ಸಾಗರ: ರಾಷ್ಟ್ರಕವಿ ಕುವೆಂಪು ಅವರ ಹಸ್ತಾಕ್ಷರವುಳ್ಳ ಪತ್ರವೊಂದು ನಗರದ ನಿವಾಸಿಯೊಬ್ಬರ ಮನೆಯಲ್ಲಿದೆ. 1989ರ ಆ. 22ರಂದು ಅಮೆರಿಕದ ಸ್ಯಾನ್‌ಅಂಟೋನಿಯೋದ ಕುವೆಂಪು ಕನ್ನಡ ಕೂಟದವರು ರಾಷ್ಟ್ರಕವಿ ಕುವೆಂಪು ಅವರಿಗೆ ಗೌರವಿಸಿ ನೀಡಿದ ಸನ್ಮಾನ ಪತ್ರ ಇದಾಗಿದೆ. ನಗರದ ಸುಭಾಷ್ ನಗರದ ನಿವಾಸಿ ಲಕ್ಷ್ಮೀನಾರಾಯಣ ಹೆಗಡೆ ಅವರ ಮನೆಯಲ್ಲಿ ಇರುವ ಈ ಪತ್ರ ಹಲವು ನೆನಪುಗಳನ್ನು ಹಸಿರಾಗಿಟ್ಟಿದೆ.
ಅಮೇರಿಕದ ಸ್ಯಾನ್‌ಅಂಟೋನಿಯೋದ ಕುವೆಂಪು ಕನ್ನಡ ಕೂಟದ ಅಂದಿನ ಅಧ್ಯಕ್ಷ ಡಾ| ಹಳೇಕೋಟೆ ಕುಮಾರ್, ಕಾರ್ಯದರ್ಶಿ ಡಾ| ರಾಜಮ್ಮ ಹಾಗೂ ಖಜಾಂಚಿ ಡಾ| ಗಣೇಶಪ್ಪ ಮತ್ತು ಸದಸ್ಯರು ಕನ್ನಡ ಸಾಹಿತ್ಯ ಲೋಕದ ವಿಭೂತಿ ಪುರುಷ ಕುವೆಂಪು ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಸಮರ್ಪಿಸಿದ ಸನ್ಮಾನ ಪತ್ರ ಇದು. ಇಂದು ಕುವೆಂಪು ಕನ್ನಡ ಕೂಟವು ಅಮೆರಿಕದ ಕನ್ನಡ ಕೂಟಗಳ ಒಕ್ಕೂಟ- ಅಕ್ಕದಲ್ಲಿ ವಿಲೀನವಾಗಿದ್ದು, ಡಾ| ಹಳೇಕೋಟೆ ಕುಮಾರ್ ಗೌರವಾನ್ವಿತ ಪದಾಧಿಕಾರಿಯಾಗಿದ್ದಾರೆ.
ಈ ಸನ್ಮಾನ ಪತ್ರವನ್ನು 1989ರಲ್ಲಿ ಮೂಡಿಗೆರೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿ ಕಾರಿಯಾಗಿದ್ದ ಲಕ್ಷ್ಮೀನಾರಾಯಣ ಹೆಗಡೆ ಬರೆದಿದ್ದಾರೆ. ಕುವೆಂಪು ಕನ್ನಡ ಕೂಟದ ಅಂದಿನ ಅಧ್ಯಕ್ಷ ಕುಮಾರ್ ಅವರ ಸಹೋದರ ಹಳೇಕೋಟೆ ರಮೇಶ ಆ ಸಂದರ್ಭದಲ್ಲಿ ಮೂಡಿಗೆರೆಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸಾಹಿತ್ಯಾಸಕ್ತಿ ಸೇರಿದಂತೆ ಸಮಾನಾಸಕ್ತಿಗಳಿಂದಾಗಿ ಹಳೇಕೋಟೆ ರಮೇಶ ಮತ್ತು ಲಕ್ಷ್ಮೀ ನಾರಾಯಣ ಅವರ ನಡುವೆ ಸ್ನೇಹಸಂಬಂಧ ಏರ್ಪಟ್ಟಿತ್ತು. ಆ ಹಿನ್ನೆಲೆಯಲ್ಲಿ ರಮೇಶ ತಮ್ಮ ಗೆಳೆಯ ಲಕ್ಷ್ಮೀ ನಾರಾಯಣ ಅವರ ಬಳಿ ಕುವೆಂಪು ಕನ್ನಡ ಕೂಟವು ಕುವೆಂಪು ಅವರಿಗೆ ನೀಡುವ ಸನ್ಮಾನ ಪತ್ರ ಬರೆಯಲು ಕೇಳಿಕೊಂಡಿದ್ದರು. ಕುವೆಂಪು ಅವರ ಕೃತಿಗಳನ್ನು ಓದಿದ ಹಿನ್ನೆಲೆಯಲ್ಲಿ ಆಕರ್ಷಕ ಸನ್ಮಾನ ಪತ್ರವನ್ನು ಲಕ್ಷ್ಮೀನಾರಾಯಣ ಬರೆದುಕೊಟ್ಟಿದ್ದರು.
