Advertisement

ಸಾಗರ : ದಾಖಲಾಗದ ಎಫ್‌ಐಆರ್ ; ಪೊಲೀಸ್ ವೈಫಲ್ಯದ ವಿರುದ್ಧ ಜು. 14 ರಂದು ಪ್ರತಿಭಟನೆ

04:30 PM Jul 12, 2022 | Team Udayavani |

ಸಾಗರ : ಮಾರ್ಚ್ 13ರಂದು ಶ್ರೀಪಾದ ಹೆಗಡೆ ಮತ್ತು ಜಗದೀಶ್ ಗೌಡ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲು ಮಾಡದ ಪೊಲೀಸ್ ವೈಫಲ್ಯವನ್ನು ಖಂಡಿಸಿ ಜು. 14 ರಂದು ಬ್ರಾಹ್ಮಣ ಮತ್ತು ವೀರಶೈವ ಒಕ್ಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯವಾದಿ ಕೆ.ಎನ್.ಶ್ರೀಧರ್ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಂದವರಿಗೆ ನ್ಯಾಯ ಕೊಡಬೇಕಾಗಿದ್ದ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಹಿಂಸೆಯನ್ನು ವಿರೋಧಿಸುವ ಎಲ್ಲ ಸಂಘ ಸಂಸ್ಥೆಗಳು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಎಂಡಿಎಫ್ ಉಳಿಸಿ, ಶ್ರೀಪಾದ ಹೆಗಡೆ ಬಂಧಿಸಿ ಎಂದು ಒಂದು ಗುಂಪು ಕರಪತ್ರ ಹಂಚುವ ಮೂಲಕ ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ. ಶ್ರೀಪಾದ ಹೆಗಡೆ ಮಾಡಿರುವ ತಪ್ಪು ಏನೆಂದು, ಅವರು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತ ದಾಖಲೆ ಬಿಡುಗಡೆ ಮಾಡಲಿ. ಶ್ರೀಪಾದರ ಹಿಂದೆ ಮಾಜಿ ಶಾಸಕರೊಬ್ಬರಿದ್ದಾರೆಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಆ ಶಾಸಕರು ಯಾರೆಂದು ಕರಪತ್ರ ಹಂಚಿ, ಪ್ರತಿಭಟನೆ ನಡೆಸುತ್ತಿರುವವರು ಸಾರ್ವಜನಿಕರಿಗೆ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

2016ರಲ್ಲಿ ನಿಸ್ರಾಣಿ ಎಂಡಿಎಫ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹಿಂದೆ ಕೆ.ಎಚ್.ಶ್ರೀನಿವಾಸ್ ಅಧ್ಯಕ್ಷರಾಗಿದ್ದರು. ಹರನಾಥ್‌ರಾವ್ ಉಪಾಧ್ಯಕ್ಷರಾಗಿದ್ದರು. ಆಗಲೇ ಹೊಸ ಸದಸ್ಯರನ್ನು ತಲಾ 25 ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡಿ ನೇಮಕ ಮಾಡಿಕೊಳ್ಳಲಾಗಿದೆ. ಹೀಗೆ ಸದಸ್ಯತ್ವ ಮಾಡಲು ಸಿ.ಎಂ.ಎನ್.ಶಾಸ್ತ್ರಿ 10 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಶ್ರೀಪಾದ ಹೆಗಡೆ ಕಾನೂನಾತ್ಮಕವಾಗಿ ಇದ್ದಾರೆಂದು ಕೆಲವರು ಕರಪತ್ರ ಹಂಚುವುದು, ಪ್ರತಿಭಟನೆ ನಡೆಸುತ್ತೇವೆಂದು ಬ್ಲಾಕ್‌ಮೇಲ್ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಶ್ರೀಪಾದ ಹೆಗಡೆ ವಿರುದ್ಧ ಅಪಪ್ರಚಾರದ ಕರಪತ್ರ ಹಂಚಿರುವ ನಾಲ್ಕು ಜನರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಇದನ್ನೂ ಓದಿ : ರೈಲ್ವೆ ಸವಾಲು ಪರಿಹಾರಕ್ಕಾಗಿ ನವೋದ್ಯಮಕ್ಕೆ ಉತ್ತೇಜನ

