Advertisement

ಗಣಪತಿ ಕೆರೆ ಅಭಿವೃದ್ಧಿಗೆ ಯೋಜನೆ ಸಿದ್ಧ

07:22 PM Jan 05, 2020 | Naveen |

ಸಾಗರ: ಇತಿಹಾಸ ಪ್ರಸಿದ್ಧ ಗಣಪತಿ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ 20 ಕೋಟಿ ರೂ. ವಿಸ್ತೃತ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಎಚ್‌.ಹಾಲಪ್ಪ ತಿಳಿಸಿದರು.

Advertisement

ಇಲ್ಲಿನ ನಗರಸಭೆ ಆವರಣದಲ್ಲಿ ಗಣಪತಿ ಕೆರೆ ಪುನಶ್ಚೇತನ ಹಾಗೂ ಸ್ವತ್ಛತೆ ಕುರಿತು ಸಾರ್ವಜನಿಕರ ಜೊತೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ 4.50 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಇಕ್ಕೆಲಗಳಲ್ಲಿ ವಾಕಿಂಗ್‌ ಪಾಥ್‌ ನಿರ್ಮಾಣ ಕೈಗೊಳ್ಳಲಾಗಿದೆ. ಜತೆಗೆ ಕೆರೆಗೆ ಕೊಳಚೆ ನೀರು ಸೇರದಂತೆ ಬಾಕ್ಸ್‌ ಡ್ರೈನೇಜ್‌ ನಿರ್ಮಿಸಲಾಗಿದೆ. ಕೆರೆಯನ್ನು ಶಾಶ್ವತವಾಗಿ ಸಂರಕ್ಷಿಸುವ ಇನ್ನಷ್ಟು ಯೋಜನೆಗಳಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಜ.11 ಮತ್ತು 12ರಂದು ಗಣಪತಿ ಕೆರೆಗೆ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ಕೆರೆಹಬ್ಬ ಆಯೋಜಿಸಲಾಗಿದೆ. ಕೆರೆಹಬ್ಬ ಅಂಗವಾಗಿ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಕೆರೆಯೊಳಗಿನ ಹೂಳು, ಕಸ ತೆಗೆಯುವ ನಿಟ್ಟಿನಲ್ಲಿ ನುರಿತ ಈಜುತಜ್ಞರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ಸೂಕ್ತ ತರಬೇತಿ ಅಗತ್ಯ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಮತ್ತು ಸರ್ಕಾರದ ಸಹಭಾಗಿತ್ವದೊಂದಿಗೆ ಕೆರೆ ಸ್ವಚ್ಛತೆ ಕೆಲಸ ನಡೆಯುತ್ತದೆ. ಗಣಪತಿ ಕೆರೆಯ ಇನ್ನೊಂದು ಭಾಗದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದು, ಝಿ ಸರಿಗಮಪದ ಹನುಮಂತು ಸೇರಿದಂತೆ ರಾಜ್ಯಮಟ್ಟದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಗಾಯಕರಿಗೂ ಸಹ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ನೂತನ ಸಂತೆಮೈದಾನ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಆಹಾರ ಮೇಳವನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಆಯೋಜಿಸಲಾಗಿದೆ. ಸುಮಾರು 130 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ವೆಜ್‌ ತಿನಿಸುಗಳಿಗೆ ಒಂದು ಭಾಗದಲ್ಲಿ, ನಾನ್‌ವೆಜ್‌ ತಿನಿಸುಗಳ ಮಾರಾಟಕ್ಕೆ ಪ್ರತ್ಯೇಕ ಜಾಗ ಗುರುತಿಸಲಾಗಿದೆ. ಜಿಲ್ಲಾ ಮಟ್ಟದ ಪ್ರೋಮ್ಯಾಟ್‌ ಕಬಡ್ಡಿಯನ್ನು ಜಿಲ್ಲಾ ಕಬಡ್ಡಿ ಅಮೆಚೂರ್‌ ವತಿಯಿಂದ ನಡೆಸಲಾಗುತ್ತದೆ.

ಕಾರ್ಯಕ್ರಮವನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ಆಯೋಜಿಸಲಾಗಿದೆ. ಸಂಸದರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು, ಎಲ್ಲ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಯುವ ಆಲೋಚನೆ ಹೊಂದಲಾಗಿದೆ. ಗಣಪತಿ ಕೆರೆ ಪುನಶ್ಚೇತನಕ್ಕೆ ಇದೊಂದು ಮುನ್ನುಡಿಯಾಗಿದೆ. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

Advertisement

ಮ.ಸ.ನಂಜುಂಡಸ್ವಾಮಿ, ಎಚ್‌.ಕೆ.ಪರಮಾತ್ಮ, ಟಿಪ್‌ಟಾಪ್‌ ಬಶೀರ್‌, ಜಯಲಕ್ಷ್ಮೀ ನಾರಾಯಣಪ್ಪ ಸೇರಿದಂತೆ ಕೆರೆ ಬಗ್ಗೆ ವಿವಿಧ ಸಂಘ-ಸಂಸ್ಥೆ ಪ್ರಮುಖರು ಸಲಹೆ ನೀಡಿದರು. ಸಹಾಯಕ ಆಯುಕ್ತ ಡಾ. ನಾಗರಾಜ್‌ ಎಲ್‌., ಪೌರಾಯುಕ್ತ ರಾಜು ಎಸ್‌., ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್‌ ಉಪಸ್ಥಿತರಿದ್ದರು. ಜಯಪೈ ಮತ್ತು ವೀಣಾ ಪ್ರಭು ಪ್ರಾರ್ಥಿಸಿದರು. ನಾರಾಯಣಮೂರ್ತಿ ಕಾನುಗೋಡು ಸ್ವಾಗತಿಸಿದರು. ಟಿ.ಡಿ.ಮೇಘರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಆರ್‌.ಗಣೇಶಪ್ರಸಾದ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next