Advertisement

ಗಣಪತಿ ಕೆರೆ ವಿವಾದ; ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ?

03:01 PM May 26, 2019 | Team Udayavani |

ಸಾಗರ: ನಗರದ ಇತಿಹಾಸ ಪ್ರಸಿದ್ಧ ಗಣಪತಿ ಕೆರೆಗೆ ಸಂಬಂಧಿಸಿದಂತೆ ಒತ್ತುವರಿ ಸಂಬಂಧ ಎದ್ದಿರುವ ಬಾಕ್ಸ್‌ ಕಾಲುವೆ ವಿವಾದದಲ್ಲಿ ಶಾಸಕ ಎಚ್. ಹಾಲಪ್ಪ ಅವರ ನಿಲುವು ಭಜರಂಗಗ ದಳ, ಮೂಲ ಬಿಜೆಪಿ ಹಾಗೂ ಕೆರೆ ಕುರಿತು ಭಾವನಾತ್ಮಕ ಸಂಬಂಧ ಹೊಂದಿರುವ ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ. ಈ ಅಂಶ ಕೂಡ ಮೇ 29ರಂದು ನಡೆಯಲಿರುವ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಲಾರಂಭಿಸಿದೆ.

Advertisement

ಮಸೀದಿ ಸೇರಿದಂತೆ ವಿವಿಧ ಸಂಸ್ಥೆ ಮತ್ತು ಖಾಸಗಿಯವರಿಂದ ಒತ್ತುವರಿಗಳ ವಿವಾದಕ್ಕೊಳಗಾಗಿರುವ ಗಣಪತಿ ಕೆರೆ ಬಿಜೆಪಿಯ ಹೋರಾಟದ ಹಾದಿಯ ಜೊತೆ ತಳಕು ಹಾಕಿಕೊಂಡಿರುವ ವಿಚಾರ. ಮೊದಲಿನಿಂದಲೂ ಕೆರೆ ಒತ್ತುವರಿಯನ್ನು ತೆರವುಗೊಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿ ಬಿಜೆಪಿಯ ಜೊತೆ ಗಾಢ ಸಂಪರ್ಕ ಹೊಂದಿರುವ ಭಜರಂಗ ದಳ, ವಿಶ್ವಹಿಂದೂ ಪರಿಷತ್‌, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೇ ಮುನ್ನೆಲೆಯಲ್ಲಿ ಇದ್ದಾರೆ. ಇತ್ತೀಚಿನವರೆಗೂ ಅವರೇ ಬಿಜೆಪಿ ಪಕ್ಷದ ನಗರ ರಾಜಕಾರಣವನ್ನೂ ನಡೆಸಿದಂತವರು. ಆದರೆ ಈಗ ಅವರೇ ಕೆರೆ ಉಳಿಸಿ ಹೋರಾಟವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ.

