ಸಾಗರ: ತಾಲೂಕಿನ ಕೆಲವು ಭಾಗಗಳಲ್ಲಿ ಕೆ.ಎಫ್.ಡಿ. ಇರುವುದರಿಂದ ರೈತರು ತಮ್ಮ ರಾಸುಗಳನ್ನು ಮೇಯಲು ಕಾಡಿಗೆ ಕಳಿಸಿ, ಹಿಂದಿರುಗುವ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ| ಅಶೋಕ್ ಹೇಳಿದರು.
ತಾಲೂಕಿನ ವರದಾಮೂಲದಲ್ಲಿ ಶನಿವಾರ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರ ಮತ್ತು ವರದಾಮೂಲ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಹೈನುರಾಸುಗಳಲ್ಲಿ ಆಹಾರ ನಿರ್ವಹಣೆ ಮತ್ತು ಕ್ಯಾಸನೂರು ಅರಣ್ಯ ಕಾಯಿಲೆ ನಿಯಂತ್ರಣ ಕುರಿತ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.
ಕ್ಯಾಸನೂರು ಅರಣ್ಯ ಕಾಯಿಲೆ ಸಾಕಷ್ಟು ಸಾವು- ನೋವಿಗೆ ಕಾರಣವಾಗಿದೆ. ಬೇಸಿಗೆ ಸಂದರ್ಭದಲ್ಲಿ ಕಾಯಿಲೆಯ ಹರಡುವಿಕೆ ಹೆಚ್ಚುತ್ತದೆ. ಉಣುಗಿನ ಮೂಲಕ ಮನುಷ್ಯ ದೇಹಕ್ಕೆ ಕಾಯಿಲೆ ಹರಡುತ್ತಿದ್ದು, ಆರೋಗ್ಯ ಇಲಾಖೆ ನೀಡುವ ಮುಂಜಾಗ್ರತಾ ಕ್ರಮವನ್ನು ರೈತರು ಪಡೆದುಕೊಂಡು ಅದರ ಪ್ರಕಾರ ನಡೆದುಕೊಳ್ಳಬೇಕು. ಕಾಯಿಲೆ ನಿಯಂತ್ರಣಕ್ಕೆ ಮತ್ತು ಬಾರದಂತೆ ನೋಡಿಕೊಳ್ಳಲು ಎಲ್ಲರೂ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಹೈನುರಾಸುಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಮಾರುಕಟ್ಟೆಯಲ್ಲಿ ಹಾಲಿನ ದರ ಜಾಸ್ತಿ ಇದ್ದರೂ ಹಾಲು ಉತ್ಪಾದನೆ ಪ್ರಮಾಣ ಜಾಸ್ತಿಯಾಗಲು ಅಗತ್ಯ ಪ್ರಯತ್ನ ನಡೆಸುತ್ತಿಲ್ಲ. ಇಂತಹ ಕಾರ್ಯಾಗಾರಗಳು ಹೈನುರಾಸುಗಳ ಸಮಸ್ಯೆ ಕುರಿತು ಚರ್ಚೆ ನಡೆಸಿ, ಅದಕ್ಕೆ ಪರಿಹಾರ ಕಲ್ಪಿಸುವ ಬಗ್ಗೆ ಗಮನ ಹರಿಸಲಿದೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಡಾ| ಜ್ಯೋತಿ ರಾಠೊಡ್ ಮಾತನಾಡಿ, ರೈತರು ಹೈನುಗಾರಿಕೆಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಕೃಷಿ ಜೊತೆಗೆ ಹೈನುಗಾರಿಕೆ ಉಪ ಕಸುಬಾಗಿ ಕೈಗೊಳ್ಳುವುದರಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯವಿದೆ. ಬದಲಾದ ದಿನಮಾನಗಳಲ್ಲಿ ಪಶುಪಾಲನೆಗೆ ಬೇಕಾದ ನೆರವು ಸಿಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಾಲು ಒಕ್ಕೂಟದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಯತೀಶ್ ಇದ್ದರು. ಅಶೋಕ್ ಕಾಶಿ ಸ್ವಾಗತಿಸಿದರು. ನಾಗೇಂದ್ರ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಎಂ.ಸಿ. ವಂದಿಸಿದರು. ಶ್ರೀಕಾಂತ್ ದೀಕ್ಷಿತ್ ನಿರೂಪಿಸಿದರು.