Advertisement

ಒಗ್ಗಟ್ಟು ಪ್ರದರ್ಶಿಸಿದ ಕಾಗೋಡು- ಹಾಲಪ್ಪ!

01:27 PM Aug 03, 2019 | Naveen |

ಸಾಗರ: ಎರಡು ವಿಭಿನ್ನ ಮನೋಧರ್ಮದ ಪಕ್ಷದಲ್ಲಿದ್ದರೂ ಹಿರಿಯ ಕಾಂಗ್ರೆಸ್ಸಿಗ ಕಾಗೋಡು ತಿಮ್ಮಪ್ಪ ಹಾಗೂ ಹಾಲಿ ಶಾಸಕ ಎಚ್. ಹಾಲಪ್ಪ ತಮ್ಮ ನಡುವಿನ ವಿರೋಧ, ಪ್ರತಿಭಟನೆಗಳು ವಿಷಯಾಧಾರಿತ ಎಂಬುದನ್ನು ಪ್ರತಿಪಾದಿಸುವಂತೆ ಪರಸ್ಪರರು ಎದುರಾದಾಗ ಗೌರವ ಹಂಚಿಕೊಳ್ಳುವ ಸಂಸ್ಕೃತಿಯನ್ನು ಮನೋಭಾವವನ್ನು ವ್ಯಕ್ತಪಡಿಸಿದುದು ಶುಕ್ರವಾರ ಗಮನ ಸೆಳೆಯಿತು.

Advertisement

ನಗರದ ಈಡಿಗರ ಸಂಘದ ವತಿಯಿಂದ ಶಾಸಕ ಎಚ್. ಹಾಲಪ್ಪ ಅವರ ಅಭಿನಂದನೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಹಾಲಪ್ಪ ಅವರ ಹೆಗಲ ಮೇಲೆ ಕಾಗೋಡು ಆತ್ಮೀಯವಾಗಿ ಕೈಯಿರಿಸಿ ಮಾತನಾಡುತ್ತಿದ್ದ ದೃಶ್ಯ ಕಂಡುಬಂದಿತು. ಈ ಸಂದರ್ಭದಲ್ಲಿ ಕಾಗೋಡು, ತಮ್ಮಾ, ನಮ್ಮ ತಾಲೂಕು ಕಚೇರಿಯ ನೂತನ ಕಟ್ಟಡದ ಕಾಮಗಾರಿಯನ್ನು ಆದಷ್ಟು ಬೇಗ ಶುರು ಮಾಡಿಸೋ ಮಾರಾಯ. ಈಗಾಗಲೇ ಟೆಂಡರ್‌ ಕರೆದು ಬಹಳ ದಿನವಾಗಿದೆ. ಇನ್ನು ತಡ ಮಾಡಬೇಡ. ಕೆಲಸ ಆರಂಭ ಮಾಡಿಸು ಎಂದು ಏಕವಚನದಲ್ಲಿಯೇ ಸೂಚಿಸಿದರು.

ಇದಕ್ಕೆ ಹಾಲಪ್ಪ ಪ್ರತಿಕ್ರಿಯಿಸಿ, ಇಲ್ಲ ಸರ್‌, ಕೂಡಲೇ ಆರಂಭಿಸುತ್ತೇನೆ. ನೀವು ಎರಡು ಅಂತಸ್ತು ಕಟ್ಟಡಕ್ಕೆ ಯೋಜನೆ ರೂಪಿಸಿದ್ದೀರಿ. ನಾನು ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಶುರು ಮಾಡಿಸಲಿಲ್ಲ. ಇನ್ನು ತಡ ಮಾಡುವುದಿಲ್ಲ, ಆರಂಭ ಮಾಡಿಸುತ್ತೇನೆ ಎಂದು ಹೇಳಿದರು.

ಹಾಲಿ ಶಾಸಕ ಹಾಗೂ ಕಳೆದ ಚುನಾವಣೆಯಲ್ಲಷ್ಟೇ ಹಾಲಪ್ಪ ಅವರಿಂದ ಸೋಲುಂಡ ಮಾಜಿ ಸಚಿವರ ಆತ್ಮೀಯ ಸಂಭಾಷಣೆಯ ಸಂದರ್ಭದಲ್ಲಿ ಅಲ್ಲಿದ್ದ ಹಲವರಿಗೆ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಬಿಜೆಪಿಯಲ್ಲಿದ್ದಾಗ ಹಾಲಪ್ಪ ಕಾಂಗ್ರೆಸ್‌ನ ಕಾಗೋಡು ಜೊತೆ ಕಾಫಿ ಕುಡಿದು ದೋಸ್ತಿ ರಾಜಕೀಯ ಮಾಡುತ್ತಾರೆ. ಐಬಿಗೆ ಬಂದು ಹುಟ್ಟುಹಬ್ಬದ ಶುಭಾಶಯ ಹೇಳುತ್ತ ಕಾಂಗ್ರೆಸ್‌ ಸೇರುತ್ತಾರೆ ಎಂದು ಆರೋಪಿಸುತ್ತಿದ್ದು ನೆನಪಾಯಿತು. ಆ ಸಮಯದಲ್ಲಿ ಹಾಲಪ್ಪ ದಿಢೀರ್‌ ಪತ್ರಿಕಾಗೋಷ್ಠಿ ಕರೆದು ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರೆ, ಆರೋಪಿಸಿದ್ದ ಬೇಳೂರು ಈಗ ಕಾಂಗ್ರೆಸ್‌ನಲ್ಲಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next