Advertisement

ಶ್ರೀಪಾದ ಹೆಗಡೆ ನಿಸ್ರಾಣಿ ಮಾತನಾಡಿ, ನಾನು ಎಂಡಿಎಫ್ ಉಪಾಧ್ಯಕ್ಷನಾಗಿ ಮಾಡಿದ ಅಭಿವೃದ್ಧಿಗೆ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗುತ್ತಿದೆ. ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು ಕುಮ್ಮಕ್ಕಿನಿಂದಲೇ ಇದೆಲ್ಲಾ ನಡೆಯುತ್ತಿದೆ. ಹರನಾಥ್‌ರಾವ್ ನೇತೃತ್ವದ ಸಮಿತಿಯೇ ಅಧಿಕೃತ ಎಂದು ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ಆದರೆ ನ್ಯಾಯಾಲಯ ಮೂರು ವಾರದಲ್ಲಿ ಅಧಿಕೃತ ಆಡಳಿತ ಮಂಡಳಿ ತೀರ್ಮಾನ ಮಾಡಲು ಜಿಲ್ಲಾ ನೊಂದಣಾಧಿಕಾರಿಗಳಿಗೆ ಸೂಚನೆ ನೀಡಿದೆ. ನನ್ನ ಮೇಲೆ ಮತ್ತು ಜಗದೀಶ್‌ಗೌಡ ಅವರ ಮೇಲೆ ನಡೆದ ರಾಜಕೀಯ ಪ್ರೇರಿತ ದೌರ್ಜನ್ಯಕ್ಕೆ ನ್ಯಾಯ ಕೇಳುವುದು ತಪ್ಪಾ ಎಂದು ಪ್ರಶ್ನಿಸಿದ ಅವರು, ಈತನಕ ಎಫ್‌ಐಆರ್ ಸಹ ದಾಖಲು ಮಾಡದೆ ಇರುವುದು ಖಂಡನೀಯ ಎಂದರು.

ನನ್ನ ಮೇಲೆ ಆಗಿರುವ ದೌರ್ಜನ್ಯ ಕುರಿತು ತಾಲೂಕಿನ ಮನೆಮನೆಗೆ ಪಾದಯಾತ್ರೆ ಮೂಲಕ ತೆರಳಿ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ. ನನ್ನ ಮೇಲೆ ಆರೋಪ ಮಾಡುವವರು ಬಹಿರಂಗ ಚರ್ಚೆಗೆ ಬರಲಿ. ನೆಹರೂ ಮೈದಾನದಲ್ಲಿ ಇದಕ್ಕಾಗಿ ವೇದಿಕೆ ತಯಾರಿಸಲು ಸಿದ್ಧನಿದ್ದೇನೆ. ಶಾಸಕರು ಬಂದು ನೇರವಾಗಿ ಚರ್ಚೆ ನಡೆಸಲಿ. ಹಿಂದೆ ಸಹ ಹರತಾಳು ಹಾಲಪ್ಪ ಸೊರಬ ಶಾಸಕರಾಗಿದ್ದಾಗ ಮಹಾಬಲೇಶ್ವರ ಹೆಗಡೆ ಮತ್ತು ಉಮಾಪತಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಈಚೆಗೆ ಆವಿನಹಳ್ಳಿಯ ಶಶಿಗೌಡ ಎಂಬುವವರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಅಪಪ್ರಚಾರದ ಕರಪತ್ರ ಹಂಚಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಅರುಣಕುಮಾರ್, ಚಂದ್ರಶೇಖರ್ ಎನ್.ಎಚ್., ದಳವಾಯಿ ದಾನಪ್ಪ, ಪ್ರದೀಪ್ ಬರಿಗೆ, ರಜನೀಶ್ ಹೆಗಡೆ, ನಟರಾಜ್, ಕೃಷ್ಣಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next