ಸಾಗರ: ಕೆರೆಬಾವಿಗಳ ಜಲಮೂಲಗಳು ಬತ್ತಿ ಹೋಗುತ್ತಿದ್ದು ಜಾನುವಾರುಗಳಿಗೆ ನೀರಿಲ್ಲದೇ ಪರದಾಡುತ್ತಿರುವ ಸ್ಥಿತಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೊಳವೆ ಬಾವಿಗೆ ಮೊರೆ ಹೋಗಿರುವ ತಾಲೂಕಿನ ತ್ಯಾಗರ್ತಿ ಭಾಗದ ರೈತರು ನೀರು ಲಭ್ಯವಿದ್ದರೂ ವಿದ್ಯುತ್ ಸಮಸ್ಯೆಯಿಂದ ಪಂಪ್ ಚಲಾಯಿಸಲು ಸಾಧ್ಯವಾಗದೆ ಕಣ್ಣೆದುರಿನಲ್ಲಿಯೇ ವಿವಿಧ ಬೆಳೆ ನಾಶದಿಂದ ತತ್ತರಿಸಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದ ರೈತರು ಜೀವನ ಮಟ್ಟ ಸುಧಾರಿಸಿಕೊಳ್ಳಲು ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ನೀರಿದ್ದರೂ ಈ ಭಾಗದ ರೈತರ ದೀರ್ಘಾವಧಿ ತೋಟಗಾರಿಕಾ ಬೆಳೆಗಳು ಒಣಗುತ್ತಿದ್ದು ಇಲ್ಲಿನ ಪರಿಸ್ಥಿತಿ ಅಕ್ಷರಶಃ ಭೀಕರ ಬರಗಾಲವನ್ನು ಎದುರಿಸುವಂತಾಗಿದೆ. ವಿದ್ಯುತ್ ಸಮಸ್ಯೆ ಪರಿಹರಿಸಲು ಈಗಾಗಲೇ ರೈತರು ಮೆಸ್ಕಾಂಗೆ ಹಲವು ಬಾರಿ ಮನವಿ ಕೊಟ್ಟಿದ್ದರೂ ಹಾಗೂ ಪ್ರತಿಭಟನೆ ನಡೆಸಿದ್ದರೂ ಸಹ ರೈತರ ಗೋಳು ಕೇಳುವವರಿಲ್ಲದಂತಾಗಿದೆ.
ಚಿಕ್ಕಬಿಲಗುಂಜಿ ಗ್ರಾಮದಲ್ಲಿ 63 ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಳಾಗಿ 10 ದಿನ ಕಳೆದರೂ ಬದಲಾಯಿಸಲಿಲ್ಲ. ಮೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದರೆ ಟ್ರಾನ್ಸ್‌ಫಾರ್ಮರ್ ಕೊರತೆ ಇದೆ. ಅದಕ್ಕೆ ಹಾಕುವ ಆಯಿಲ್ ಪೂರೈಕೆ ಇಲ್ಲ. ನಾಳೆ ಸರಿ ಮಾಡುತ್ತೇವೆ ಎಂದು ದಿನ ಕಳೆಯುತ್ತಾರೆ. ಟ್ರಾನ್ಸ್‌ಫಾರ್ಮರ್ ಹಾಳಾಗಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂಬುದು ರೈತರ ಗೋಳಾಗಿದೆ.
ಈ ಭಾಗದಲ್ಲಿ ಟ್ರಾನ್ಸ್‌ಫಾರ್ಮರ್ ಹಾಳಾದರೆ 15 ದಿನ ಕಳೆದರೂ ದುರಸ್ತಿ ಮಾಡುತ್ತಿಲ್ಲ. ವಿದ್ಯುತ್ ವೋಲೆrೕಜ್ ಇಲ್ಲದೇ ಕೊಳವೆ ಬಾವಿಯ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಕುಡಿಯುವ ನೀರಿನ ಪೂರೈಕೆಗೆ ಇದರಿಂದ ವ್ಯತ್ಯಯ ಉಂಟಾಗಿದೆ. ತ್ಯಾಗರ್ತಿಯಲ್ಲಿ 110 ಕೆವಿ ವಿದ್ಯುತ್ ವಿತರಣಾ ಉಪ ಕೇಂದ್ರ ಮಂಜೂರಾಗಿದ್ದರೂ ಸಹ ತಾಂತ್ರಿಕ ಸಮಸ್ಯೆಯಿಂದಾಗಿ ಯಾವುದೇ ಕೆಲಸ ಪ್ರಾರಂಭವಾಗಿಲ್ಲ. ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಸಮರ್ಪಕ ವಿದ್ಯುತ್ ಪೂರೈಕೆಯ ಸಮಸ್ಯೆಯಿಂದಾಗಿ ಜನರಿಗೆ ಸರಿಯಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಿರೇಬಿಲಗುಂಜಿ ಗ್ರಾಪಂ ಪಿಡಿಒ ಆಶ್ಪಾಕ್ ಅಹಮದ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ತ್ಯಾಗರ್ತಿ ಭಾಗದಲ್ಲಿ ಇದುವರೆಗೆ ಸರಿಯಾಗಿ ಮಳೆ ಬೀಳದೇ ಇದ್ದುದರಿಂದ ಕಾಳ್ಗಿಚ್ಚು ಅಪಾಯ ಕಾಡುತ್ತಿದೆ. ಇನ್ನೂ ಒಂದೂವರೆ ತಿಂಗಳ ಬೇಸಿಗೆಯನ್ನು ಕಳೆಯುವುದು ಹೇಗೆ ಎಂಬ ಚಿಂತೆ ರೈತರದ್ದಾಗಿದ್ದು ನೆಮ್ಮದಿ ಇಲ್ಲದೇ ದುಡಿಯುವ ರೈತರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಗುಣಮಟ್ಟದ ವಿದ್ಯುತ್ ನೀಡಿದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಟ್ರಾನ್ಸ್‌ಫಾರ್ಮರ್ ಹಾಳಾಗಿ ವಾರ ಕಳೆದರೂ ದುರಸ್ತಿ ಮಾಡುವುದಿಲ್ಲ. ರೈತರು ಬೆಳೆ ಉಳಿಸಿಕೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಟ್ಟು ಟ್ರಾನ್ಸ್‌ಫಾರ್ಮರ್ ಹಾಕಿಸಬೇಕಾಗಿದೆ ಎಂದು ಪ್ರಗತಿಪರ ರೈತ ರಾಜಾರಾಂ ಬಿಲಗುಂಜಿ ಆಕ್ರೋಶ ವ್ಯಕ್ತಪಡಿಸಿದರು.