Advertisement

ಶಂಕರ ಮಠದಲ್ಲಿ ಗೋಪುರ ಕುಂಭಾಭಿಷೇಕ ಉತ್ಸವ

12:11 PM Apr 26, 2019 | Naveen |

ಸಾಗರ: ಶೃಂಗೇರಿ ಶಾರದಾ ಪೀಠದ ಕಿರಿಯ ಸ್ವಾಮಿಗಳಾದ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಪ್ರಪ್ರಥಮ ಬಾರಿಗೆ ಸಾಗರಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಅವರು ಮೂರು ದಿನಗಳ ಕಾಲ ಈ ಭಾಗದ ವಿವಿಧ ಧಾರ್ಮಿಕ ಕ್ಷೇತ್ರಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾರದಾ ಪೀಠದ ಶಾಖಾ ಮಠವಾದ ಸಾಗರದ ಶಂಕರ ಮಠದಲ್ಲಿ ನಡೆಯುವ‌ ನೂತನ ಗೋಪುರ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರು ಶಾರದಾ ದೇವಿಗೆ ಸಲ್ಲಿಸುವ ವಿಶೇಷ ಪೂಜೆ ಹಾಗೂ ಕುಂಭಾಭಿಷೇಕ ಭಕ್ತರನ್ನು ಸೆಳೆಯಲಿದೆ ಎಂದು ನಿರೀಕ್ಷಿಸಲಾಗಿದೆ.

Advertisement

ಅಂತಿಮ ಹಂತದಲ್ಲಿ ಸಿದ್ಧತೆ: ಶೃಂಗೇರಿಯ ಹಿರಿಯ ಸ್ವಾಮೀಜಿ ಭಾರತಿ ತೀರ್ಥ ಮಹಾಸ್ವಾಮಿಗಳು ಹಿಂದಿನ ಹಲವು ಸಂದರ್ಭಗಳಲ್ಲಿ ಸಾಗರಕ್ಕೆ ಭೇಟಿ ನೀಡಿ ಭಕ್ತರನ್ನು ಹರಿಸಿದ್ದಾರೆ. ಹೊಸಗುಂದದ ದೇವಾಲಯ ಪುನರುಜ್ಜೀವನ ಕಾರ್ಯದಲ್ಲಿ ಅವರು ವಿಶೇಷ ಆಸ್ಥೆ ವಹಿಸಿದವರು. ಆದರೆ ಮಠದ ಕಿರಿಯ ಜಗದ್ಗುರುಗಳಾದ ವಿಧುಶೇಖರರು ಸನ್ಯಾಸ ದೀಕ್ಷೆ ಪಡೆದ ನಂತರ ಮೊದಲ ಬಾರಿಗೆ ಸಾಗರದಲ್ಲಿ ಹೆಜ್ಜೆ ಊರಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಗರದ ಭಕ್ತರು ಕುಂಭಾಭಿಷೇಕ ಮಹೋತ್ಸವ ಸಮಿತಿ ರೂಪಿಸಿಕೊಂಡು ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಗೌರವಾಧ್ಯಕ್ಷತೆಯ ಸಮಿತಿಯಲ್ಲಿ ಕಾರ್ಯಧ್ಯಕ್ಷ ಅಶ್ವಿ‌ನಿ ಕುಮಾರ್‌, ಪ್ರಧಾನ ಸಂಚಾಲಕ ಮ.ಸ. ನಂಜುಂಡಸ್ವಾಮಿ, ಸಂಚಾಲಕ ವೈ. ಮೋಹನ್‌ ಮೊದಲಾದವರ ಮುಂಚೂಣಿಯಲ್ಲಿ ನೂರಾರು ಮಹನೀಯರ ದೊಡ್ಡ ಪಡೆ ತಯಾರಿ ನಡೆಸಿದೆ.

