Advertisement

ಮಳೆ ಕಡಿಮೆಯಾದರೂ ಮುಂದುವರಿದ ಅನಾಹುತ

11:30 AM Aug 08, 2019 | Naveen |

ಸಾಗರ: ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿದು ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದ್ದ ಆಶ್ಲೇಷಾ ಮಳೆ ಮಂಗಳವಾರ ರಾತ್ರಿಯಿಂದ ಸಾಕಷ್ಟು ಕಡಿಮೆಯಾಗಿದೆ. ಬುಧವಾರ ಕೆಲಸಮಯ ಬಿರು ಮಳೆ ಸುರಿದಿದೆ. ಆದರೆ ಮಳೆಯ ಹಿನ್ನೆಲೆಯಲ್ಲಿ ಹಲವು ಅನಾಹುತಗಳಾಗಿದ್ದು, ಅವುಗಳ ವಿವರ ಲಭ್ಯವಾಗುತ್ತಿದೆ. ಬುಧವಾರ ತಾಲೂಕಿನಾದ್ಯಂತ ಐದು ಮನೆಗಳು ನೆಲಕ್ಕುರುಳಿದ ಮಾಹಿತಿ ಲಭ್ಯವಾಗಿದೆ.

Advertisement

11ನೇ ವಾರ್ಡ್‌ನ ಜೋಸೆಫ್‌ ನಗರದ ಪಂಡಿತ್‌ ಗಲ್ಲಿಯಲ್ಲಿ ಗಾಳಿಮಳೆಗೆ ಮನೆ ಬಿದ್ದು ಹೋದ ಘಟನೆ ನಡೆದಿದೆ. ನಿವೃತ್ತ ಉದ್ಯೋಗಿ ಜಯಮಾಲ ಎಂಬುವವರಿಗೆ ಸೇರಿರುವ ಈ ಮನೆಯಲ್ಲಿ ಆ ಸಮಯದಲ್ಲಿ ಯಾರೂ ವಾಸ ಇಲ್ಲದೆ ಇದ್ದುದ್ದರಿಂದ ಮನೆ ಬಿದ್ದಾಗ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ನಗರಸಭೆ ಪೌರಾಯುಕ್ತರು, ವಾರ್ಡ್‌ ಸದಸ್ಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಸೂರಗುಪ್ಪೆಯ ಕೆರಿಸ್ವಾಮಿ ಅವರ ದನದ ಕೊಟ್ಟಿಗೆ ಮಳೆಗಾಳಿಗೆ ನೆಲಸಮಗೊಂಡಿದೆ.