ಅಮೆರಿಕಾದ ಸ್ಯಾನ್ ಅಂಟೋನಿಯೋದ ಕುವೆಂಪು ಕನ್ನಡ ಕೂಟದ ಪದಾಧಿಕಾರಿಗಳೆಲ್ಲ ಒಟ್ಟಾಗಿ ಬಂದು ಕುವೆಂಪು ಅವರನ್ನು ಮೈಸೂರಿನ ಉದಯರವಿಯಲ್ಲಿ ಸನ್ಮಾನಿಸಿದ್ದರು. ಸನ್ಮಾನ ಪತ್ರದ ಹತ್ತಿಪ್ಪತ್ತು ಪ್ರತಿಗಳನ್ನು ಮಾಡಿಸಿ, ಅದರಲ್ಲಿ ಕುವೆಂಪು ಅವರ ಹಸ್ತಾಕ್ಷರವನ್ನು ಹಾಕಿಸಿದ್ದರು. ಅಂಥದ್ದೊಂದು ಸನ್ಮಾನ ಪತ್ರವನ್ನು ಲಕ್ಷ್ಮೀ ನಾರಾಯಣ ತಮ್ಮ ಮನೆಯಲ್ಲಿಟ್ಟುಕೊಂಡು ಆಪ್ತೇಷ್ಟರಿಗೆ ತೋರಿಸಿ ಸಂಭ್ರಮಿಸುತ್ತಾರೆ.
ಹಳೆ ನೆನಪುಗಳನ್ನು ಕೆದಕುವ ಲಕ್ಷ್ಮೀನಾರಾಯಣ, ಮೈಸೂರಿನಲ್ಲಿನ ಉದಯರವಿಯಲ್ಲಿ ಕುವೆಂಪು ಅವರನ್ನು ಸನ್ಮಾನಿಸುವ ಸಲುವಾಗಿ ಗೆಳೆಯ ರಮೇಶ ಹಳೇಕೋಟೆ ಸನ್ಮಾನ ಪತ್ರವೊಂದನ್ನು ಬರೆದುಕೊಡಲು ಸೂಚಿಸಿದ್ದರು. ನಾನಾಗ ಮೂಡಿಗೆರೆಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದೆ. ರಮೇಶ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅವರ ಅಣ್ಣ ಡಾ| ಹಳೇಕೋಟೆ ಕುಮಾರ್ ಅಮೆರಿಕದಲ್ಲಿ ಪ್ರಸಿದ್ಧ ವೈದ್ಯರಾಗಿದ್ದರು. ರಮೇಶ, ಕೆಂಜಿಗೆ ಪ್ರದೀಪ ಮುಂತಾದವರು ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿಗಳು. ಕುಪ್ಪಳ್ಳಿಯ ಕವಿಮನೆಯಲ್ಲಿ ಸಹ ಈ ಸನ್ಮಾನ ಪತ್ರ ಇದೆ ಎಂದು ಸ್ಮರಿಸುತ್ತಾರೆ.