26ರಂದು ಸಂಜೆ 5-30ಕ್ಕೆ ಆಗಮಿಸಲಿರುವ ಸ್ವಾಮಿಗಳನ್ನು ಜೋಗ ರಸ್ತೆಯ ಶಾರದಾಂಬಾ ದೇವಸ್ಥಾನದಿಂದ ಶೃಂಗೇರಿ ಮಠದವರೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಗುತ್ತದೆ. ನಂತರ ಧೂಳಿಪೂಜೆ, ಸಭಾ ಕಾರ್ಯಕ್ರಮ, ಜಗದ್ಗುರುಗಳಿಂದ ಆಶೀರ್ವಚನ, ರಾತ್ರಿ 8-30ಕ್ಕೆ ಶ್ರೀಗಳಿಂದ ಶಾರದಾ ಚಂದ್ರಮೌಳೇಶ್ವರ ಪೂಜೆ ನಡೆಯಲಿದೆ. 27ರಂದು ಬೆಳಗ್ಗೆ 8-30ಕ್ಕೆ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ಮತ್ತು ಶಿಖರ ಕುಂಭಾಭಿಷೇಕ, ಬೆಳಗ್ಗೆ 11ಕ್ಕೆ ಶ್ರೀಗಳ ದರ್ಶನ, ಭಕ್ತಾದಿಗಳಿಂದ ಪಾದಪೂಜೆ, ಮಧ್ಯಾಹ್ನ 12ಕ್ಕೆ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನವಚಂಡಿಯಾಗದ ಪೂರ್ಣಾಹುತಿ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ಇರುತ್ತದೆ. ಸಂಜೆ 6ಕ್ಕೆ ಮಾಸಿಕ ತಾಳಮದ್ದಲೆ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ, ನಂತರ ಶಂಕರ ದಿಗ್ವಿಜಯ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಆ ಅಂದಾಜಿನಲ್ಲಿಯೇ ಅಗತ್ಯ ತಯಾರಿ ನಡೆದಿದೆ.

ಶಂಕರ ಮಠದ ಸಾಮಾಜಿಕ ಬದ್ಧತೆ: ನಗರದ ಆತಿಥೇಯ ಶಂಕರ ಮಠ ಧಾರ್ಮಿಕ ಹಿನ್ನೆಲೆಯಲ್ಲಿ ರೂಪುಗೊಂಡಿದ್ದಾದರೂ ಸಾಮಾಜಿಕ ನೆಲೆಯಲ್ಲಿ ಜನರಿಗೆ ಸ್ಪಂದಿಸುವ ಮೂಲಕ ಜಾತಿ ಮೀರಿದ ವ್ಯವಸ್ಥೆಯಾಗಿ ಗೌರವ ಪಡೆದಿದೆ. 1964ರಲ್ಲಿಯೇ ಅಂದಿನ ಪುರಸಭೆ ಗಣಪತಿ ಕೆರೆಯ ದಡದಲ್ಲಿ ಉದ್ದೇಶಿತ ಶಂಕರ ಮಠಕ್ಕೆ ನಿವೇಶನ ನೀಡಿದ್ದರೂ 1989ರಲ್ಲಿ ಸಾಗರಕ್ಕೆ ಆಗಮಿಸಿದ ಅಂದಿನ ಶೃಂಗೇರಿ ಮಠದ ಜಗದ್ಗುರುಗಳಾದ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಹಾಗೂ ವಿದ್ವಾನ್‌ ಚಂದ್ರಶೇಖರ ಜೋಯ್ಸ ಇನ್ನಿತರರ ಸಮ್ಮುಖದಲ್ಲಿ ಹಿರಿಯ ಅಡಕೆ ವ್ಯಾಪಾರಿ ಎಸ್‌.ಆರ್‌. ತಿಮ್ಮಪ್ಪ ಅವರಿಗೆ ಸುವರ್ಣ ಮಂತ್ರಾಕ್ಷತೆ ನೀಡಿ ಮಠ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದರು. 2000ದ ಮಾರ್ಚ್‌ನಲ್ಲಿ ನಿರ್ಮಾಣ ಕಾರ್ಯ ಸಂಪನ್ನಗೊಂಡು ಮಹಾಗಣಪತಿ, ಶಾರದಾಂಬೆ ಹಾಗೂ ಶಂಕರಾಚಾರ್ಯರ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು. ಅವತ್ತು ಶೃಂಗೇರಿಯ ಭಾರತೀತೀರ್ಥ ಮಹಾಸ್ವಾಮಿಗಳು ಪ್ರತಿಷ್ಠಾಪನೆ ನೆರವೇರಿಸಿ ಎಸ್‌ಆರ್‌ಟಿ ಅವರನ್ನು ಧರ್ಮಾಧಿಕಾರಿಯವರನ್ನಾಗಿ ನೇಮಿಸಿದರು.