ಮಳೆಯ ಹಿನ್ನೆಲೆಯಲ್ಲಿ ವರದಾ ನದಿಯಲ್ಲಿನ ನೆರೆ ಸದೃಶ ಸ್ಥಿತಿಯಿಂದಾಗಿ ರೈಲ್ವೆ ಹಳಿಯ ಮೇಲೆ ನೀರು ಬಂದ ಕಾರಣ ಮಂಗಳವಾರ ರೈಲುಗಳು ತಾಳಗುಪ್ಪದವರೆಗಿನ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ತಾಳಗುಪ್ಪ- ಮೈಸೂರು ರೈಲು ಸಾಗರ ನಿಲ್ದಾಣದವರೆಗೆ ಮಾತ್ರ ಆಗಮಿಸಿದ್ದು, ಇಲ್ಲಿಂದಲೇ ಮರು ಪ್ರಯಾಣ ಬೆಳೆಸಿದೆ. ಮಂಗಳವಾರ ರಾತ್ರಿಯ ತಾಳಗುಪ್ಪ- ಬೆಂಗಳೂರು ರೈಲು ಕೂಡ ಸಾಗರದಿಂದಲೇ ಪ್ರಯಾಣ ಆರಂಭಿಸಿದೆ. ವರದಾ ನದಿಯ ಪ್ರವಾಹ ಸುಧಾರಿಸದೇ ಇರುವ ಪರಿಸ್ಥಿತಿಯಲ್ಲಿ ರೈಲುಗಳು ಸಾಗರದವರೆಗೆ ಮಾತ್ರ ಸಂಚರಿಸುತ್ತಿವೆ. ತಾಳಗುಪ್ಪ ಹೋಬಳಿಯ ಸಾವಿರಾರು ಎಕರೆ ಗದ್ದೆ ಜಲಾವೃತವಾಗಿವೆ. ಸ್ಥಳಕ್ಕೆ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕ ಕುಮಾರ್‌ ಬಂಗಾರಪ್ಪ ಭೇಟಿ ನೀಡಿದ್ದಾರೆ. ಈ ನಡುವೆ ಕಣಸೆ ಹೊಳೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. 2013ರಲ್ಲಿ ಈ ರೀತಿಯ ನೆರೆ ಬಂದದ್ದು ಬಿಟ್ಟರೆ ಇದೇ ಮೊದಲು ಎಂದು ಸ್ಥಳೀಯರು ಮಾಹಿತಿ ನೀಡಿದರು. ಅಲ್ಲಿನ ಹಿರಿಯ ಮಂಡಗಳಲೆ ನಾರಾಯಣಪ್ಪ ‘ಉದಯವಾಣಿ’ಯೊಂದಿಗೆ ಮಾತನಾಡಿ, ಹಿಂದೆಲ್ಲ ಒಂದೆರಡು ಪಾದದ ಮಳೆ ಬಿದ್ದ ನಂತರ ಈ ರೀತಿಯ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು.

ಸೇತುವೆ ಕುಸಿತ: ತಾಲೂಕಿನ ಇಂದ್ರೋಡಿ ಮನೆಯಿಂದ ಬಿಲ್ಕಂದೂರಿಗೆ ತೆರಳುವ ಮಾರ್ಗದ ಅತ್ತಿಗೋಡು ಸೇತುವೆ ಸಂಪೂರ್ಣ ಕುಸಿದಿದೆ. ಬಾರಂಗಿ ಹೋಬಳಿಯ ಬಣ್ಣೂಮನೆ ಗ್ರಾಮದ ನಂದೋಡಿಯಲ್ಲಿ ಅತಿಯಾದ ಮಳೆಯಿಂದ ಹಳ್ಳಕ್ಕೆ ಗುಡ್ಡ ಕುಸಿದು ಹೊಳೆ ತೋಟದ ಮೇಲೆ ಹರಿದ ಪರಿಣಾಮ ಇಲ್ಲಿನ ದೇವಕಮ್ಮ ನಾರಾಯಣ ಭಟ್ ಅವರ 1.07 ಎಕರೆ ತೋಟ ಪೂರ್ಣವಾಗಿ ಹಾನಿಗೊಳಗಾಗಿದೆ. ತೋಟದಲ್ಲಿಯೇ ನೀರು ಹರಿಯುತ್ತಿದ್ದು ಅಡಕೆ ಸಸಿ, ಮಣ್ಣು ಕೊಚ್ಚಿಕೊಂಡು ಹೋಗಿದೆ. ಬುಧವಾರ ಬೆಳಿಗ್ಗೆ ಜೋಗಿನಗದ್ದೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206ನಲ್ಲಿ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ನಗರದ ಮಧುರಾ ಹೊಟೇಲ್ ಎದುರಿನ ದೊಡ್ಡ ಮರವೊಂದು ಮಧ್ಯಾಹ್ನದ ವೇಳೆ ಹೊಟೇಲ್ ಪಕ್ಕದಲ್ಲಿ ಉರುಳಿದ್ದು ಅದೃಷ್ಟವಾಶಾತ್‌ ಯಾವುದೇ ಜೀವಕ್ಕೆ ಹಾನಿ, ಗಾಯಗಳಾಗಿಲ್ಲ. ಜನನಿಬಿಡಿ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಮೂರು ಬೈಕ್‌ಗಳು ಜಖಂಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next