Advertisement

ಗಣಪತಿ ಕೆರೆ ಹಬ್ಬ ಆಚರಣೆಗೆ ವಿರೋಧ

05:57 PM Jan 09, 2020 | Naveen |

ಸಾಗರ: ನಗರದ ಗಣಪತಿ ಕೆರೆ ಹಬ್ಬವನ್ನು ಇದೇ ಮೊದಲ ಬಾರಿ ಶಾಸಕ ಎಚ್‌. ಹಾಲಪ್ಪ ಅವರು ನಡೆಸುತ್ತಿರುವುದು ಸಂತೋ‚ಷದ ವಿಚಾರವಾಗಿದೆ. ಆದರೆ ಕೆರೆಯ ಪುನರುಜ್ಜೀವನಕ್ಕೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳದೆ ಹಬ್ಬವನ್ನು ಆಚರಿಸುತ್ತಿರುವುದು ರಾಜಕೀಯದ ಪ್ರಚಾರದ ಉದ್ದೇಶದ್ದು ಎಂದು ತಾಲೂಕು ಕಾಂಗ್ರೆಸ್‌ ಆರೋಪಿಸಿದೆ.

Advertisement

ಈ ಬಗ್ಗೆ ಪತ್ರಿಕೆಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿರುವ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌. ಜಯಂತ್‌, ಗಣಪತಿ ಕೆರೆ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಮಂಜೂರು ಆದ ಮೊತ್ತವನ್ನು ಬಹಿರಂಗಪಡಿಸಬೇಕು. ಚುನಾವಣೆಯ ಪೂರ್ವದಲ್ಲಿ ಕೆರೆ ಒತ್ತುವರಿಯನ್ನು ತೆರವುಗೊಳಿಸುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದ್ದ ಭರವಸೆ ಹುಸಿಹೋಗಿದೆ ಎಂದು ಟೀಕಿಸಿದ್ದಾರೆ.

ಕೆರೆಯ ಹೂಳನ್ನು ಈವರೆಗೆ ತೆಗೆಯಲಿಲ್ಲ. ಕೊಳಚೆ ನೀರು ಕೆರೆಗೆ ಹೋಗುತ್ತಿರುವುದನ್ನು ತಪ್ಪಿಸಲಿಲ್ಲ. ಜನರಿಗೆ ವಾಯುವಿಹಾರಕ್ಕೆ ಸುಸಜ್ಜಿತವಾದ ಟ್ರ್ಯಾಕ್‌ ನಿರ್ಮಾಣವಾಗಲಿಲ್ಲ. ಕೆರೆಯ ಸುತ್ತ ಹಸುರೀಕರಣವಾಗಲಿಲ್ಲ. ಅಲ್ಲದೆ ಈಗಿರುವ ನಿಜವಾದ ಕೆರೆಯ ಅಳತೆಯ ಬಗ್ಗೆ ಸರಿಯಾದ ಸರ್ವೇ ನಡೆಸಲಿಲ್ಲ. ನಿಜವಾಗಿಯೂ ಗಣಪತಿ ಕೆರೆ ಅಭಿವೃದ್ಧಿಗಾಗಿ ಏನು ಮಾಡಿದ್ದೀರಿ ಎಂದು ಸಾರ್ವಜನಿಕರಿಗೆ ತಿಳಿಸಿ ಎಂದು ಸವಾಲು ಹಾಕಿದ್ದಾರೆ.

ಸರ್ವೆಯನ್ನು ನಡೆಸದೆ ಕೆರೆಗೆ ಸಂಬಂಧಿಸಿದ ಜಾಗವನ್ನು ಮಣ್ಣು ಹಾಕಿ ಮುಚ್ಚಲಾಗುತ್ತಿದೆ. ಅಧಿಕಾರದ ದರ್ಪದಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಜಕೀಯದ ಉದ್ದೇಶಕ್ಕಾಗಿ, ಪ್ರಚಾರಕ್ಕಾಗಿ ಪುರಾತನವಾದ ಗಣಪತಿ ಕೆರೆಯನ್ನು ಬಲಿ ಕೊಡುತ್ತಿರುವುದು ಸರಿಯಲ್ಲ. ಈ ರೀತಿಯ ಹಲವು ಗೊಂದಲಗಳು ಸಾರ್ವಜನಿಕರಿಗೆ ಇರುವಾಗಲೇ ಕೆರೆ ಹಬ್ಬವನ್ನು ಆಚರಣೆ ಮಾಡುವುದರಿಂದ ಪ್ರಯೋಜನವಿಲ್ಲ. ಮೊದಲು ಕೆರೆಯ ಅಭಿವೃದ್ಧಿ ಮಾಡಿ ಕೆರೆ ಹಬ್ಬವನ್ನು ಆಚರಣೆ ಮಾಡಿದರೆ ಅದಕ್ಕೆ ಕಾಂಗ್ರೆಸ್‌ ಸ್ವಾಗತಿಸಿ ಪಾಲ್ಗೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾಲಪ್ಪ ಭೇಟಿ: ಈ ನಡುವೆ ಗಣಪತಿ ಕೆರೆ ಅಭಿವೃದ್ಧಿ ಹಾಗೂ ಕೆರೆ ಹಬ್ಬದ ಹಿನ್ನೆಲೆಯಲ್ಲಿ ಶಾಸಕ ಎಚ್‌. ಹಾಲಪ್ಪ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಟಿ.ಡಿ. ಮೇಘರಾಜ್‌, ಸಹಾಯಕ ಆಯುಕ್ತ ಡಾ| ನಾಗರಾಜ್‌ ಎನ್‌., ವಿನಾಯಕ ಮನೇಘಟ್ಟ, ಪಿಡಬ್ಲ್ಯೂ ಡಿ ಇಂಜಿನಿಯರ್‌ ದಿನೇಶ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next