ಗುರುಗಳಿಂದ 2007ರಲ್ಲಿ ಶಿಲಾನ್ಯಾಸಗೊಂಡು 2011ರಲ್ಲಿ ಲೋಕಾರ್ಪಣೆಗೊಂಡ ಸಭಾಭವನ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಮಲೆನಾಡು ಗಮಕ ಕಲಾಸಂಘದ ಗಮಕ ಕಲೆಯ ಕಾರ್ಯಕ್ರಮಗಳಿಗೆ ಆಶ್ರಯ ತಾಣವಾಗಿರುವುದು, ಧಾರವಾಡದ ವಿದ್ಯಾಪೋಷಕ್‌ ಚಟುವಟಿಕೆಗಳಿಗೆ ಸ್ಥಳಾವಕಾಶ ಒದಗಿಸುವ ಶಿಕ್ಷಣ ಪ್ರೇಮಿಯಾಗಿರುವುದು, ಡಾ| ಪಾವಗಡ ಪ್ರಕಾಶ್‌ರಾವ್‌ ಅವರ ಭಗವದ್ಗೀತೆಗಳ ಪ್ರವಚನ ಸರಣಿಗೆ ಖಾಯಂ ಜಾಗವಾಗಿರುವುದು, ಕಿರುತೆರೆಯ ಯಶಸ್ವಿ ನಿರ್ದೇಶಕ ಟಿ.ಎನ್‌. ಸೀತಾರಾಂ, ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌, ವೈ.ಎಸ್‌.ವಿ. ದತ್ತ, ಚಿಕ್ಕಮಗಳೂರು ಕಣ್ಣನ್‌ ಮೊದಲಾದವರ ಉಪನ್ಯಾಸ, ವಿಚಾರ ಗೋಷ್ಠಿ, ಸ್ವರ್ಣವಲ್ಲಿ ಗಂಗಾಧರೇಶ್ವರ ಸ್ವಾಮೀಜಿಯವರ ಭಗವದ್ಗೀತೆ ಅಭಿಯಾನವನ್ನು ಇಲ್ಲಿ ನಡೆಸಿರುವುದು ಗಮನಾರ್ಹ.

Advertisement

ಲೋಕಾರ್ಪಣೆಯ ಸಾರ್ಥಕತೆ: ಈ ಕುರಿತು ಪ್ರತಿಕ್ರಿಯಿಸುವ ಈಗಿನ ಮಠ ವ್ಯವಸ್ಥಾಪಕ ಅಶ್ವಿ‌ನಿಕುಮಾರ್‌, ಸಭಾಭವನದ ಲೋಕಾರ್ಪಣೆ ಸಂದರ್ಭದಲ್ಲಿ ಜಗದ್ಗುರುಗಳು, ಸಭಾಭವನ ಎಂಬುದು ಕೇವಲ ಅಲಂಕಾರಿಕ ವಸ್ತುವಾಗಬಾರದು. ಈ ಸ್ಥಳಾವಕಾಶದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ಕಿಂಚಿತ್‌ ವ್ಯತ್ಯಯವಿಲ್ಲದೆ ಮಠ ನಡೆದುಕೊಂಡಿದೆ. ಸಭಾಭವನದ ನಿರ್ಮಾಣದ ನಂತರ ಮಠದ ಮೂಲ ಕಟ್ಟಡಕ್ಕೆ ಗೋಪುರವೊಂದನ್ನು ನಿರ್ಮಿಸಬೇಕೆಂದು ಧರ್ಮಾಧಿಕಾರಿ ತಿಮ್ಮಪ್ಪ ಅವರು ಸಂಕಲ್ಪಿಸಿಕೊಂಡಿದ್ದರು. ಅದು ಸಾಕಾರಗೊಳ್ಳುವ ದಿನ ಈಗ ಬಂದಿದ್ದು, ಕಿರಿಯ ಜಗದ್ಗುರುಗಳು ಕುಂಭಾಭಿಷೇಕದ ಮೂಲಕ ಲೋಕಾರ್ಪಣೆ ಮಾಡುತ್ತಿರುವುದು ಸಾರ್ಥಕ ಭಾವನೆಯನ್ನು ಮೂಡಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಧುಶೇಖರ ಸ್ವಾಮೀಜಿಗಳಿಗೆ ಬಿಡುವಿಲ್ಲದ ಕಾರ್ಯಕ್ರಮ
ಎರಡು ದಿನಗಳ ಕಾಲ ಶಂಕರಮಠದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ವಿಧುಶೇಖರ ಮಹಾಸ್ವಾಮಿಗಳು 27ರಂದು ಸಂಜೆ ಕೆಳದಿಯ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಥದ ದರ್ಶನ ಪಡೆಯಲಿದ್ದಾರೆ. 28ರಂದು ಬೆಳಗ್ಗೆ 9-30ಕ್ಕೆ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ಚಾರೋಡಿ ಕೊಂಕಣಿ ಆಚಾರ್‌ ಸಮಾಜದ ಶಾರದಾಂಬಾ ದೇವಸ್ಥಾನ, ನೂತನ ರಾಜಗೋಪುರದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೊಸಗುಂದದ ಉಮಾಮಹೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ಏ. 29ರಿಂದ ಮೇ 3ರವರೆಗೆ ನಡೆಯಲಿರುವ ದೇವಸ್ಥಾನದ ಪುನಃಪ್ರತಿಷ್ಟಾ ಸಹಿತ ಕುಂಭಾಭಿಷೇಕ ಮಹೋತ್ಸವದಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ಶಂಕರ ಮಠದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next