್ರಾಮದಲ್ಲಿ ಕೆರೆ ಬಳಕೆದಾರರ ಸಂಘ ಹಾಗೂ ನೀಚಡಿ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ ಜಲಮೂಲಗಳ ಸಂರಕ್ಷಣೆ ಹಾಗೂ ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಸುವ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸುವ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಪರಿಸರದಲ್ಲಿ ನೈಸರ್ಗಿಕವಾಗಿ ಬೆಳೆದ ಗಿಡಮರಗಳನ್ನು ಸಂರಕ್ಷಿಸಿಕೊಂಡು ನಮ್ಮ ನಿತ್ಯದ ಆಹಾರದ ಬಳಕೆಗೆ ಹಾಗೂ ಔಷಧಿಯಾಗಿ ಬಳಸುವ ಸಸ್ಯಗಳನ್ನು ಬೆಳೆಸಲು ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಏಕಜಾತಿಯ ಸಸ್ಯಗಳನ್ನು ಬೆಳೆಸುವುದಕ್ಕಿಂತಲೂ ವಿವಿಧ ಜಾತಿಯ ಹಣ್ಣಿನ ಗಿಡಮರಗಳನ್ನು ಬೆಳೆಸಿ ಸಂರಕ್ಷಿಸಬೇಕು. ಗ್ರಾಮಗಳಲ್ಲಿ ಔಷಧ ವನ, ನಕ್ಷತ್ರವನ, ನವಗ್ರಹವನಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಜನರಿಗೆ ಮನೆಮದ್ದುಗಳನ್ನು ಬಳಸಿಕೊಳ್ಳುವ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವುದರಿಂದ ಅನೇಕ ಕಾಯಿಲೆಗಳಿಂದ ದೂರ ಉಳಿಯಬಹುದು. ನಮ್ಮ ನಡುವೆ ಬೆಳೆಯುವ ಅನೇಕ ಸಸ್ಯಗಳಲ್ಲಿ ಔಷಧೀಯ ಗುಣಗಳಿರುತ್ತವೆ. ಅವುಗಳನ್ನು ಬಳಕೆ ಮಾಡುವ ವಿಧಾನವನ್ನು ತಜ್ಞರಿಂದ ತಿಳಿದುಕೊಳ್ಳಬೇಕು. ಅಶ್ವತ್ಥ ಮರ ಇರುವ ಪ್ರದೇಶದಲ್ಲಿ ಯಾವಾಗಲೂ ಆರೋಗ್ಯಕರ ವಾತಾವರಣವಿದ್ದು ವಿವಿಧ ಗಿಡಗಳನ್ನು ಬೆಳೆಸಲು ಬೀಜೋತ್ಪಾದನಾ ಸಾಮರ್ಥ್ಯ ಸಹ ಹೆಚ್ಚಾಗಿ ಇರುತ್ತದೆ. ಇಂತಹ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಮೂಲಿಕಾವನವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನೀಚಡಿಯಲ್ಲಿ ಪುನರ್‌ ನಿರ್ಮಾಣಗೊಂಡ ಕೆರೆ ಮೇಲ್ಭಾಗದ ಅರಣ್ಯ ಪ್ರದೇಶದಲ್ಲಿ ಔಷಧ ಸಸ್ಯಗಳನ್ನು ಬೆಳೆಸುವ ಕುರಿತು ಆಯುರ್ವೇದ ವೈದ್ಯರೊಂದಿಗೆ ಸಮೀಕ್ಷೆ ನಡೆಸಲಾಯಿತು. ಊರಿನ ಪ್ರಮುಖರಾದ ದತ್ತಮೂರ್ತಿ, ಸುಬ್ಬರಾವ್‌ ಭಾಗವತ್‌, ಬಿ.ಜಿ. ಅನಂತಮೂರ್ತಿ, ಶ್ರೀನಾಥ್‌ ನಾಡಿಗ್‌, ಸುಭಾಷ್‌ ಬಾಪಟ್, ಎನ್‌.ಟಿ. ಯೋಗೀಶ್‌, ಶರ್ವಾಣಿ, ಪ್ರಜ್ಞಾ ಬಾಪಟ್ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next