ಸಾಗರ: ಪತ್ರಿಕೆ ವಿತರಕರು ಸಂಕಷ್ಟದ ನಡುವೆಯೇ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಇವರ ಎಂತಹದ್ದೇ ಸಮಸ್ಯೆ ಇದ್ದರೂ ನಾನು ಸ್ಪಂದಿಸುತ್ತೇನೆ ಎಂದು ಶಾಸಕ ಎಚ್. ಹಾಲಪ್ಪ ಭರವಸೆ ನೀಡಿದರು.
ನಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಕರ್ತರು ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ. ತುರ್ತು ಸಂದರ್ಭದಲ್ಲಿ ಕೆಲವೊಮ್ಮೆ ಜನರು ಪತ್ರಕರ್ತರ ಸಹಕಾರವನ್ನು ಅಪೇಕ್ಷೆ ಪಡುತ್ತಾರೆ. ತಾವು ಸಂಗ್ರಹಿಸಿದ ಸುದ್ದಿ ಅಚ್ಚಾಗಿ ಬಂದಾಗ ಅದು ಪತ್ರಿಕೆಗಳ ಮೂಲಕ ಓದುಗರಿಗೆ ತಲುಪಿದಾಗ ಪತ್ರಕರ್ತರ ಕೆಲಸ ಸಾರ್ಥಕವಾಗುತ್ತದೆ. ಅಂತಹ ಕೆಲಸವನ್ನು ಪತ್ರಿಕಾ ವಿತರಕರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ, ಗೌರವಿಸುವುದು ಶ್ರೇಷ್ಠ ಕೆಲಸ ಎಂದು ತಿಳಿಸಿದರು.
ತಿಂಗಳ ಪೂರ್ತಿ ನಿಮ್ಮ ಮನೆಗೆ ಪತ್ರಿಕೆ ಹಾಕಿ ತಿಂಗಳ ಕೊನೆಯಲ್ಲಿ ಬಿಲ್ ಕೇಳಲು ಬರುವ ಹುಡುಗರನ್ನು ನಾಳೆ, ನಾಡಿದ್ದು ಬಾ ಎಂದು ಸತಾಯಿಸಬೇಡಿ. ಪತ್ರಿಕೆ ಬಿಲ್ ಕೇಳುವ ಹುಡುಗ ಬಂದರೆ ವಾಪಸ್ ಕಳಿಸಬೇಡಿ. ತಕ್ಷಣ ಪಾವತಿ ಮಾಡಿ ಅವರನ್ನು ಅಲೆಸಬೇಡಿ ಎಂದು ನಾನು ಮನೆಯಲ್ಲಿ ಹೇಳಿದ್ದೇನೆ ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಮಾತನಾಡಿ, ನಾನು ಒಂದು ಕಾಲದಲ್ಲಿ ಬೇರೆಬೇರೆ ಪತ್ರಿಕೆಯನ್ನು ಮನೆಮನೆಗೆ ವಿತರಿಸಿದ್ದೇನೆ. ಪತ್ರಿಕೆ ವಿತರಕರ ಕಷ್ಟ ಏನೆಂದು ನನಗೆ ಗೊತ್ತಿದೆ. ಸರ್ಕಾರಿ ನೌಕರರಿಗೆ ತಿಂಗಳಿಗೆ ಸಂಬಳ, ಬೇರೆಬೇರೆ ರೀತಿಯ ಸವಲತ್ತುಗಳು ಇರುತ್ತದೆ. ಆದರೆ ಪತ್ರಿಕೆಯನ್ನು ಮನೆಮನೆಗೆ ಹಂಚುವ ಹುಡುಗರಿಗೆ ಯಾವುದೇ ಪ್ರತ್ಯೇಕ ಆದಾಯ ಇರುವುದಿಲ್ಲ. ಅಂತಹವರ ಕಷ್ಟವನ್ನು ಸಮಾಜ ಗುರುತಿಸಬೇಕು. ಈ ನಿಟ್ಟಿನಲ್ಲಿ ಒಕ್ಕೂಟ ಇಂತಹ ಸಾರ್ಥಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬಂದಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಮಹೇಶ್ ಹೆಗಡೆ, ಗಣಪತಿ ಶಿರಳಗಿ, ರಮೇಶ್ ಎನ್., ಎಚ್.ಎಲ್. ರಾಘವೇಂದ್ರ, ಉದಯವಾಣಿ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ತಾಲೂಕು ಅಧ್ಯಕ್ಷ ವೈ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ನಾಗೇಶ್, ಸಿವಿಲ್ ಸರ್ಜನ್ ಡಾ| ಪ್ರಕಾಶ್ ಬೋಸ್ಲೆ, ಡಾ| ಸುರೇಶ್ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿವೆಂಕಟ ರಾಜು, ನಗರಸಭೆ ಸದಸ್ಯ ಆರ್. ಶ್ರೀನಿವಾಸ್ ಇದ್ದರು. ರಮ್ಯ ಹೆಗಡೆ ಪ್ರಾರ್ಥಿಸಿದರು. ಜುಬೇದ ಎಂ. ಅಲಿ ಸ್ವಾಗತಿಸಿದರು. ದೀಪಕ್ ಸಾಗರ್ ಅಭಿನಂದನಾ ಭಾಷಣ ಮಾಡಿದರು. ಕೆ. ಗುರುಶಾಂತ ವಂದಿಸಿದರು.