ಸಾಗರ: ಜಾನಪದ ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳಾಗಿದ್ದು, ಅವರನ್ನು ಪೋಷಣೆ ಮಾಡುವತ್ತ ಸರ್ಕಾರ ಹಾಗೂ ಸಮಾಜ ಗಮನ ಹರಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಆಯ್ದ ಜಾನಪದ ಕಲಾವಿದರಿಗೆ ದಿನಸಿ ಕಿಟ್ ಮತ್ತು ಆರ್ಥಿಕ ಸಹಾಯಧನ ವಿತರಣೆ ಮಾಡಿ ಮಾತನಾಡಿದ ಅವರು, ಕಲಾವಿದರು ಉಳಿದರೆ ಕಲೆ ಉಳಿಯುತ್ತದೆ. ಕಲೆ ಉಳಿಯಬೇಕಾದರೆ ನಾವು ಜಾನಪದ ಕಲಾವಿದರನ್ನು ಉಳಿಸಿಕೊಳ್ಳುವ ತುರ್ತು ಅವಶ್ಯವಿದೆ. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಜಾನಪದ ಕಲೆಯನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈಗಾಗಲೇ ಜಾನಪದ ಪರಿಷತ್ ವತಿಯಿಂದ ರಾಜ್ಯಾಧ್ಯಕ್ಷರಾದ ಟಿ.ತಿಮ್ಮೇಗೌಡ ನೇತೃತ್ವದಲ್ಲಿ ಜಾನಪದ ಕಲಾವಿದರಿಗೆ ಆರ್ಥಿಕ ಸಹಕಾರ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು 2 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯದ 3 ಸಾವಿರ ಕಲಾವಿದರು ಆರ್ಥಿಕ ಸಹಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲಿ ಹಣ ಅವರ ಖಾತೆಗೆ ಜಮೆ ಆಗುವ ನಿರೀಕ್ಷೆ ಹೊಂದಲಾಗಿದೆ. ಜೊತೆಗೆ ಆದಿಚುಂಚನಗಿರಿ ಮಠಕ್ಕೆ ಮಾಡಿಕೊಂಡ ಮನವಿ ಮೇರೆಗೆ 3 ಲಕ್ಷ ರೂ. ಹಣ ನೀಡಿದ್ದು, ಅದನ್ನು ಸಹ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ವಿತರಣೆ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 300 ಕಲಾವಿದರು ಅರ್ಜಿ ಸಲ್ಲಿಸಿದ್ದು, ಹಂತಹಂತವಾಗಿ ಅವರಿಗೆ ಆರ್ಥಿಕ ಸಹಾಯ, ದಾನಿಗಳಿಂದ ದಿನಸಿ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾನಪದ ಗಾಯಕ ವೈ.ಎನ್. ಹುಬ್ಬಳ್ಳಿ, ಯಕ್ಷಗಾನ ಕಲಾವಿದರಾದ ನಾರಾಯಣಪ್ಪ ತುಮರಿ, ಮಣಿಕಂಠ ಆವಿನಹಳ್ಳಿ, ಡೊಳ್ಳು ಕಲಾವಿದರಾದ ಓಂಕಾರಮ್ಮ, ಸುಧಾ, ಜಾನಪದ ಕಲಾವಿದ ರುದ್ರೇಶ್ ಅವರಿಗೆ 2 ಸಾವಿರ ರೂ. ಬೆಲೆಬಾಳುವ ದಿನಸಿ ಕಿಟ್ ಮತ್ತು 1 ಸಾವಿರ ರೂ. ಸಹಾಯಧನ ನೀಡಲಾಯಿತು. ಶಿಕ್ಷಕ ಚಂದ್ರಪ್ಪ ತುಮರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಪ್ರಮುಖರಾದ ನಾರಾಯಣಪ್ಪ ಕುಗ್ವೆ, ಕಸ್ತೂರಿ, ಚೂಡಾಮಣಿ ರಾಮಚಂದ್ರ, ವಸಂತ ಕುಗ್ವೆ, ಡಾ| ರಾಮಪ್ಪ, ಎಸ್.ಎಲ್.ಎನ್. ಸ್ವಾಮಿ, ಭಾಗೀರಥಿ ಹೆಗ್ಗೋಡು ಇನ್ನಿತರರು ಇದ್ದರು. ವಿ.ಟಿ. ಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಸ್. ಬಸವರಾಜ್ ವಂದಿಸಿದರು. ಪರಮೇಶ್ವರ ಕರೂರ್ ನಿರೂಪಿಸಿದರು.