Advertisement

ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಮುಖ್ಯ

05:33 PM Jun 08, 2019 | Naveen |

ಸಾಗರ: ಕೆನರಾ ಬ್ಯಾಂಕ್‌ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. 62 ವರ್ಷಗಳ ಹಿಂದೆ ತನ್ನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹುಟ್ಟುಹಾಕಿದ ಕೆನರಾ ಬ್ಯಾಂಕ್‌ ಜ್ಯುಬಿಲಿ ಎಜುಕೇಶನ್‌ ಫಂಡ್‌ನ‌ಂತ ಸಂಸ್ಥೆಯನ್ನು ಹುಟ್ಟುಹಾಕಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸಹಾಯ ಗುರುತರವಾಗಿದೆ ಎಂದು ಕೆನರಾ ಬ್ಯಾಂಕ್‌ನ ಮಂಗಳೂರು ಮುಖ್ಯ ಕಚೇರಿಯ ಡಿಜಿಎಂ ಬಾಲಮುಕುಂದ ಶರ್ಮ ತಿಳಿಸಿದರು.

Advertisement

ತಾಲೂಕಿನ ಸಿರಿವಂತೆಯ ಸರ್ಕಾರಿ ಪಪೂ ಕಾಲೇಜಿನಲ್ಲಿ ಪಪೂ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸುವ ಸುಮಾರು ಮೂರೂವರೆ ಲಕ್ಷ ರೂ. ವೆಚ್ಚದ ಯೋಜನೆಯಡಿ ಕೆನರಾ ಬ್ಯಾಂಕ್‌ ಟೆಕ್ಟ್ಬುಕ್‌ ಬ್ಯಾಂಕ್‌ನ್ನು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಿಂದೆ ಉಳಿಯಬಾರದು ಎಂಬ ನಿಲುವಿಗನುಸಾರವಾಗಿ ಸಹಾಯ ಹಸ್ತ ಚಾಚಲು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕ ವ್ಯವಹಾರದ ಬ್ಯಾಂಕ್‌ನ ಮುಖ ಪರಿಚಯ ಜನರಿಗಿರುವಂತೆ ಈ ಸಾಮಾಜಿಕ ಕಾಳಜಿಯ ಸ್ವರೂಪವೂ ಜನರಿಗೆ ಮನವರಿಕೆಯಾಗಬೇಕಾಗಿದೆ ಎಂದರು.

ಬೆಂಗಳೂರಿನ ಕೆನರಾ ಬ್ಯಾಂಕ್‌ ಜ್ಯುಬಿಲಿ ಎಜುಕೇಶನ್‌ ಫಂಡ್‌ನ‌ ಅಧ್ಯಕ್ಷ ಎಚ್.ಎಂ. ಬಸವರಾಜ್‌ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಿ ಮಾತನಾಡಿ, ನಮ್ಮ ಸಂಸ್ಥೆ ಕೆನರಾ ಬ್ಯಾಂಕ್‌ನ ಆರ್ಥಿಕ ಸಹಕಾರದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸುವ ಯೋಜನೆಯನ್ನು ಬ್ಯಾಂಕ್‌ನ ಲೀಡ್‌ ಜಿಲ್ಲೆಗಳಾದ ಹಾಸನ, ಕೋಲಾರ ಹಾಗೂ ಶಿವಮೊಗ್ಗದಲ್ಲಿ ಈ ವರ್ಷ ಜಾರಿಗೆ ತಂದಿದೆ. ಸರಿಸುಮಾರು ಒಂದು ಸಾವಿರ ರೂ.ಗೂ ಮಿಕ್ಕಿ ವೆಚ್ಚ ತಗುಲುತ್ತಿದ್ದ ಪಠ್ಯ ಪುಸ್ತಕಗಳು ಉಚಿತವಾಗಿ ಲಭ್ಯವಾಗುವುದು ಪೋಷಕರನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕದಂತೆ ನೋಡಿಕೊಳ್ಳುತ್ತದೆ ಎಂಬುದು ನಮ್ಮ ಅಭಿಪ್ರಾಯ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ತಾಲೂಕಿನ ಸಿರಿವಂತೆಯ ಪಪೂ ಕಾಲೇಜು ವಿದ್ಯಾರ್ಥಿಗಳು ಈ ಅನುಕೂಲವನ್ನು ಅತ್ಯುತ್ತಮ ಅಂಕಗಳಲ್ಲಿ ಪ್ರತಿಫಲ ಕೊಡುವಂತಾಗಬೇಕು ಎಂದರು.

ಕಾಲೇಜಿನ ಅಭಿವೃದ್ಧಿ ಸಮಿತಿಯ ವೆಂಕಟೇಶ್‌ ಪ್ರಭು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್‌ ಶಿವಮೊಗ್ಗದ ವಲಯಾಧಿಕಾರಿ ಕೆ. ರಾಘವೇಂದ್ರರಾವ್‌ ಕನಾಲ, ಶಿವಮೊಗ್ಗ ಕೆನರಾ ಬ್ಯಾಂಕ್‌ನ ಡಿವಿಜಿನಲ್ ಮ್ಯಾನೇಜರ್‌ ಸಾಲೋಮನ್‌ ಮೆನೇಜಸ್‌, ಅಧಿಕಾರಿ ಶ್ರೀಕಾಂತ್‌, ಕೆಬಿಜೆಇಎಫ್‌ ಸಂಸ್ಥೆಯ ಕಿರಣ್‌ರಾವ್‌, ಅಭಿವೃದ್ಧಿ ಸಮಿತಿಯ ಸುರೇಶ್‌, ವೀರಪ್ಪ ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ಸಿರಿವಂತೆ ಪಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಚೆಕ್‌ ವಿತರಿಸಲಾಯಿತು. ಮಂಗಳಾ ಹೆಗಡೆ ಪ್ರಾರ್ಥಿಸಿದರು. ಕಾಲೇಜು ಪ್ರಾಚಾರ್ಯ ಕೆ. ಮಂಜಪ್ಪ ಸ್ವಾಗತಿಸಿದರು. ಕೆನರಾ ಬ್ಯಾಂಕ್‌ ಜ್ಯುಬಿಲಿ ಎಜುಕೇಶನ್‌ ಫಂಡ್‌ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ಕೆ.ಎ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಆರ್‌. ನಾಯ್ಕ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next