ಗಣಪತಿ ಕೆರೆ ಒತ್ತುವರಿಯಾಗಿರುವುದು ಸಂಶಯಾತೀತ. ಅದರ ಅಳತೆಯು ಒಂದು ಅಂದಾಜಿನ ಪ್ರಕಾರ 24 ಎಕರೆಗಿಂತಲೂ ಹೆಚ್ಚಿನ ವಿಸ್ತಾರವನ್ನು ಹೊಂದಿತ್ತು. ಈಗಿನ ಕೆರೆ ಎಲ್ಲಾ ಭಾಗದಲ್ಲಿಯೂ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸಲು ಹೈಕೋರ್ಟ್‌ನಲ್ಲಿ ದಾವೆ ಹೂಡಿ ಯಶ ಪಡೆದ ಕೆರೆ ಹೋರಾಟ ಸಮಿತಿಗೆ ಇತ್ತೀಚಿನ ದಿನಗಳಲ್ಲಿ ಶಾಸಕ ಹಾಲಪ್ಪ ಅವರ ತೀರ್ಮಾನಗಳು ಅಪಥ್ಯವಾಗಲಾರಂಭಿಸಿವೆ. ಕೆರೆ ಅಭಿವೃದ್ಧಿಗೆ ವಿವಿಧ ಮೂಲಗಳಿಂದ ಅನುದಾನ ತರಬಹುದು. ಇದರಿಂದ ವಾಕಿಂಗ್‌ ಟ್ರ್ಯಾಕ್‌, ದೋಣಿ ವಿಹಾರ ಮೊದಲಾದ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬಹುದು ಎಂಬ ಅಭಿಪ್ರಾಯ ಹೊಂದಿರುವ ಹಾಲಪ್ಪ ಅವರಿಗೆ ಈಗಿರುವ ಸ್ಥಿತಿಯಲ್ಲಿನ ಗಣಪತಿ ಕೆರೆ ಕೈಗೆ ಸಿಕ್ಕರೆ ಸಾಕು ಎಂಬ ಮನಃಸ್ಥಿತಿಯಲ್ಲಿದ್ದಾರೆ. ಈಗಾಗಲೇ ಅವರು 19 ಕೋಟಿ ರೂ. ಬಜೆಟ್‌ನ ಕ್ರಿಯಾಯೋಜನೆಯನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳಿಂದ ನಡೆದಿರುವ ಹೋರಾಟದಲ್ಲಿ ಆರ್‌ಎಸ್‌ಎಸ್‌, ಬಿಜೆಪಿ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಅವರೆಲ್ಲ ಅಖಂಡ ಗಣಪತಿ ಕೆರೆಯ ಪ್ರತಿಪಾದಕರು. ಕೇಂದ್ರದಿಂದ 19 ಕೋಟಿ ರೂ. ಅನುದಾನ ಸಿಗುತ್ತದೆ ಎಂಬ ಕಾರಣಕ್ಕೆ ಕೆರೆ ಒತ್ತುವರಿಯ ವಿವಾದವನ್ನೇ ಕೈಬಿಡುವುದರ ಕುರಿತು ಅವರಿಂದ ಆಕ್ಷೇಪ ವ್ಯಕ್ತವಾಗಿದೆ. ಇಕ್ಕೇರಿ ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಗಣಪತಿ ಕೆರೆಯ ಸುತ್ತಳತೆಯನ್ನು ಗುರುತಿಸಲು ಅದರ ಸುತ್ತ ಬಾಂದು ಕಲ್ಲುಗಳಿವೆ. ಕೆರೆಯಲ್ಲಿ ಆಗಿನ ಕಾಲದಲ್ಲಿ ಬಟ್ಟೆ ತೊಳೆಯಲು ಅಳವಡಿಸಿದ ಮೆಟ್ಟಲು ಕಲ್ಲುಗಳ ಕುರುಹುಗಳು ಇವೆ. ಆದರೆ ಈಗ ಕೆಲವು ದಿನಗಳಿಂದ ಕೆರೆಯ ಸುತ್ತ ಬಾಹ್ಯ ನೀರು ಕೆರೆ ಪ್ರವೇಶಿಸದಂತೆ ಮಾಡಲು ಬಾಕ್ಸ್‌ ಚರಂಡಿ ಮಾಡುವ ಸುಮಾರು 43.26 ಲಕ್ಷದ ಕಾಮಗಾರಿಯ ಕೆಲಸ ನಡೆಯುತ್ತಿದೆ. ಬಾಕ್ಸ್‌ ಚರಂಡಿ ಪಕ್ಕದಲ್ಲಿ ವಾಕಿಂಗ್‌ ಪಾತ್‌ ನಿರ್ಮಾಣ ಆಗುವುದರಿಂದ ಗಣಪತಿ ದೇವಸ್ಥಾನದ ಭಾಗದಲ್ಲಿ ಈಗಾಗಲೇ ಆಗಿರುವ ಒತ್ತುವರಿ ಸಕ್ರಮಗೊಳಿಸಿದಂತಾಗುತ್ತದೆ. ನಾವು ಇಲ್ಲಿಯವರೆಗೆ ಮಾಡಿದ ಹೋರಾಟವನ್ನು ಕೆರೆಯ ನೀರಿನಲ್ಲಿ ತೊಳೆದಂತಾಗುತ್ತದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಐ.ವಿ. ಹೆಗಡೆ ಬೇಸರ ವ್ಯಕ್ತಪಡಿಸುತ್ತಾರೆ.

ಚುನಾವಣೆಗೆ ಪ್ರಭಾವ: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸುಮಾರು 16 ವಾರ್ಡ್‌ ಗಳಲ್ಲಿ ನೇರವಾಗಿಯೇ ಬಂಡಾಯದ ಬಿಸಿ ಅನುಭವಿಸುತ್ತಿದೆ. ಆ ಪಕ್ಷದಿಂದ ಬಂಡಾಯವೆದ್ದ ಬಹುಸಂಖ್ಯಾತರು ಬಹಳ ವರ್ಷಗಳಿಂದ ಬಿಜೆಪಿ ಜೊತೆ ಗುರುತಿಸಿಕೊಂಡವರು. ಗಣಪತಿ ಕೆರೆ ಉಳಿಸಿ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡವರು. ಒಂದೊಮ್ಮೆ ಕೆರೆ ಉಳಿಸಿ ಹೋರಾಟದಲ್ಲಿ ಶಾಸಕ ಹಾಲಪ್ಪ ಜನಪರ ನಿಲುವು ತೋರ್ಪಡಿಸದಿದ್ದರೆ ಬಂಡಾಯ ಅಭ್ಯರ್ಥಿಗಳು ತಮ್ಮ ಅನುಕೂಲದ ಸರಕನ್ನಾಗಿ ಇದನ್ನು ಮಾರ್ಪಡಿಸಿಕೊಳ್ಳಬಹುದು. ಪ್ರಚಾರದ ಸಂದರ್ಭದಲ್ಲಿ ತಾವು ಕೆರೆ ಉಳಿಸಿ ಹೋರಾಟದ ಪರ ಎಂದು ಸಾರಬಹುದು. ಅನ್ಯ ಕೋಮಿನ ಒತ್ತುವರಿಯನ್ನು ನಾವು ತೆರವುಗೊಳಿಸಿಯೇ ಸಿದ್ಧ ಎಂದು ಹಿಂದೂ ಮತದಾರರನ್ನು ಒಳಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಮುಂದಿನ ಮೂರು ದಿನಗಳಲ್ಲಿ ಈ ಒತ್ತುವರಿ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ಹೊಂದದಿದ್ದರೆ ಅದರ ಲಾಭ ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಲಭಿಸಲಿದೆ ಎಂದು ಆ ಪಕ್ಷದ ಮೂಲಗಳೇ ಒಪ್ಪಿಕೊಳ್ಳುತ್ತಿವೆ. ಮತದಾರ ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿರುವುದರಿಂದ ಬಿಜೆಪಿಗೆ ತಲೆಬಿಸಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next